ವಿಧಾನಸೌಧದಲ್ಲಿ ಮೂಢನಂಬಿಕೆ ಜನಸೇವೆಯ ಹೆಸರಿನಲ್ಲಿ ಅಧಿಕಾರಕ್ಕೇರಿದ ಈ ರಾಜಕಾರಣಿಗಳಿಗೆಲ್ಲ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಮಾಡಲು ಬೇಕಾದಷ್ಟು ಕೆಲಸ ಕಾರ್ಯಗಳು ಇರುವಾಗ ಅದನ್ನೆಲ್ಲ ಬಿಟ್ಟು ಅನಗತ್ಯವಾದ ಮತ್ತು ಬೊಕ್ಕಸಕ್ಕೆ ಹೊರೆಯಾಗುವ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಮಾಡಿದ್ದು ಇದೇ. ಇವರಿಬ್ಬರೂ ವಿಧಾನಸೌಧದಲ್ಲಿ ತಮಗೆ ಹಂಚಿಕೆಯಾದ ಕೊಠಡಿಗಳ ಗೋಡೆ ಒಡೆಸಿ ಅನಿಷ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ವಾಸ್ತು ಸರಿಯಿಲ್ಲ ಎಂಬ ಮೂಢ ನಂಬಿಕೆಗೆ ಜೋತುಬಿದ್ದು ನವೀಕರಣದ ಹೆಸರಿನಲ್ಲಿ ಗೋಡೆ ಒಡೆಸುವ- ಕಟ್ಟುವ ಪಿಡುಗು ಇಷ್ಟು ದಿನ ಮಂತ್ರಿ ಮಹೋದಯರ, ಅಧಿಕಾರಸ್ಥರ ಸರ್ಕಾರಿ ವಾಸದ ಬಂಗಲೆಗಳಿಗೆ ಸೀಮಿತವಾಗಿತ್ತು. ಅದೀಗ ವಿಧಾನಸೌಧಕ್ಕೂ ಬಂದಿದೆ. ಈ ಪ್ರವೃತ್ತಿ ತಡೆಯದೇ ಹೋದರೆ ಮುಂದೊಂದು ದಿನ ವಿಧಾನಸೌಧದ ಸ್ವರೂಪವೇ ಬದಲಾಗಬಹುದು. ತಮಗೆ ಹಂಚಿದ್ದ ಎರಡು ಕೊಠಡಿಗಳ ಮಧ್ಯೆ ಹಿಂದೆ ಬಾಗಿಲಿತ್ತು; ಅದನ್ನು ಮುಚ್ಚಿ ಗೋಡೆ ಕಟ್ಟಿದ್ದರು; ಅನುಕೂಲತೆ ದೃಷ್ಟಿಯಿಂದ ಈಗ ಮುಂಚಿನಂತೆ ಬಾಗಿಲು ಅಳವಡಿಸಲು ಕೇಳಿದ್ದನ್ನು ಬಿಟ್ಟರೆ ಇದರಲ್ಲಿ ತಮ್ಮ ತಪ್ಪೇನಿಲ್ಲ, ನಿಯಮ ಉಲ್ಲಂಘನೆ ನಡೆದಿದ್ದರೆ ಅಧಿಕಾರಿಗಳೇ ಹೊಣೆ ಎಂದು ಮುನೇನಕೊಪ್ಪ ತಮ್ಮ ಮೇಲಿನ ಹೊಣೆ ಹಾರಿಸಿಕೊಳ್ಳಲು ಹೊರಟಿದ್ದಾರೆ. ಆದರೆ ಶಂಕರಮೂರ್ತಿಯವರು ಮಾತ್ರ `ನವೀಕರಣ ಅಗತ್ಯವಿತ್ತು, ಇದರಲ್ಲಿ ಯಾವುದೇ ತಪ್ಪಿಲ್ಲ~ ಎಂದು ಸಮರ್ಥಿಸಿಕೊಂಡಿದ್ದಾರೆ. ಇವರ ವಾದಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಏಕೆಂದರೆ ಅವರದೇ ಪಕ್ಷದ ಮುಖಂಡ ಯಡಿಯೂರಪ್ಪನವರು ಸ್ವತಃ `ಇದೊಂದು ಅಕ್ಷಮ್ಯ ಅಪರಾಧ. ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಬೇಕು~ ಎಂದು ಹೇಳಿ ಕಿವಿ ಹಿಂಡಿದ್ದನ್ನು ಇವರಿಬ್ಬರೂ ಗಮನಕ್ಕೆ ತೆಗೆದುಕೊಳ್ಳಬೇಕು. ಅಷ್ಟಕ್ಕೂ ಕೆಂಗಲ್ ಹನುಮಂತಯ್ಯನವರ ದೂರದೃಷ್ಟಿಯ ಫಲವಾದ ವಿಧಾನಸೌಧ ನಿರ್ಮಾಣವಾಗಿದ್ದು ಸಾರ್ವಜನಿಕರ ಹಣದಲ್ಲಿ. ಅದಕ್ಕೆ ಅದರದೇ ಆದ ಸೌಂದರ್ಯ, ಘನತೆ, ಆಕರ್ಷಣೆ ಇದೆ. ಅದರ ನಿರ್ವಹಣೆಗೆ ಖರ್ಚಾಗುತ್ತಿರುವ ಕೋಟಿಗಟ್ಟಲೆ ಹಣ ಕೂಡ ಬೊಕ್ಕಸದಿಂದ ಬಂದದ್ದು. ಆ ಕಟ್ಟಡದ ಅಗತ್ಯಕ್ಕೆ ಅನುಗುಣವಾಗಿ ದುರಸ್ತಿ, ನವೀಕರಣ ಮಾಡಲು ತಜ್ಞರಿದ್ದಾರೆ. ಅದನ್ನು ಬಿಟ್ಟು ಮನಸ್ಸಿಗೆ ಬಂದಂತೆ ಗೋಡೆ ಒಡೆಸುವ ಹಕ್ಕು ಯಾರಿಗೂ ಇಲ್ಲ. ಇಷ್ಟೇ ಅಲ್ಲ. ಅಧಿಕಾರಸ್ಥ ಮಂತ್ರಿ ಮಹೋದಯರು ವಿಧಾನಸೌಧ- ವಿಕಾಸಸೌಧದಲ್ಲಿ ತಮಗೆ ಹಂಚಿಕೆಯಾದ ಸರ್ಕಾರಿ ಕೊಠಡಿ ಪ್ರವೇಶಿಸುವ ಮುನ್ನ ಹೋಮ, ಹವನ, ಪೂಜೆ ಪುನಸ್ಕಾರ ನಡೆಸುವುದು, ತಮಗಿಂತ ಎಷ್ಟೋ ವರ್ಷ ಕಿರಿಯರಾದ ಬಾಲ ವಟುಗಳ ಕಾಲಿಗೆ ಬೀಳುವುದೆಲ್ಲ ಆಕ್ಷೇಪಾರ್ಹ ನಡವಳಿಕೆ. ಈಚೆಗೆ ಚಿತ್ರ ನಟಿ ತಾರಾ ಅವರು ವಿಧಾನ ಪರಿಷತ್ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪುರೋಹಿತರನ್ನು ಕರೆಸಿ ಅಲ್ಲಿ ಪೂಜೆ ಮಾಡಿಸಿ ಹೊಸ ಪರಿಪಾಟ ಹುಟ್ಟುಹಾಕಿದ್ದಾರೆ. ಮುಂದೆ ಬರುವ ಶಾಸಕರು, ಎಂಎಲ್‌ಸಿಗಳೆಲ್ಲ ಇವರದೇ ಮಾರ್ಗ ಅನುಸರಿಸಲು ಹೊರಟರೆ ವಿಧಾನಸೌಧ ಸರ್ಕಾರಿ ಕಾರ್ಯಾಲಯವಾಗಿ ಉಳಿಯದೇ ಪೂಜಾ ಕೇಂದ್ರವಾದೀತು. ಧಾರ್ಮಿಕ ಆಚರಣೆ, ನಂಬಿಕೆ ಎನ್ನುವುದು ಆಯಾ ವ್ಯಕ್ತಿಯ ಖಾಸಗಿ ವಿಚಾರ. ಅದು ಸಾರ್ವಜನಿಕ ಪ್ರದರ್ಶನದ ವಸ್ತುವಾಗಿ ನಗೆಪಾಟಲಿಗೆ ಗುರಿಯಾಗಬಾರದು. ಬಹುಧರ್ಮ ಮತ್ತು ಬಹುನಂಬಿಕೆಗಳನ್ನು ಗೌರವಿಸುವ, ಜಾತ್ಯತೀತ ತತ್ವಗಳನ್ನು ಒಪ್ಪಿಕೊಂಡ ವ್ಯವಸ್ಥೆ ನಮ್ಮದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಇದಕ್ಕೆಲ್ಲ ಕಡಿವಾಣ ಬಿದ್ದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.