ಕಸ ವಿಲೇವಾರಿ ಬಿಕ್ಕಟ್ಟು ಬೆಂಗಳೂರು ನಗರದ ಕಸ ವಿಲೇವಾರಿ ಸಮಸ್ಯೆ ಕಗ್ಗಂಟಾಗಿ ಕೂತಿದೆ. ಕಸವನ್ನು ತಮ್ಮ ಹಳ್ಳಿಗಳಿಗೆ ತಂದು ಅವೈಜ್ಞಾನಿಕವಾಗಿ ಸುರಿಯುವುದರ ವಿರುದ್ಧ ಗುಂಡ್ಲಹಳ್ಳಿ, ಮಾವಳ್ಳಿಪುರ ಹಾಗೂ ಮಂಡೂರು ಗ್ರಾಮಗಳ ಜನರು ಪ್ರತಿಭಟಿಸಿದ್ದಾರೆ. ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ರೂಪಿಸದ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ಕರ್ನಾಟಕ ಹೈಕೋರ್ಟ್ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದೆ. ಈ ಮಧ್ಯೆ ಬಿಬಿಎಂಪಿ ವೈಫಲ್ಯಕ್ಕೆ ಬಿಬಿಎಂಪಿ ಆಯುಕ್ತ ಎಂ. ಕೆ. ಶಂಕರಲಿಂಗೇಗೌಡರನ್ನು ವರ್ಗಾವಣೆ ಮಾಡಿ ಸರ್ಕಾರ ತಿಪ್ಪೆ ಸಾರಿಸಿದೆ. ಅತ್ಯಂತ ಮೂಲಭೂತ ನಾಗರಿಕ ಸೇವೆಯಾದ ಕಸ ವಿಲೇವಾರಿಯ ಸಮಸ್ಯೆಯನ್ನೇ ಸಮರ್ಪಕವಾಗಿ ನಿರ್ವಹಿಸಲಾಗದಿರುವುದು ಸರ್ಕಾರದ ಆಡಳಿತದ ವೈಫಲ್ಯ ಎನ್ನದೇ ವಿಧಿ ಇಲ್ಲ. ಬೆಂಗಳೂರು ನಗರ ಗಬ್ಬೆದ್ದು ನಾರುತ್ತಿದೆ ಎಂದು ಸಾರ್ವಜನಿಕರು ಹುಯಿಲಿಡುತ್ತಿದ್ದರೂ ಪಾಲಿಕೆ ಸದಸ್ಯರು, ಮೇಯರ್ ಮತ್ತು ಸ್ಥಳೀಯ ಶಾಸಕರು ಏನು ಮಾಡುತ್ತಿದ್ದಾರೆ ಎಂಬುದು ಪ್ರಶ್ನೆ. ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್ ಅವರಿಗೂ ಸಮಸ್ಯೆಯ ಗಂಭೀರತೆ ಗೊತ್ತಿರದೆ ಇರುವುದು ಸಾಧ್ಯವಿಲ್ಲ. ಹೀಗಿದ್ದೂ, ಬೆಂಗಳೂರನ್ನು ತೊರೆದು ಹೋದ ಈಶಾನ್ಯ ರಾಜ್ಯಗಳ ಜನರ ಮನ ಒಲಿಕೆಗಾಗಿ ಇದೇ ಸಂದರ್ಭದಲ್ಲಿಯೇ ಅಶೋಕ್ ಅಸ್ಸಾಂಗೆ ತೆರಳಿದ್ದರು. ಕಗ್ಗಂಟಾಗಿರುವ ಈ ಸಮಸ್ಯೆಯನ್ನು ಸರ್ಕಾರ ಎಷ್ಟು ಲಘುವಾಗಿ ಪರಿಗಣಿಸುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ? ಬೆಂಗಳೂರು ಮಹಾನಗರ ದಿನೇದಿನೇ ಬೆಳೆಯುತ್ತಿದೆ. ತ್ಯಾಜ್ಯ ವಿಲೇವಾರಿ ಎಂದರೆ ಅದನ್ನು ಎಷ್ಟು ಸಾಧ್ಯವಾಗುತ್ತದೋ ಅಷ್ಟು ದೂರದ ಹಳ್ಳಿಗಳಿಗೆ ಒಯ್ದು ಸುರಿಯುವುದಷ್ಟೇ ಪರಿಹಾರ ಎಂಬ ಭಾವನೆ ಆಡಳಿತಗಾರರಲ್ಲಿರುವಂತಿದೆ. ಸರ್ಕಾರದ ವೆಚ್ಚದಲ್ಲಿ ವಿದೇಶ ಪ್ರವಾಸ ಮಾಡಿ ಅಲ್ಲಿನ ಆಡಳಿತಗಳ ಅಧ್ಯಯನ ಮಾಡಿ ಬರುವ ಇವರಿಗೆ ದಿನನಿತ್ಯದ ನಾಗರಿಕ ಸೇವೆಯನ್ನು ನಿರ್ವಹಿಸುವಷ್ಟೂ ದಕ್ಷತೆ ಇಲ್ಲದಿರುವುದು ನಾಚಿಕೆಗೇಡು. 1994ರಲ್ಲಿ ಸೂರತ್‌ನಲ್ಲಿ ಪ್ಲೇಗ್ ಆವರಿಸಿದ ಸಂದರ್ಭದಲ್ಲಿ ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹಾರದ ಶಿಫಾರಸಿಗಾಗಿ ಸಮಿತಿಯೊಂದನ್ನು ಸುಪ್ರೀಂಕೋರ್ಟ್ ರಚಿಸಿತ್ತು. ಈ ಸಮಿತಿ ಶಿಫಾರಸಿನ ಅನ್ವಯ 1986ರ ಪರಿಸರ ರಕ್ಷಣಾ ಕಾಯಿದೆ ಅನ್ವಯ ಘನ ತ್ಯಾಜ್ಯ ನಿರ್ವಹಣಾ ನಿಯಮಾವಳಿಗಳ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಭಾರತದ ಅನೇಕ ನಗರಗಳು ಈ ನಿಯಮಾವಳಿಗಳನ್ನು ಅನುಸರಿಸುತ್ತಿವೆ. ಅದರಲ್ಲಿ ನಾಗಪುರದ ಮಾದರಿ ಆದರ್ಶ ಎನಿಸಿದೆ ಎಂಬುದನ್ನು ಗಮನಿಸಬೇಕು. ಬೆಂಗಳೂರಿನಲ್ಲಿ ಪ್ರತಿ ದಿನ 5000 ಟನ್ ಕಸ ಉತ್ಪಾದನೆಯಾಗುತ್ತದೆ. ಈ ಕಸ ಸಂಗ್ರಹ ಹಾಗೂ ಸಾಗಣೆ ವಾರ್ಷಿಕ ರೂ 200 ಕೋಟಿಗಳ ಬೃಹತ್ ವಹಿವಾಟಾಗಿದೆ. ಇಷ್ಟೊಂದು ಹಣದ ವಹಿವಾಟಿರುವ ಈ ಕ್ಷೇತ್ರದಲ್ಲಿ ಚಿಲ್ಲರೆ ರಾಜಕೀಯಗಳನ್ನು ಬದಿಗಿರಿಸಿ, ಕಸ ಎತ್ತುವ ದೈನಂದಿನ ಕೆಲಸ ಸುಗಮವಾಗಿರುವಂತೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಹಸಿ ಹಾಗೂ ಘನ ತ್ಯಾಜ್ಯಗಳನ್ನು ಮೊದಲ ಹಂತದಲ್ಲೇ ಬೇರ್ಪಡಿಕೆ ಮಾಡುವ ಕ್ರಿಯೆಯಲ್ಲಿ ಜನರ ಸಹಭಾಗಿತ್ವವೂ ಅಗತ್ಯ. ಈ ಬಗೆಗೂ ಜಾಗೃತಿ ಕಾರ್ಯಕ್ರಮಗಳಾಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.