ನರೇಂದ್ರ ಮೋದಿಗೆ ಹಿನ್ನಡೆ ಗುಜರಾತ್‌ನ ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕಿ ಮಾಯಾಬೆನ್ ಕೊಡ್ನಾನಿ ಮತ್ತು ಬಜರಂಗದಳದ ನಾಯಕ ಬಾಬು ಬಜರಂಗಿ ಸೇರಿದಂತೆ 32 ವ್ಯಕ್ತಿಗಳನ್ನು ತಪ್ಪಿತಸ್ಥರೆಂದು ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಹಲವು ಕಾರಣಗಳಿಗಾಗಿ ಮಹತ್ವಪೂರ್ಣವಾದುದು. ಕೋಮುಗಲಭೆಯ ತನಿಖೆಯ ಹಾದಿ ಎಂದೂ ಸುಗಮವಾಗಿರಲಿಲ್ಲ. ಅರ್ಜಿದಾರರಾದ ಜಾಕಿಯಾ ಜಫ್ರಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕೋರಿಕೆಯಂತೆ ಸುಪ್ರೀಂಕೋರ್ಟ್ ಆಸ್ಥೆವಹಿಸಿ ಪ್ರಮುಖವಾದ ಒಂಬತ್ತು ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವನ್ನು ರಚಿಸಿತ್ತು. ಕೊಡ್ನಾನಿ ಅವರು ಶಾಸಕಿ ಮಾತ್ರ ಆಗಿರುವುದರಿಂದ ಸರ್ಕಾರ ಅವರ ನಡವಳಿಕೆಗೆ ನೈತಿಕ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿಲ್ಲ ಎನ್ನುವ ಬಿಜೆಪಿಯ ಸ್ಪಷ್ಟನೆ ಸ್ವೀಕಾರಾರ್ಹ ಅಲ್ಲ. ಸಾರ್ವಜನಿಕರ ಪ್ರಾಣ ಮತ್ತು ಮಾನವನ್ನು ರಕ್ಷಿಸಬೇಕಾದ ಸರ್ಕಾರ ತಟಸ್ಥಧೋರಣೆ ಅನುಸರಿಸಿ ಸಾಮೂಹಿಕ ಹತ್ಯಾಕಾಂಡಕ್ಕೆ ನೆರವಾಗಿತ್ತು ಎಂಬ ಗಂಭೀರ ಆರೋಪವನ್ನು ನರೇಂದ್ರಮೋದಿ ಸರ್ಕಾರ ಎದುರಿಸುತ್ತಿದೆ. `ಗಲಭೆಕೋರರನ್ನು ನಿಗ್ರಹಿಸಬೇಕಾಗಿದ್ದ ಸರ್ಕಾರ ಪರೋಕ್ಷವಾಗಿ ಸಮಾಜಘಾತುಕರ ಬೆಂಬಲಕ್ಕೆ ನಿಂತು ರಕ್ಷಣೆ ಮಾಡಿತ್ತು. ಮೋದಿ ಅವರ ಸಂಪುಟದ ಸದಸ್ಯರು ಮತ್ತು ಅಧಿಕಾರಿಗಳು ಕಂಟ್ರೋಲ್ ರೂಮಿನಲ್ಲಿ ಕೂತು ಗಲಭೆಕೋರರ ವಿರುದ್ಧ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡುತ್ತಿದ್ದರು ಮತ್ತು ಸೇನೆ ಕರೆಸುವುದನ್ನು ದುರುದ್ದೇಶದಿಂದ ವಿಳಂಬ ಮಾಡಿದ್ದರು ~ ಎಂಬ ಆರೋಪಗಳೂ ಇವೆ. ಈ ಕಾರಣದಿಂದಾಗಿಯೇ ವಿಶೇಷ ನ್ಯಾಯಾಲಯದ ತೀರ್ಪಿನ ಬಗ್ಗೆ ದೇಶದಾದ್ಯಂತ ಕುತೂಹಲವಿತ್ತು. ಮುಖ್ಯಮಂತ್ರಿ ನರೇಂದ್ರಮೋದಿ ಅವರು ಎಷ್ಟೇ ಕೊಡವಿಕೊಂಡರೂ ಗುಜರಾತ್ ಕೋಮುಗಲಭೆಯ ಜವಾಬ್ದಾರಿಯಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಾರದು. `ಗೋಧ್ರಾ ಹತ್ಯಾಕಾಂಡದ ನಂತರ ರಾಜ್ಯದಲ್ಲಿ ನಡೆದ ಹಿಂಸಾಚಾರ ಜನತೆಯ ಸಹಜ ಪ್ರತಿಕ್ರಿಯೆಯಾಗಿತ್ತು. ಅದರಲ್ಲಿ ರಾಜ್ಯಸರ್ಕಾರ ಮತ್ತು ಪಕ್ಷದ ಪಾತ್ರವೇ ಇಲ್ಲ~ ಎಂದು ಅವರು ಈ ವರೆಗೆ ಹೇಳಿಕೊಂಡು ಬಂದಿದ್ದರು. ಆದರೆ ಇದು ಸತ್ಯ ಅಲ್ಲ ಎನ್ನುವುದನ್ನು ವಿಶೇಷ ನ್ಯಾಯಾಲಯದ ತೀರ್ಪು ಬಿಚ್ಚಿಟ್ಟಿದೆ. `ದಂಗೆ ಮತ್ತು ಹತ್ಯೆಯ ಆರೋಪಗಳು ಮಾತ್ರವಲ್ಲ ಇಡೀ ಹತ್ಯಾಕಾಂಡದ ಸಂಚಿನಲ್ಲಿ ಕೊಡ್ನಾನಿ ಪಾಲ್ಗೊಂಡಿದ್ದರು ಎಂಬ ಆರೋಪವೂ ಸಾಬೀತಾಗಿದೆ~ ಎಂದು ನ್ಯಾಯಾಲಯ ಹೇಳಿರುವುದು ಗಮನಾರ್ಹ. ಆಡಳಿತ ಪಕ್ಷ ಮತ್ತು ಸರ್ಕಾರದ ಪಾಲುದಾರಿಕೆ ಇಲ್ಲದೆ ಸಚಿವರು ಇಲ್ಲವೇ ಶಾಸಕರು ವೈಯಕ್ತಿಕ ನೆಲೆಯಲ್ಲಿ ಸಂಚಿನಲ್ಲಿ ಪಾಲ್ಗೊಳ್ಳುವುದು ಹೇಗೆ ಸಾಧ್ಯ? ಮಾಯಾಬೆನ್ ಕೊಡ್ನಾನಿ ಅವರು ಮೋದಿ ಅವರಿಗೆ ಆಪ್ತರಾಗಿದ್ದವರು. ಹೀನ ಕೃತ್ಯಗಳ ಆರೋಪದ ವಿಚಾರಣೆಯನ್ನು ಅವರು ಎದುರಿಸುತ್ತಿರುವುದು ಗೊತ್ತಿದ್ದರೂ ಅದನ್ನು ಮೋದಿ ಲೆಕ್ಕಿಸದೆ 2007ರಲ್ಲಿ ಕೊಡ್ನಾನಿ ಅವರನ್ನು ಸಚಿವರನ್ನಾಗಿ ಮಾಡಿದ್ದರು. 2009ರಲ್ಲಿ ಬಂಧಿಸಿದಾಗ ಅವರು ಸಚಿವರಾಗಿದ್ದರು. ತಮ್ಮನ್ನು ಸಮರ್ಥಿಸಿಕೊಳ್ಳಲು ನರೇಂದ್ರಮೋದಿ ಅವರಲ್ಲಿಯೂ ಹೆಚ್ಚಿನ ಕಾಲ ಇಲ್ಲ. ಮುಂದಿನ ಮೂರು ತಿಂಗಳಲ್ಲಿ ಅವರು ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ. ಪ್ರಧಾನಿಯಾಗಲು ತರಾತುರಿಯಲ್ಲಿ ಹೊರಟಿರುವ ನರೇಂದ್ರಮೋದಿ ಅವರ ರಾಜಕೀಯ ಪಯಣದ ಹಾದಿಯನ್ನು ಈ ತೀರ್ಪು ಇನ್ನಷ್ಟು ಕಠಿಣ ಮಾಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.