ಅಧಿಕಾರದ ಮದ ರಾಜ್ಯದ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅವರು ಆರೋಗ್ಯ ಕವಚದ ನೌಕರರ ಜತೆ ವರ್ತಿಸಿದ ರೀತಿ ಆರೋಗ್ಯಕರವಾದ ನಡವಳಿಕೆ ಖಂಡಿತ ಅಲ್ಲ. ಬಾಗಲಕೋಟೆಯಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲು ಬಂದಿದ್ದ ನೌಕರರ ಮುಖಂಡರನ್ನು ಸಚಿವರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪಕ್ಕೊಳಗಾಗಿದ್ದಾರೆ. ಇದನ್ನು ಪ್ರತಿಭಟಿಸಿ ಆರೋಗ್ಯಕವಚದ ನೌಕರರು ಬುಧವಾರ ಕೆಲವು ಜಿಲ್ಲೆಗಳಲ್ಲಿ ಸೇವೆ ಸ್ಥಗಿತಗೊಳಿಸಿದ್ದಾರೆ. ನೌಕರಿಯಿಂದ ಕಿತ್ತುಹಾಕುವ ಬೆದರಿಕೆಯಿಂದ ಗಾಬರಿಗೀಡಾದ ನೌಕರರೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಸಚಿವರು ಕ್ಷಮೆಯಾಚಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವ ಬೆದರಿಕೆಯನ್ನೂ ಹಾಕಿದ್ದಾರೆ. ಲಿಂಬಾವಳಿಯವರ ಈ ರೀತಿಯ ನಡವಳಿಕೆ ಮೊದಲ ಸಲವೇನಲ್ಲ. ಇತ್ತೀಚೆಗೆ ಒಂದೆರಡು ಬಾರಿ ಪತ್ರಕರ್ತರ ಜತೆಯಲ್ಲಿಯೂ ಅವರು ಉದ್ಧಟತನದಿಂದ ವರ್ತಿಸಿದ್ದಾರೆ. ಇಂತಹದೇ ಕಾರಣಗಳಿಂದಾಗಿ ಅವರನ್ನು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂಪುಟದಿಂದ ಕೈಬಿಟ್ಟಿದ್ದರು. ಇದರ ನಂತರವೂ ಅವರು ಪಾಠ ಕಲಿತಿಲ್ಲ ಎನ್ನುವುದಕ್ಕೆ ಬಾಗಲಕೋಟೆಯಲ್ಲಿ ನೌಕರರ ಜತೆಗಿನ ಅವರ ನಡವಳಿಕೆಯೇ ಸಾಕ್ಷಿ. ತುರ್ತುಪರಿಸ್ಥಿತಿಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ `ಆರೋಗ್ಯ ಕವಚ 108~ ನೀಡುತ್ತಿರುವ ಸೇವೆ ರಾಜ್ಯದಲ್ಲಿ ಸಾರ್ವಜನಿಕರಿಂದ ಮುಕ್ತ ಶ್ಲಾಘನೆಗೆ ಪಾತ್ರವಾಗಿದೆ. ಸರ್ಕಾರಿ ನೌಕರರು ಪಡೆಯುತ್ತಿರುವ ಸಂಬಳ-ಸೌಲಭ್ಯಗಳಿಗೆ ಹೋಲಿಸಿದರೆ ಹೊರಗುತ್ತಿಗೆಯ ಮೂಲಕ ನೇಮಕಗೊಂಡ ಈ ಸೇವೆಯ ನೌಕರರು ಪಡೆಯುತ್ತಿರುವುದು ಅತ್ಯಲ್ಪ, ಜತೆಗೆ ಸೇವಾ ಭದ್ರತೆಯೂ ಇಲ್ಲ. ಹೇಳಿಕೊಳ್ಳುವ ಕಷ್ಟಗಳು ಖಂಡಿತ ಈ ನೌಕರರಿಗಿದೆ. ಇದನ್ನು ಕೇಳಿಸಿಕೊಳ್ಳುವ ಸೌಜನ್ಯವನ್ನಾದರೂ ಸಚಿವರು ತೋರಬೇಕಿತ್ತು. ಇದಕ್ಕೆ ವಿರುದ್ಧವಾಗಿ ನೌಕರರಿಗೆ ಸಿಕ್ಕಿದ್ದು ಸಚಿವರಿಂದ ನಿಂದನೆ, ಸೇವೆಯಿಂದ ವಜಾಗೊಳಿಸುವ ಬೆದರಿಕೆ. ರಾಜ್ಯದ ಬಿಜೆಪಿ ಸಚಿವರು ಇಂತಹ ದುಂಡಾವರ್ತನೆಯ ಆರೋಪಕ್ಕೊಳಗಾಗುತ್ತಲೇ ಬಂದಿದ್ದಾರೆ. ರಾಜ್ಯದ ಸಮಾಜ ಕಲ್ಯಾಣ ಸಚಿವರು ಅಧಿಕಾರಿಗಳಿಗೆ `ಕತ್ತರಿಸಿ ಹಾಕುವ~ ಬೆದರಿಕೆ ಹಾಕಿದ್ದರು. ತಮ್ಮ ವಾಹನವನ್ನು ಹಿಂದಿಕ್ಕಿದ ಏಕೈಕ ಕಾರಣಕ್ಕೆ ಕಾರ್ಮಿಕ ಸಚಿವರು ವಾಹನದಲ್ಲಿದ್ದ ವ್ಯಕ್ತಿಗೆ ಬಾಯಿಗೆ ಬಂದಂತೆ ನಿಂದಿಸಿದ್ದರು. ರಾಜ್ಯ ಬಿಜೆಪಿಯ ಹಿಂದಿನ ರಾಜ್ಯಾಧ್ಯಕ್ಷರು `ನಾಲಿಗೆ ಕತ್ತರಿಸುತ್ತೇನೆ~ ಎಂದು ವಿರೋಧಪಕ್ಷಗಳ ನಾಯಕರನ್ನು ಹೆದರಿಸುವ ಪ್ರಯತ್ನ ಮಾಡಿದ್ದರು.ಅರವಿಂದ ಲಿಂಬಾವಳಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಸಂಸ್ಕಾರವನ್ನು ಕಲಿತುಬಂದವರು. ಆದರೆ ಸಚಿವರಾದ ನಂತರದ ಅವರ ವರ್ತನೆ `ಇದೇನಾ ಅವರು ಪಡೆದ ಸಂಸ್ಕಾರ?~ ಎಂದು ಪ್ರಶ್ನಿಸುವಂತಿದೆ. ನಮ್ಮದು ಸರ್ವಾಧಿಕಾರಿ ಆಡಳಿತ ಅಲ್ಲ. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ಈ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಯಾವ ಜನಪ್ರತಿನಿಧಿಗೂ ನಿರಂಕುಶವಾದ ಪರಮಾಧಿಕಾರ ಇಲ್ಲ. ಅವರು ಕೂಡಾ ಕಾನೂನಿನ ಪರಿಧಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಸರ್ಕಾರಿ ನೌಕರರ ಮೇಲೆ ನೂರೆಂಟು ಆರೋಪಗಳಿರಬಹುದು, ಅಂದ ಮಾತ್ರಕ್ಕೆ ಮನಸ್ಸಿಗೆ ತೋಚಿದಂತೆ ನಿಂದಿಸುವ ಅಧಿಕಾರ ಸಚಿವರಿಗೆ ಇರುವುದಿಲ್ಲ. ತಪ್ಪುಮಾಡಿದರೆ ಶಿಕ್ಷಿಸಲು ಕಾನೂನು ಇದೆ. ಜನಪ್ರತಿನಿಧಿಗಳಿಗೆ ಮೂಲಭೂತವಾಗಿ ಇರಬೇಕಾಗಿರುವುದು ಸೌಜನ್ಯಪೂರ್ವಕವಾದ ನಡವಳಿಕೆ. ಇದನ್ನು ಮರೆತು ಅಧಿಕಾರದ ಮದವನ್ನು ತಲೆಗೇರಿಸಿಕೊಂಡರೆ ಅದನ್ನು ಇಳಿಸಲು ಮತದಾರರು ಸಿದ್ಧರಾಗುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.