ಮಾನಸಿಕ ಆರೋಗ್ಯದ ಮಹತ್ವ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಮಾದರಿಯಲ್ಲಿ ಬೇರೆ ರಾಜ್ಯಗಳಲ್ಲಿಯೂ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗಳ ಸ್ಥಾಪನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಆಸಕ್ತಿ ತೋರಿರುವುದು ಸ್ವಾಗತಾರ್ಹ. ಇದಕ್ಕಾಗಿ ನಿಮ್ಹಾನ್ಸ್ ವೈದ್ಯರ ನೆರವನ್ನು ಸಚಿವರು ಕೋರಿದ್ದಾರೆ. ಈ ಸಂಬಂಧದ ಕರಡು ಯೋಜನೆ ಸಿದ್ಧವಾದಲ್ಲಿ ಇದನ್ನು ಕೇಂದ್ರದ ಮುಂದಿಟ್ಟು ಚರ್ಚೆಗಳನ್ನು ಆರಂಭಿಸುವ ಇರಾದೆಯನ್ನು ಅವರು ಪ್ರಕಟಿಸಿದ್ದಾರೆ. ಮಾನಸಿಕ ಆರೋಗ್ಯದ ಬಗೆಗೆ ಅಷ್ಟೇನೂ ಜಾಗೃತಿ ಇಲ್ಲದ ರಾಷ್ಟ್ರ ನಮ್ಮದು. ಹೀಗಾಗಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ಯೋಜನೆ ಪ್ರಸ್ತುತವಾದದ್ದು. ಆದರೆ ಇಂತಹ ಯೋಜನೆ ರೂಪು ತಳೆಯುವುದಕ್ಕೇ ಸಾಕಷ್ಟು ಕಾಲ ಹಿಡಿಯುವಂತಹದ್ದು. ಹೀಗಾಗಿ, ಪ್ರತಿ ರಾಜ್ಯದ ಉನ್ನತ ವೈದ್ಯಕೀಯ ಕಾಲೇಜುಗಳಲ್ಲಿಯೇ ಪ್ರತ್ಯೇಕ ಮಾನಸಿಕ ಆರೋಗ್ಯ ಇಲಾಖೆಗಳನ್ನು ತೆರೆಯುವ ಬಗ್ಗೆ ಕೇಂದ್ರ ತೋರಿರುವ ಆಸಕ್ತಿ ಹೆಚ್ಚು ಕಾರ್ಯಸಾಧು. ಇದಕ್ಕಾಗಿ ಇಂತಹ ಕಾಲೇಜುಗಳ ವೈದ್ಯರು ಹಾಗೂ ನರ್ಸ್‌ಗಳ ತರಬೇತಿಗೆ ನಿಮ್ಹಾನ್ಸ್‌ನಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಆಲೋಚನೆಯೂ ಒಳ್ಳೆಯದೆ. ರಾಷ್ಟ್ರದಲ್ಲಿ ಸದ್ಯಕ್ಕೆ ನಮಗೆ ಲಭ್ಯವಿರುವ ತರಬೇತಿ ಪಡೆದ ಮನೋವೈದ್ಯರ ಸಂಖ್ಯೆ ಕೇವಲ 3800. ಆದರೆ ನಮಗೆ ಅಂದಾಜು 11,500 ಮನೋವೈದ್ಯರ ಅಗತ್ಯ ಇದೆ. ಎಂದರೆ ವೈದ್ಯರು ಮತ್ತು ರೋಗಿಗಳ ನಡುವಿನ ಅನುಪಾತದ ಅಸಮತೋಲನ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಊಹಿಸಬಹುದು. ಮಾನಸಿಕ ಕಾಯಿಲೆಗಳಿಗೆ ಭೂತ ಪ್ರೇತಗಳ ಚೇಷ್ಟೆಗಳೇ ಕಾರಣ ಎಂಬಂಥ ಮೂಢನಂಬಿಕೆ ವ್ಯಾಪಕವಾಗಿರುವ ಸಮಾಜ ನಮ್ಮದು. ಇದರ ಜೊತೆಗೆ ನಗರಕೇಂದ್ರಿತ ಆಧುನಿಕ ಬದುಕಿನ ಒತ್ತಡಗಳು ವಿವಿಧ ಬಗೆಯ ಮಾನಸಿಕ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದನ್ನೂ ಕಾಣುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ಮಾನಸಿಕ ಆರೋಗ್ಯ ಕುರಿತಂತೆ ಜಾಗೃತಿ ಮೂಡಿಸುವುದಲ್ಲದೆ ಮನೋವೈದ್ಯರ ಪ್ರಮುಖ ಪಾತ್ರದ ಬಗೆಗೂ ಹೆಚ್ಚಿನ ಪ್ರಚಾರ ಅಗತ್ಯ. ಕಳೆದ ವಾರವಷ್ಟೇ `ಬೆಂಗಳೂರಿನ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ ಮಸೂದೆ, 2010~ಕ್ಕೆ ರಾಜ್ಯಸಭೆ ಅಂಗೀಕಾರ ನೀಡಿದ್ದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಯಾವುದೇ ಟೀಕೆಗಳೂ ಇಲ್ಲದೆ ರಾಜ್ಯಸಭೆಯಲ್ಲಿ ಸರ್ವಾನುಮತದ ಅಂಗೀಕಾರ ಪಡೆದ ಈ ಮಸೂದೆ ಸದ್ಯದಲ್ಲೇ ಲೋಕಸಭೆಯ ಅಂಗೀಕಾರ ಪಡೆದುಕೊಳ್ಳುವ ನಿರೀಕ್ಷೆ ಇದೆ. ಈ ಮಸೂದೆ ಕಾಯಿದೆಯಾದಲ್ಲಿ ನಿಮ್ಹಾನ್ಸ್‌ಗೆ `ರಾಷ್ಟ್ರೀಯ ಪ್ರಾಮುಖ್ಯ~ ಪಡೆದ ಸಂಸ್ಥೆ ಎಂಬಂತಹ ಮಾನ್ಯತೆ ಅಧಿಕೃತವಾಗಿ ಸಿಕ್ಕಂತೆ ಆಗುತ್ತದೆ. ಜೊತೆಗೆ `ಶೈಕ್ಷಣಿಕ ಸ್ವಾಯತ್ತತೆ~ ದಕ್ಕುತ್ತದೆ. ದೆಹಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಿರುವಂತಹ ಪ್ರತಿಷ್ಠೆ ನಿಮ್ಹಾನ್ಸ್‌ಗೆ ಪ್ರಾಪ್ತವಾಗಲಿದೆ. ಶೈಕ್ಷಣಿಕ ಯೋಜನೆಗಳು ಹಾಗೂ ಸಂಶೋಧನಾ ವಲಯದಲ್ಲಿ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುವುದೂ ನಿಮ್ಹಾನ್ಸ್‌ಗೆ ಸಾಧ್ಯವಾಗುತ್ತದೆ. ಭಾರತ ವೈದ್ಯಕೀಯ ಮಂಡಳಿಯ ಮಧ್ಯಪ್ರವೇಶವಿಲ್ಲದೆಯೇ ಶೈಕ್ಷಣಿಕ ಪದವಿಗಳನ್ನು ಸ್ವತಂತ್ರವಾಗಿ ನೀಡಬಹುದು. ಆ ಮೂಲಕ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಹೆಚ್ಚಳಕ್ಕೆ ಕೊಡುಗೆ ನೀಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.