ಸಂಸತ್‌ನಲ್ಲಿ ಚರ್ಚಿಸಿ ಕಲ್ಲಿದ್ದಲು ಗಣಿ ಮಂಜೂರಾತಿಯಲ್ಲಿ ಭಾರತೀಯ ಜನತಾ ಪಕ್ಷ ಆರೋಪಿಸುವ ರೀತಿ ಮತ್ತು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯದೇ ಇರಬಹುದು. ಮಹಾಲೇಖಪಾಲರ (ಸಿಎಜಿ) ವರದಿ ಹೇಳಿರುವುದಲ್ಲಿ ಒಂದಿಷ್ಟು ಅತಿಶಯ ಇದ್ದಿರಲೂಬಹುದು. ಆದರೆ ಈ ವ್ಯವಹಾರದಲ್ಲಿ ಒಂದು ಚುನಾಯಿತ ಸರ್ಕಾರ ನಡೆದುಕೊಳ್ಳಬೇಕಾಗಿದ್ದ ರೀತಿಯಲ್ಲಿ ಯುಪಿಎ ಸರ್ಕಾರ ನಡೆದುಕೊಂಡಿದೆ ಎಂದು ಖಂಡಿತ ಹೇಳಲಾಗದು. ತನ್ನ ಮೇಲಿನ ಆರೋಪವವನ್ನು ಎದುರಿಸಲು `ಹಿಂದಿನ ಸರ್ಕಾರದ ನೀತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ~ ಎಂದು ಯುಪಿಎ ನೀಡುತ್ತಿರುವ ಸಮರ್ಥನೆಯನ್ನು ಕೂಡಾ ಒಪ್ಪಲಾಗದು. ಇಡೀ ಪ್ರಕರಣವನ್ನು ಕೆದಕುತ್ತಾ ಹೋದರೆ ಕಾಂಗ್ರೆಸ್ ಪಕ್ಷದ ಮುಖದಲ್ಲಿ ಕೂಡಾ ಕಲ್ಲಿದ್ದಲು ಮಸಿ ಮೆತ್ತಿರುವುದು ಕಾಣುತ್ತದೆ. ಕಲ್ಲಿದ್ದಲು ಗಣಿಗಳನ್ನು ಹರಾಜು ಹಾಕಬೇಕೆಂದು ಸರ್ಕಾರ ಕೈಗೊಂಡ ನಿರ್ಧಾರ ಎಂಟು ವರ್ಷಗಳಾದರೂ ಅನುಷ್ಠಾನಕ್ಕೆ ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆಗೆ ಮನಮೋಹನ್‌ಸಿಂಗ್ ಅವರಿಗೂ ದೇಶದ ಜನರಿಗೆ ಮನವರಿಕೆಯಾಗುವಂತೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. 2ಜಿ ಹಗರಣದ ರೀತಿಯಲ್ಲಿಯೇ ಕಲ್ಲಿದ್ದಲು ಹಗರಣದ ಮಸಿಯನ್ನು ಕೂಡಾ ಜೆಎಂಎಂನಂತಹ ಮಿತ್ರಪಕ್ಷದ ಮುಖಕ್ಕೆ ಹಚ್ಚಿ ಪಾರಾಗುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಬಹುದು. ಇವು ಯಾವುದೂ ಕೂಡಾ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಈಗಿನ ಆರೋಪಗಳಿಂದ ಪಾರು ಮಾಡುವುದಿಲ್ಲ. ಈ ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳು ವಿರೋಧಿಸಿದ ಕಾರಣದಿಂದಾಗಿ ಹರಾಜು ವ್ಯವಸ್ಥೆಯನ್ನು ಜಾರಿಗೆ ತರಲಾಗಲಿಲ್ಲ ಎನ್ನುವುದು ಒಂದು ಸಬೂಬು ಅಷ್ಟೆ. ಯುಪಿಎ ಸರ್ಕಾರದ ಎಂಟು ವರ್ಷಗಳ ಆಡಳಿತದಲ್ಲಿ ಯುಪಿಎ ಸರ್ಕಾರ ವಿರೋಧ ಪಕ್ಷಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ನಡೆದುಕೊಂಡೇ ಇಲ್ಲವೇ? ಸಹಮತದ ರಾಜಕೀಯವಾದರೂ ಎಲ್ಲಿದೆ? ನಡೆಯುತ್ತಿರುವುದು ಸಂಘರ್ಷದ ರಾಜಕೀಯವೇ ಅಲ್ಲವೇ? ಈ ಹಗರಣ ಎರಡು ಪಕ್ಷಗಳ ನಡುವಿನ ವೈಯಕ್ತಿಕ ಜಗಳ ಅಲ್ಲ, ಇದರಲ್ಲಿ ದೇಶದ ಸಂಪತ್ತು ಮತ್ತು ಜನತೆಯ ವಿಶ್ವಾಸದ ಪ್ರಶ್ನೆ ಇದೆ. ಕಲ್ಲಿದ್ದಲು ಗಣಿ ಮಂಜೂರಾತಿಗೆ ಸಂಬಂಧಿಸಿದಂತೆ ಮಹಾಲೇಖಪಾಲರು ನೀಡಿರುವ ವರದಿ ಬಗ್ಗೆ ಸಮಗ್ರ ತನಿಖೆ ನಡೆಯಲೇ ಬೇಕು. ಇದಕ್ಕೆ ಪ್ರಧಾನಮಂತ್ರಿಗಳೇ ಹೊಣೆಯಾದರೂ ಶಿಕ್ಷೆ ಆಗಬೇಕು. ಆದರೆ ಸಂಸತ್‌ನ ಕಲಾಪವನ್ನೇ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯ ದಾರಿ ಸರಿಯಾದುದು ಅಲ್ಲ. ನಿಯಮಾವಳಿ ಪ್ರಕಾರ ಮಹಾಲೇಖಪಾಲರ ವರದಿಯನ್ನು ಮೊದಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆ ನಡೆಸಬೇಕು. ಅಲ್ಲಿಯೂ ಅಕ್ರಮ ನಡೆದಿದೆ ಎಂದು ಕಂಡುಬಂದರೆ ತನಿಖೆಯ ಮೂಲಕ ತಪ್ಪಿತಸ್ಥರನ್ನು ಕಂಡುಹಿಡಿದು ಶಿಕ್ಷೆಗೊಳಪಡಿಸಬೇಕು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಾರೂಢ ಪಕ್ಷವನ್ನು ಮಣಿಸಲು ವಿರೋಧ ಪಕ್ಷಗಳು ಎರಡು ಬಗೆಯ ಹೋರಾಟ ನಡೆಸಲು ಅವಕಾಶ ಇದೆ. ಪಕ್ಷದ ಜನಪ್ರತಿನಿಧಿಗಳು ಸಂಸತ್‌ನಲ್ಲಿ, ಪಕ್ಷದ ಕಾರ್ಯಕರ್ತರು ಬೀದಿಗಳಲ್ಲಿ. ಇದನ್ನು ಮರೆತು ಜನಪ್ರತಿನಿಧಿಗಳು ಸಂಸತ್ ಅನ್ನು ಬಹಿಷ್ಕರಿಸಿ ಬೀದಿಯಲ್ಲಿ ನಿಂತು ಬೊಬ್ಬೆಹಾಕಿದರೆ ಪ್ರಜಾಸತ್ತಾತ್ಮಕವಾದ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ ಮಾತ್ರವಲ್ಲ, ಪ್ರಜಾಪ್ರತಿನಿಧಿಗಳೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಮಾಡಿದಂತಾಗುತ್ತದೆ. ಈ ಎಚ್ಚರ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.