ಲೈಂಗಿಕ ಕಿರುಕುಳಕ್ಕೆ ತಡೆ ಬೀಳಲಿ ದುಡಿಯುವ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ಪರಿಹಾರ)ಮಸೂದೆ, 2010ಕ್ಕೆ ಲೋಕಸಭೆ ಅನುಮೋದನೆ ನೀಡಿದೆ. ಅನೇಕ ವರ್ಷಗಳಿಂದ ಚರ್ಚೆಯಲ್ಲಿದ್ದ ಈ ಮಸೂದೆಗೆ ಕಡೆಗೂ ಲೋಕಸಭೆಯಲ್ಲಿ ಅಂಗೀಕಾರ ದೊರೆತಿರುವುದು ಮಹಿಳಾ ಹಕ್ಕುಗಳ ರಕ್ಷಣೆಯಲ್ಲಿ ಪ್ರಮುಖ ಹೆಜ್ಜೆ. ಲೈಂಗಿಕ ಕಿರುಕುಳವನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಭಾರತದಲ್ಲಿ 1997ರ ಆಗಸ್ಟ್ 13ರಂದು ಸುಪ್ರೀಂ ಕೋರ್ಟ್ ಗುರುತಿಸಿತು. `ವಿಶಾಖಾ ತೀರ್ಪು~ ಎಂದು ಹೆಸರಾದ ಈ ತೀರ್ಪಿನಲ್ಲಿ ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಹಾಗೂ ಪರಿಹಾರಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಸುಪ್ರೀಂಕೋರ್ಟ್ ಪ್ರಕಟಿಸಿತ್ತು. ಈಗ 15 ವರ್ಷಗಳ ಸುದೀರ್ಘ ಅವಧಿಯ ನಂತರ ಇದು ಕಾನೂನಾಗುವ ಹಂತ ತಲುಪಿದೆ. ಲೈಂಗಿಕ ಕಿರುಕುಳದ ವಿವರಣೆಯನ್ನು ಸಮಗ್ರವಾಗಿ ಈ ಮಸೂದೆಯಲ್ಲಿ ನೀಡಲಾಗಿದೆ. ಈ ಪ್ರಕಾರ, ಲೈಂಗಿಕ ಕಿರುಕುಳ ಎಂದರೆ ಇಷ್ಟವಾಗದ ಲೈಂಗಿಕ ಎನಿಸುವ ವರ್ತನೆ. ಇದು ನೇರವಾಗಿರಬಹುದು, ಪರೋಕ್ಷವಾಗಿರಬಹುದು. ದೈಹಿಕ ಸಂಪರ್ಕ, ಲೈಂಗಿಕ ಅಪೇಕ್ಷೆ ತೋರ್ಪಡಿಕೆ ಅಥವಾ ಲೈಂಗಿಕ ಕೃಪೆಗೆ ಒತ್ತಡ ಅಥವಾ ಕೋರಿಕೆ, ಅಶ್ಲೀಲ ಚಿತ್ರ ತೋರಿಸುವುದು ಅಥವಾ ಇನ್ನಿತರ ಯಾವುದೇ ಇಷ್ಟವಾಗದ ಲೈಂಗಿಕ ಸ್ವರೂಪದ ದೈಹಿಕ ವರ್ತನೆ ಅಥವಾ ಮಾತುಗಳ ವರ್ತನೆ. ಸರ್ಕಾರಿ ಹಾಗೂ ಖಾಸಗಿ ವಲಯಗಳ ಕೆಲಸ ಮಾಡುವ ಸ್ಥಳಗಳಲ್ಲಿ ಸಮಾನತೆ, ಸ್ವಾತಂತ್ರ್ಯ ಹಾಗೂ ಬದುಕುವ ಹಕ್ಕನ್ನು ಈ ಮಸೂದೆ ಕಲ್ಪಿಸಿಕೊಡುತ್ತದೆ. ಲೈಂಗಿಕ ಕಿರುಕುಳ ಆರೋಪದ ದೂರುಗಳನ್ನಾಲಿಸಿ ಪರಿಹಾರಸೂಚಿಸುವುದಕ್ಕಾಗಿ ಎಲ್ಲಾ ಕಚೇರಿಗಳು, ಆಸ್ಪತ್ರೆಗಳು, ಹಾಗೂ ಸಂಸ್ಥೆಗಳು ಆಂತರಿಕ ದೂರು ಸಮಿತಿಗಳನ್ನು ಹೊಂದುವುದು ಕಡ್ಡಾಯವಾಗುತ್ತದೆ. ಮನೆಗೆಲಸದವರು, ಕೂಲಿ ಕಾರ್ಮಿಕರಂತಹ ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರು ಸಲ್ಲಿಸುವ ದೂರುಗಳನ್ನು ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಗಳು ಪರಿಶೀಲಿಸುತ್ತವೆ. 2010ರಲ್ಲಿ ಮಂಡಿಸಲಾದ ಮೂಲ ಮಸೂದೆಯಲ್ಲಿ ಮನೆಗೆಲಸದ ಮಹಿಳೆಯರು ಸೇರಿರಲಿಲ್ಲ. ನಂತರ ಚರ್ಚೆಗಳ ಫಲವಾಗಿ ಮನೆಗೆಲಸದವರೂ ಈ ಮಸೂದೆ ವ್ಯಾಪ್ತಿಗೆ ಸೇರ್ಪಡೆಯಾದರು. ಕಿರುಕುಳಕ್ಕೊಳಗಾಗುವ ಮಹಿಳೆಯರ ಪಟ್ಟಿಯಲ್ಲಿ ಅಸಂಘಟಿತ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ರೋಗಿಗಳು ಸೇರುತ್ತಾರೆ. ಆದರೆ ಕೃಷಿಕ ಮಹಿಳೆಯರನ್ನು ಹೊರಗಿಟ್ಟಿರುವುದು ಈ ಮಸೂದೆಯ ದೊಡ್ಡ ದೋಷ. ಸಶಸ್ತ್ರ ಪಡೆಗಳಲ್ಲಿನ ಮಹಿಳೆಯರನ್ನೂ ಈ ಮಸೂದೆ ಒಳಗೊಳ್ಳುವುದಿಲ್ಲ. ಜೊತೆಗೆ `ಸುಳ್ಳು ದೂರು~ ನೀಡಿದ ಮಹಿಳೆಗೆ ಶಿಕ್ಷೆ ವಿಧಿಸಲು ಅವಕಾಶ ನೀಡಿರುವುದು, ಈ ಕಾನೂನಿನ ಒಟ್ಟು ಆಶಯಕ್ಕೇ ಧಕ್ಕೆ ತಂದಿದೆ. ಮೊದಲೇ ಲೈಂಗಿಕ ಕಿರುಕುಳಗಳು ದೂರುಗಳಾಗಿ ದಾಖಲಾಗುವುದೇ ಕಡಿಮೆ. ದುಡಿಯುವ ಸ್ಥಳಗಳಲ್ಲಿನ ಶ್ರೇಣೀಕೃತ ವ್ಯವಸ್ಥೆಯಲ್ಲಿ, ಕಾನೂನು ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಶಕ್ತಿ ಯಾರೇ ಮೇಲಧಿಕಾರಿ ಅಥವಾ ಉಸ್ತುವಾರಿ ಸ್ಥಾನದಲ್ಲಿರುವ ವ್ಯಕ್ತಿಗೆ ಇದ್ದೇ ಇರುತ್ತದೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳುವುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.