ಮತ್ತೆ ಜಂಗಲ್ ರಾಜ್ ಉತ್ತರಪ್ರದೇಶದಲ್ಲಿ ಹಾಡಹಗಲೇ ನಡೆದ ಪೊಲೀಸ್ ಅಧಿಕಾರಿಯ ಹತ್ಯೆಗೆ ಈಗಿನ ಮುಖ್ಯಮಂತ್ರಿ ಮಾತ್ರ ಅಲ್ಲ, ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಅವರೇ ನೈತಿಕ ಹೊಣೆ ಹೊರಬೇಕಾಗುತ್ತದೆ. ಮುಲಾಯಂ ರಕ್ಷಣೆ ಇಲ್ಲದೆ ಹೋಗಿದ್ದರೆ, ಎರಡು ಸಿಬಿಐ ತನಿಖೆ ಮತ್ತು ಇತರ ಆರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಘಾತುಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಸೆರೆಮನೆಯಿಂದ ಬಿಡುಗಡೆಯಾಗುತ್ತಲೇ ಇರಲಿಲ್ಲ, ಸಚಿವನೂ ಆಗುತ್ತಿರಲಿಲ್ಲ. ಬಿಎಸ್‌ಪಿ ನಾಯಕಿ ಮಾಯಾವತಿ, ತನ್ನ ಆಡಳಿತ ಕಾಲದಲ್ಲಿ, ಎಲ್ಲರೂ ಮುಟ್ಟಲು ಹೆದರುತ್ತಿದ್ದ ರಾಜಾ ಭಯ್ಯಾನ ಕೈಗಳಿಗೆ ಬೇಡಿಹಾಕಿ ಮೆರವಣಿಗೆ ಮಾಡಿಸಿ ಜೈಲಿಗೆ ತಳ್ಳಿದ್ದರು. 2003ರಲ್ಲಿ ಅಧಿಕಾರಕ್ಕೆ ಬಂದ ಮುಲಾಯಂ, ಮೊದಲು ಮಾಡಿದ ಕೆಲಸ ರಾಜಾ ಭಯ್ಯಾನ ಮೇಲಿನ ಟಾಡಾ ಮೊಕದ್ದಮೆ ವಾಪಸು ಪಡೆದು ಜೈಲಿನಿಂದ ಬಿಡುಗಡೆ ಮಾಡಿ ಸಚಿವರನ್ನಾಗಿ ಮಾಡಿದ್ದು. 2007ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮಾಯಾವತಿ `ಕುಂಡಾದ ಗೂಂಡಾ'ನೆಂಬ ಕುಖ್ಯಾತಿ ಪಡೆದಿದ್ದ ರಾಜಾ ಭಯ್ಯಾ ಬಾಲ ಬಿಚ್ಚದ ರೀತಿಯಲ್ಲಿ ಅಂಕೆಯಲ್ಲಿಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದ ಅಖಿಲೇಶ್ ಸಿಂಗ್ ಯಾದವ್ ಅಪ್ಪನ ಒತ್ತಡಕ್ಕೆ ಮಣಿದು ರಾಜಾ ಭಯ್ಯಾನನ್ನು ಸಂಪುಟಕ್ಕೆ ಸೇರಿಸಿಕೊಂಡು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಬಂದಿಖಾನೆ ಖಾತೆಗಳನ್ನು ನೀಡಿದ್ದರು. ಐದು ವರ್ಷಗಳ ಕಾಲ ಬಾಲ ಮುದುಡಿಕೊಂಡಿದ್ದ ರಾಜಾ ಭಯ್ಯಾ ತನ್ನ ಜಾತಿಯ ಠಾಕೂರ್ ಶಾಸಕರನ್ನು ಕಟ್ಟಿಕೊಂಡು ಮತ್ತೆ ಗೂಂಡಾಗಿರಿ ಪ್ರಾರಂಭಿಸಿದ್ದರು. ಇದರ ಪರಿಣಾಮವೇ ಕುಂಡಾದಡಿವೈಎಸ್‌ಪಿ ಜಿಯಾ ಉಲ್ ಹಕ್ ಹತ್ಯೆ. ಮುಲಾಯಂಸಿಂಗ್ ಆಳ್ವಿಕೆಯನ್ನು ಆ ರಾಜ್ಯದ ಜನ `ಜಂಗಲ್‌ರಾಜ್' ಎಂದೇ ಕರೆಯುತ್ತಿದ್ದರು. ಅಪ್ಪನಂತಲ್ಲ ಮಗ ಎಂಬ ನಿರೀಕ್ಷೆಯನ್ನು ಚುನಾವಣಾ ಕಾಲದಲ್ಲಿ ಹುಟ್ಟಿಸಿದ್ದ ಅಖಿಲೇಶ್ ಸಿಂಗ್ ಯಾದವ್ ನಿರಾಶೆಗೊಳಿಸಿದ್ದಾರೆ. ಅವರ ಸರ್ಕಾರದಲ್ಲಿ ಕೊಲೆ,ದರೋಡೆಗಳನ್ನೊಳಗೊಂಡಂತೆ ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊತ್ತಿರುವ ಆರು ಮಂದಿ ಸಚಿವರಾಗಿದ್ದಾರೆ. ಹಿಂದೆ ಕಲ್ಯಾಣ್‌ಸಿಂಗ್ ಸರ್ಕಾರದಲ್ಲಿಯೂ ಸಚಿವರಾಗಿದ್ದ ರಾಜಾ ಭಯ್ಯಾ ಬಿಜೆಪಿಯ ಈಗಿನ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೂ ಆತ್ಮೀಯರು. ಇಂತಹ ಪರಿಸ್ಥಿತಿಯಲ್ಲಿ ಹತ್ಯೆಗೀಡಾದ ಪೊಲೀಸ್ ಅಧಿಕಾರಿಯ ಕುಟುಂಬ ಯಾವ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯ? ಆ ರಾಜ್ಯದಲ್ಲಿ ಪ್ರತಿದಿನ ನಡೆಯುತ್ತಿರುವ ಕೊಲೆ, ಹಲ್ಲೆ, ಅತ್ಯಾಚಾರಗಳ ಸರಣಿಯನ್ನು ನೋಡಿದರೆ ಸರ್ಕಾರ ಕ್ರಿಮಿನಲ್‌ಗಳ ಜತೆ ಶಾಮೀಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಮಾಯಾವತಿ ಆರೋಪವನ್ನು ತಳ್ಳಿಹಾಕಲಾಗದು. ಭ್ರಷ್ಟಾಚಾರಗಳ ಆರೋಪಗಳೇನೇ ಇದ್ದರೂ ಮಾಯಾವತಿ ಅಧಿಕಾರದಲ್ಲಿದ್ದಾಗಲೆಲ್ಲ ಉತ್ತರಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸಿ ಜನ ನೆಮ್ಮದಿಯಿಂದ ಉಸಿರಾಡುತ್ತಿದ್ದದ್ದು ನಿಜ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಉತ್ತರಪ್ರದೇಶ ಹಳೆಯದಾರಿಗೆ ಹೊರಳುತ್ತಿರುವಂತೆ ಕಾಣುತ್ತಿದೆ. ಯುವನಾಯಕ ಅಖಿಲೇಶ್ ಸಿಂಗ್ ಯಾದವ್ ಅವರಿಗೆ ಎಚ್ಚೆತ್ತುಕೊಳ್ಳಲು ಇದು ಸರಿಯಾದ ಕಾಲ. ಇಲ್ಲದೆ ಇದ್ದರೆ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಒತ್ತಾಯಿಸುತ್ತಿರುವ ಮಾಯಾವತಿ ಅವರ ಬೇಡಿಕೆ ಜನರಿಂದಲೇ ಕೇಳಿಬರಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.