ಮೀಸಲಾತಿ ರಾಜಕೀಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸರ್ಕಾರಿ ಹುದ್ದೆಗಳ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆ ವಿವಾದಕ್ಕೆ ಸಿಕ್ಕಿರುವುದರಲ್ಲಿ ಅಚ್ಚರಿಯೇನಿಲ್ಲ. ಅವಸರದಲ್ಲಿ ಈ ಮಸೂದೆಯನ್ನು ರೂಪಿಸುವುದರ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರಕ್ಕೆ ಪರಿಶಿಷ್ಟರ ಕಲ್ಯಾಣದ ಉದ್ದೇಶಕ್ಕಿಂತಲೂ ಹೆಚ್ಚಾಗಿ ಓಲೈಕೆಯ ಮೂಲಕ ಗಳಿಸುವ ರಾಜಕೀಯ ಲಾಭದ ಲೆಕ್ಕಚಾರ ಇತ್ತೆನ್ನುವುದು ಸ್ಪಷ್ಟ. ಸರ್ಕಾರದ ಉದ್ದೇಶ ಪ್ರಾಮಾಣಿಕವಾಗಿದ್ದಿದ್ದರೆ ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಮಾಯಾವತಿ ಸರ್ಕಾರದ ನಿರ್ಧಾರವನ್ನು ರದ್ದುಪಡಿಸಿದ್ದ ಸುಪ್ರೀಂಕೋರ್ಟ್ ಎತ್ತಿರುವ ಪ್ರಮುಖ ಪ್ರಶ್ನೆಗಳ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಪೂರ್ವದಲ್ಲಿ ಆ ಸಮುದಾಯದ ಹಿಂದುಳಿಯುವಿಕೆ, ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯದ ಕೊರತೆ ಮತ್ತು ಆಡಳಿತದಲ್ಲಿ ದಕ್ಷತೆಯ ಮೇಲೆ ಆಗುವ ಪರಿಣಾಮವನ್ನು ತಿಳಿದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿತ್ತು. ತರಾತುರಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮಸೂದೆಯನ್ನು ರೂಪಿಸಿರುವ ಸರ್ಕಾರ ಅಗತ್ಯವಾದ ಪೂರ್ವಸಿದ್ದತೆ ಮಾಡಿಕೊಂಡಿಲ್ಲ. ಮೀಸಲಾತಿಯ ವಿವಾದ ತನ್ನ ಮುಂದೆ ಬಂದಾಗಲೆಲ್ಲ ಸುಪ್ರೀಂಕೋರ್ಟ್ ಅದರ ಸಮರ್ಥನೆಗೆ ಬೇಕಾದ ಅಂಕಿಅಂಶಗಳ ಆಧಾರವನ್ನು ಕೇಳುತ್ತಲೇ ಬಂದಿದೆ. ಇದನ್ನು ಒದಗಿಸಲು ಪ್ರತಿಬಾರಿಯೂ ಸರ್ಕಾರ ವಿಫಲವಾಗಿದೆ. ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದಕ್ಕೆ ಕೆಲವು ಸಮರ್ಥನೆಗಳಿವೆ. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿವ್ಯವಸ್ಥೆ ಸರ್ಕಾರಿ ಇಲಾಖೆಗಳಲ್ಲಿಯೂ ಇದೆ. ಆದುದರಿಂದ ಅಲ್ಲಿನ ಎಲ್ಲ ನಿರ್ಧಾರಗಳನ್ನು ಅರ್ಹತೆಯ ಆಧಾರದಲ್ಲಿ ನಿಷ್ಪಕ್ಷಪಾತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗುವುದಿಲ್ಲ. ಸಾಮಾನ್ಯವಾಗಿ ಮೇಲ್ಜಾತಿಯವರೇ ಇಲಾಖಾ ಮುಖ್ಯಸ್ಥರಾಗಿರುವ ಕಾರಣ ಬಡ್ತಿ ನೀಡುವ ಮೊದಲು ಗಣನೆಗೆ ತೆಗೆದುಕೊಳ್ಳುವ ಸಿಬ್ಬಂದಿಯ `ಸಾಮರ್ಥ್ಯ ಮೌಲ್ಯಮಾಪನ ವರದಿ~ಯ ತಯಾರಿಕೆಯಲ್ಲಿ ದುರ್ಬಲರಿಗೆ ಅನ್ಯಾಯವಾಗಿರುವ ಉದಾಹರಣೆಗಳಿವೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ಆದ್ಯತೆ ಏನಿರಬೇಕೆಂಬುದು ಈಗಿನ ಪ್ರಶ್ನೆ. ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ಬಗ್ಗೆ ಯೋಚನೆ ಮಾಡುವ ಮೊದಲು ನೇಮಕದಲ್ಲಿ ಅವರಿಗೆ ನೀಡಲಾಗಿರುವ ಮೀಸಲಾತಿಯ ಅನುಷ್ಠಾನ ಕ್ರಮಬದ್ದವಾಗಿ ಆಗುತ್ತಿದೆಯೇ ಎಂಬುದನ್ನು ಸರ್ಕಾರ ಮೊದಲು ಪರಿಶೀಲಿಸಬೇಕು. ಕೇವಲ ಹತ್ತುವರ್ಷಗಳ ಅವಧಿಗೆಂದು ಜಾರಿಗೆ ಬಂದ ಮೀಸಲಾತಿಯನ್ನು 65 ವರ್ಷಗಳ ನಂತರವೂ ಮುಂದುವರಿಸಿಕೊಂಡುಹೋಗಬೇಕಾದ ಅನಿವಾರ್ಯತೆಗೆ ಹೊಣೆ ಯಾರು? ಒಟ್ಟು ಜನಸಂಖ್ಯೆಯ ಶೇಕಡಾ 22ರಷ್ಟಿರುವ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಅದೇ ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗವನ್ನು ಕಲ್ಪಿಸಲು ಯಾಕೆ ಸಾಧ್ಯವಾಗಿಲ್ಲ? ಮೀಸಲಾತಿಯ ಅವಕಾಶವನ್ನು ಮೊದಲು ಪಡೆದ ಒಳಗಿನ ಬಲಾಢ್ಯರೇ ಅದನ್ನು ಮುಷ್ಠಿಯಲ್ಲಿಟ್ಟುಕೊಂಡ ಕಾರಣದಿಂದಾಗಿ ಸೃಷ್ಟಿಯಾಗಿರುವ ಆಂತರಿಕ ಸಂಘರ್ಷಕ್ಕೆ `ಕೆನೆಪದರ~ ಇಲ್ಲವೇ `ಒಳಮೀಸಲಾತಿ~ ಪರಿಹಾರವಾಗಬಹುದೇ? ಇವೆಲ್ಲದರ ಜತೆಯಲ್ಲಿ ಆರ್ಥಿಕ ಉದಾರೀಕರಣದ ಕಾರಣದಿಂದಾಗಿ ಖಾಸಗಿ ರಂಗದಲ್ಲಿ ಅವಕಾಶ ಹೆಚ್ಚಿ ಸರ್ಕಾರಿ ಹುದ್ದೆಗಳ ಮೀಸಲಾತಿಯೇ ಅಪ್ರಸ್ತುತವಾಗುತ್ತಿರುವುದರಿಂದ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಪುನರ್‌ವ್ಯಾಖ್ಯಾನ ಮಾಡುವ ಅಗತ್ಯ ಇಲ್ಲವೇ? ಸರ್ಕಾರ ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಇದರ ಬದಲಿಗೆ ಅದು ವಿವಾದದ ದೂಳೆಬ್ಬಿಸಿ ಎಲ್ಲರನ್ನೂ ಕುರುಡರನ್ನಾಗಿ ಮಾಡಲು ಹೊರಟಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.