ನಿರ್ಲಕ್ಷ್ಯ ಅಕ್ಷಮ್ಯ ಮೈಸೂರಿನ ಪಾರಂಪರಿಕ ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಭಾಗ ಕುಸಿದು ನಾಲ್ವರನ್ನು ಬಲಿ ತೆಗೆದುಕೊಂಡಿರುವುದು ದುರಂತದ ಸಂಗತಿ. 120 ವರ್ಷಗಳಷ್ಟು ಹಳೆಯದಾದ ಈ ಕಟ್ಟಡ ಕುಸಿತದ ದುರಂತಕ್ಕೆ ಹೊಣೆ ಯಾರು ಎಂಬುದು ಪ್ರಶ್ನೆ. ಈ ಕಟ್ಟಡ ಕಾಯಕಲ್ಪದ ವಿಚಾರದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಕಟ್ಟಡ ಬಾಡಿಗೆದಾರರ ನಡುವಿನ ಸಂಘರ್ಷ ದುರಂತದಲ್ಲಿ ಪರ್ಯವಸಾನವಾಗಿರುವುದು ಅಕ್ಷಮ್ಯ. ಪಾರಂಪರಿಕ ಕಟ್ಟಡಗಳ ಬಗೆಗೆ ಒಟ್ಟು ವ್ಯವಸ್ಥೆಯಲ್ಲೇ ಇರುವಂತಹ ಮಹಾನಿರ್ಲಕ್ಷ್ಯಕ್ಕೆ ಈ ವಿದ್ಯಮಾನ ಮತ್ತೊಮ್ಮೆ ಕನ್ನಡಿ ಹಿಡಿದಿದೆ. ಈ ಕಟ್ಟಡದ ವಿವಾದವೇನೂ ಇಂದು ನಿನ್ನೆಯದಲ್ಲ. 15 ವರ್ಷಗಳಿಂದಲೂ ಈ ವಿವಾದವನ್ನು ಜೀವಂತವಾಗಿರಿಸಿಕೊಂಡು ಬರಲಾಗಿದೆ. ವಿವಾದದ ಪರಿಹಾರ, ಸಂಧಾನಗಳತ್ತ ಸಂಬಂಧಿಸಿದವರು ಮನಸ್ಸು ಮಾಡದಿರುವುದು ಖಂಡನಾರ್ಹ. ಈಗ ಬಾಡಿಗೆದಾರರು, ಆಡಳಿತಗಾರರ ನಿರ್ಲಕ್ಷ್ಯದ ಜೊತೆಗೆ ಮಳೆಯ ನೆಪದಲ್ಲಿ ಪ್ರಕೃತಿ ತೋರಿದ ಮುನಿಸೂ ನಾಲ್ವರ ಪ್ರಾಣವನ್ನು ಹೊಸಕಿಹಾಕಿದೆ. ಬಹುಶಃ ಆಡಳಿತಯಂತ್ರದಲ್ಲಿ ಒಂದಿಷ್ಟು ದೂರದೃಷ್ಟಿ, ಸಂವೇದನಾಶೀಲತೆ ಇದ್ದಿದ್ದಲ್ಲಿ ಇಂತಹ ಪ್ರಸಂಗ ಎದುರಾಗುತ್ತಿರಲಿಲ್ಲ. ಪಾರಂಪರಿಕ ಮೌಲ್ಯಗಳಿರುವ ಸಾಂಸ್ಕೃತಿಕ ನಗರಗಳು ಎಂಬ ಖ್ಯಾತಿ ಇರುವುದು ಭಾರತದಲ್ಲಿ ರಾಜಸ್ತಾನದ ಜೈಪುರ ಹಾಗೂ ಕರ್ನಾಟಕದ ಮೈಸೂರಿಗೆ ಮಾತ್ರ. ಅರಮನೆಯ ನಗರವಾದ ಮೈಸೂರು ಅನೇಕ ಪಾರಂಪರಿಕ ಕಟ್ಟಡಗಳನ್ನು ಹೊಂದಿದ ಸುಂದರ ನಗರ. `ಲ್ಯಾನ್ಸ್‌ಡೌನ್ ಬಿಲ್ಡಿಂಗ್~ ಸಹ ಅಂತಹ ಒಂದು ಕಟ್ಟಡ. ಎರಡು ಅಂತಸ್ತಿನ ಈ ಕಟ್ಟಡದಲ್ಲಿ 84 ಅಂಗಡಿಗಳಿವೆ. ಇಲ್ಲಿನ ತಂಪು ಪಾನೀಯ ಅಂಗಡಿಗಳು, ಪುಸ್ತಕದಂಗಡಿಗಳು ಪ್ರಸಿದ್ಧ. ಮಾರುಕಟ್ಟೆ ಪ್ರದೇಶಗಳನ್ನು ಅಚ್ಚುಕಟ್ಟಾಗಿ ಯೋಜಿಸಿದಂತಹ ನಗರವಾದ ಮೈಸೂರಿನಲ್ಲಿ ಈ ಪುರಾತನ ಕಟ್ಟಡದ ಹಿರಿಮೆ ಹೆಚ್ಚಿನದು. ಜೊತೆಗಿದು ಮೈಸೂರಿನ ವಾಸ್ತುಶಿಲ್ಪದ ಅಚ್ಚರಿಗಳಲ್ಲಿಯೂ ಒಂದು. 1892ರ ನವೆಂಬರ್10ರಂದು ಅಂದಿನ ಬ್ರಿಟಿಷ್ ವೈಸರಾಯ್ ಲ್ಯಾನ್ಸ್‌ಡೌನ್ ಅವರು ಮೈಸೂರಿಗೆ ಭೇಟಿ ನೀಡಿದ್ದರು. ಈ ಭೇಟಿಯ ನೆನಪನ್ನು ಶಾಶ್ವತಗೊಳಿಸುವುದಕ್ಕಾಗಿ ಲೋಕೋಪಯೋಗಿ ಇಲಾಖೆ ಈ ಕಟ್ಟಡ ನಿರ್ಮಿಸಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಇಷ್ಟೆಲ್ಲಾ ಚರಿತ್ರೆಯನ್ನು ಹೊಂದಿರುವ ಈ ಕಟ್ಟಡದ ಕಾಯಕಲ್ಪದ ವಿಚಾರ ಕಾನೂನಿನ ಹೋರಾಟವಾಗಿ ಪರಿಣಮಿಸಿರುವುದು ವಿಷಾದದ ವಿಷಯ. ಇನ್ನು ಶಿಥಿಲಾವಸ್ಥೆ ತಲುಪಿರುವ ಈ ಕಟ್ಟಡ ಬಳಕೆಯೋಗ್ಯವಲ್ಲ ಎಂಬ ನೆಪದಲ್ಲಿ ಕಟ್ಟಡವನ್ನೇ ಕೆಡಹುವ ಸಾಧ್ಯತೆಗಳಿವೆ ಎಂಬಂತಹ ಕಳವಳವೂ ಕೆಲವು ವಲಯಗಳಲ್ಲಿ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಜವಾಹರಲಾಲ್ ನೆಹರೂ ನಗರ ಪುನಶ್ಚೇತನ ಯೋಜನೆಯಲ್ಲಿ(ಜೆಎನ್ ನರ್ಮ್) ಮೈಸೂರು ನಗರದ ಪುರಾತನ, ಐತಿಹಾಸಿಕ ಕಟ್ಟಡಗಳು ಹಾಗೂ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮವನ್ನು ಎರಡೂವರೆ ವರ್ಷಗಳ ಹಿಂದೆ ಪ್ರಕಟಿಸಲಾಗಿತ್ತು. ಆದರೆ ಈ ಸಂಬಂಧದಲ್ಲಿ ಈ ಕಟ್ಟಡಕ್ಕೆ ಸಂಬಂಧಿಸಿದಂತೆ ಯಾವ ಕಾಯಕಲ್ಪ ಯೋಜನೆಯೂ ಜಾರಿಯಾಗದೆ ಇರುವುದು ವಿಷಾದನೀಯ. ಇದು ನಮ್ಮ ಆಡಳಿತಗಾರರಲ್ಲಿರುವ ಬೌದ್ಧಿಕ ದಾರಿದ್ರ್ಯಕ್ಕೆ ಪ್ರತೀಕ. ಇನ್ನಾದರೂ ಜಿಲ್ಲಾ ಆಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ಬಾಡಿಗೆದಾರರು ಸಂಘರ್ಷದ ಹಾದಿ ತೊರೆದು ಈ ಪಾರಂಪರಿಕ ಕಟ್ಟಡದ ಪುನಶ್ಚೇತನಕ್ಕೆ ಕೈಜೋಡಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.