ಬಾಲಕಾರ್ಮಿಕರು ಬೇಡ ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗುವುದಕ್ಕೆ ಪೂರ್ಣ ನಿಷೇಧ ಹೇರಲು ಕಾನೂನಿನ ತಿದ್ದುಪಡಿ ತರಲಾಗುತ್ತಿರುವುದು ಸ್ವಾಗತಾರ್ಹ. ಇದಕ್ಕಾಗಿ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ 1986ಕ್ಕೆ ತಿದ್ದುಪಡಿ ತರುವ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅಂಗೀಕಾರ ನೀಡಿದೆ. ಈ ತಿದ್ದುಪಡಿಯಿಂದ ಎಲ್ಲಾ ಮಕ್ಕಳೂ `2009ರ ಶಿಕ್ಷಣ ಹಕ್ಕು ಕಾಯಿದೆ~ ಅನುಸಾರ ಶಾಲೆಗಳಿಗೆ ದಾಖಲಾಗಲೇಬೇಕು. ಸದ್ಯಕ್ಕೆ 14 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಮಾತ್ರ ನಿಷೇಧಿಸಲಾಗಿದೆ. ಅಪಾಯಕಾರಿಯಲ್ಲದ ಉದ್ಯೋಗಗಳಲ್ಲಿ ಕೆಲಸ ಮಾಡುವ ಮಕ್ಕಳ ಕಾರ್ಯ ನಿರ್ವಹಣೆಯ ಬಗ್ಗೆ ಕಾಯಿದೆ ಪ್ರಕಾರ ನಿಗಾ ವಹಿಸಲಾಗುತ್ತಿತ್ತು. ಈಗ ಅಪಾಯಕಾರಿ ಇರಲಿ ಇಲ್ಲದಿರಲಿ ಎಲ್ಲೂ ಮಕ್ಕಳನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದನ್ನು ಪೂರ್ಣ ನಿಷೇಧಿಸಲಾಗುವುದು. ಜೊತೆಗೆ ಹೀಗೆ 14 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳನ್ನು ಕೆಲಸಕ್ಕಿರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಶಿಕ್ಷೆಯ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಒಂದು ವರ್ಷದ ಜೈಲು ಶಿಕ್ಷೆಯನ್ನು ಎರಡು ವರ್ಷಗಳಿಗೆ ಏರಿಸಲಾಗಿದ್ದು ದಂಡವನ್ನು ರೂ. 20,000ದಿಂದ ರೂ.50,000ಕ್ಕೆ ಏರಿಸಲಾಗಿದೆ. ಪದೇಪದೇ ಇದೇ ಅಪರಾಧ ಎಸಗಿದವರಿಗೆ, ಶಿಕ್ಷೆಯ ಪ್ರಮಾಣವನ್ನು ಮೂರು ವರ್ಷ ಸೆರೆವಾಸಕ್ಕೆ ಏರಿಸಲಾಗಿದೆ. ಈ ಕ್ರಮಗಳ ಮೂಲಕ ಮಕ್ಕಳು ಶಾಲೆಗಳಲ್ಲಿರಬೇಕೆಂಬ ಸರ್ಕಾರದ ಸದಾಶಯ ಸರಿಯಾದದ್ದೆ. ತಿದ್ದುಪಡಿಯಾದ ಕಾನೂನನ್ನು `ಮಕ್ಕಳು ಹಾಗೂ ಹದಿವಯಸ್ಕರ ಕಾರ್ಮಿಕತೆ ನಿಷೇಧ ಕಾನೂನು~ ಎಂದು ಮರುನಾಮಕರಣ ಮಾಡಲಾಗುತ್ತಿದೆ. ಶಾಲಾ ಸಮಯದ ನಂತರ ಅಥವಾ ರಜೆ ಸಂದರ್ಭದಲ್ಲಿ ಮನೆಗಳಲ್ಲಿ ಅಥವಾ ಗೃಹಾಧಾರಿತ ಕೆಲಸಗಳಲ್ಲಿ ಮಕ್ಕಳು ಸಹಾಯ ಮಾಡಲು ಈ ಕಾಯಿದೆ ನಿಷೇಧ ಹೇರುವುದಿಲ್ಲ. ಇದು ಭಾರತದ ವಾಸ್ತವಿಕ ಸತ್ಯಗಳಿಗೆ ಸ್ಪಂದಿಸುವಂತಹದ್ದಾಗಿದೆ. ಆದರೆ, ವಾಣಿಜ್ಯ ಉದ್ದೇಶದಿಂದ ಇಂತಹ ಕೆಲಸಗಳನ್ನು ಮಾಡಿಸಲು ಪೋಷಕರು ಅವಕಾಶ ಮಾಡಿಕೊಟ್ಟಲ್ಲಿ ಅದು ಶಿಕ್ಷಾರ್ಹವಾಗುತ್ತದೆ. 1986ರಲ್ಲಿ ಜಾರಿಯಾದ ಕಾನೂನು ಬಾಲಕಾರ್ಮಿಕ ಪದ್ಧತಿಗೆ ಭಾಗಶಃ ಬಹಿಷ್ಕಾರವಷ್ಟೇ ವಿಧಿಸಿತ್ತು. ಹೀಗಾಗಿ ಈಗಿನ ತಿದ್ದುಪಡಿ ಮಹತ್ವದ ಹೆಜ್ಜೆ. ಆದರೆ ಕಟ್ಟುನಿಟ್ಟಾಗಿ ಕಾನೂನು ಜಾರಿಗೊಳಿಸುವಂತಹ ರಾಜಕೀಯ ಇಚ್ಛಾಶಕ್ತಿಯೂ ಮುಖ್ಯ. ಬಡತನ, ವಲಸೆ, ಶಾಲೆಗಳ ಕೊರತೆ- ಇತ್ಯಾದಿ ಸಮಸ್ಯೆಗಳು ಬಾಲ ಕಾರ್ಮಿಕ ಸಮಸ್ಯೆಗೆ ಮೂಲಕಾರಣ ಎಂಬುದು ಗಮನದಲ್ಲಿರಬೇಕು. ಭಾರತದಲ್ಲಿ ಪ್ರತಿ ವರ್ಷ 55,000 ಮಕ್ಕಳು ನಾಪತ್ತೆಯಾಗುತ್ತಿದ್ದಾರೆ ಎಂದು ಸರ್ಕಾರ ಇತ್ತೀಚೆಗೆ ಹೇಳಿದೆ. ನಾಪತ್ತೆಯಾದ ಮಕ್ಕಳ ಬಗ್ಗೆ ವರದಿ ಮಾಡುವ ಹಾಗೂ ಪತ್ತೆಹಚ್ಚುವ ವ್ಯವಸ್ಥೆ ಉತ್ತಮಗೊಳ್ಳಬೇಕಿದೆ. ಏಕೆಂದರೆ ಈ ಪಿಡುಗೂ ಸಹ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸುವ ದಂಧೆಗೆ ಕೊಡುಗೆ ಸಲ್ಲಿಸುತ್ತಿದೆ. ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ರಾಷ್ಟ್ರ ಎಂದು ಹೆಮ್ಮೆ ಪಟ್ಟುಕೊಳ್ಳುವ ಭಾರತಕ್ಕೆ ಬಾಲ ಕಾರ್ಮಿಕ ಪಿಡುಗು ಕಪ್ಪುಚುಕ್ಕೆಯಾಗಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.