ದುರಂತಕ್ಕೆ ಯಾರು ಹೊಣೆ? ತಮಿಳುನಾಡಿನ ಶಿವಕಾಶಿ ಸಮೀಪದ ಪಟಾಕಿ ಕಾರ್ಖಾನೆಯೊಂದರಲ್ಲಿ ನಡೆದ ಅಗ್ನಿದುರಂತ ತಪ್ಪಿಸಬಹುದಾಗಿದ್ದ ದುರಂತ. ಆಡಳಿತದ ಅಸೀಮ ನಿರ್ಲಕ್ಷ್ಯಕ್ಕೆ ಇದೊಂದು ಉದಾಹರಣೆ. ಸದಾ ಆಕಸ್ಮಿಕಗಳನ್ನು ಮಡಿಲಲ್ಲಿಟ್ಟುಕೊಂಡೇ ಉತ್ಪಾದನೆಯಾಗುವ ಕೈಗಾರಿಕೆಗಳ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ನಿಗಾ ವಹಿಸಬೇಕಾಗುತ್ತದೆ ಎನ್ನುವುದನ್ನು ಈ ದುರಂತ ಮತ್ತೊವ್ಮೆು ನೆನಪಿಸಿದೆ. ಶಿವಕಾಶಿಯ ಪಟಾಕಿ ಉದ್ಯಮ ಇವತ್ತು ಹುಟ್ಟಿಕೊಂಡದ್ದಲ್ಲ. ನಲವತ್ತು ವರ್ಷಗಳ ಇತಿಹಾಸವಿರುವ ಶಿವಕಾಶಿ, ದೇಶದ ಶೇ.90 ರಷ್ಟುಪಟಾಕಿ ಬೇಡಿಕೆಯನ್ನು ಪೂರೈಸುತ್ತಿದೆ. ಇದೊಂದೇ ಸ್ಥಳದಲ್ಲಿ ಸುಮಾರು 450 ಪಟಾಕಿ ಕಾರ್ಖಾನೆಗಳಿದ್ದು, ನಲವತ್ತು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸುಮಾರು ಎರಡು ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುವ ಈ ಕಾರ್ಖಾನೆಗಳಲ್ಲಿ ದೀಪಾವಳಿ ಸಮಯದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಸಾವಿರಾರು ಜನ ದಿನಗೂಲಿಗಳಾಗಿ ದುಡಿಯುತ್ತಾರೆ. ಸ್ಫೋಟದ ಅಪಾಯವನ್ನು ಎದುರಿಗಿಟ್ಟುಕೊಂಡೇ ಕೆಲಸ ಮಾಡುವ ಕಾರ್ಮಿಕರಿರುವ ಇಂತಹ ಕಾರ್ಖಾನೆಗಳಿಗೆ ರೂಪಿಸಲಾಗಿರುವ ನಿಯಮಾವಳಿಗಳು ಇತರೆ ಕೈಗಾರಿಕೆಗಳಿಗಿಂತ ಕಠಿಣವಾಗಿರಬೇಕು. ಅಲ್ಲದೆ ಅದು ಜಾರಿಯಾಗುವಂತೆಯೂ ನೋಡಿಕೊಳ್ಳಬೇಕಾದದ್ದು ಕಾರ್ಮಿಕ ಇಲಾಖೆಯ ಕರ್ತವ್ಯ. ಹಲವು ವರ್ಷಗಳಿಂದ ಶಿವಕಾಶಿಯಲ್ಲಿನ ಪಟಾಕಿ ಕಾರ್ಖಾನೆಗಳಲ್ಲಿ ದುರಂತಗಳು ಸಂಭವಿಸುತ್ತಲೇ ಇವೆ. ವರದಿಯೊಂದರ ಪ್ರಕಾರ ಹನ್ನೆರೆಡು ವರ್ಷಗಳಲ್ಲಿ 237 ಮಂದಿ ಪಟಾಕಿ ಕಾರ್ಖಾನೆಗಳಲ್ಲಿ ಸಂಭವಿಸಿದ ದುರಂತಗಳಲ್ಲಿ ಸತ್ತಿದ್ದಾರೆ. ಆದರೆ ಇದುವರೆಗೆ ಈ ಸಂಬಂಧ ಕಠಿಣ ಕ್ರಮಗಳನ್ನು ತೆಗೆದುಕೊಂಡ ಉದಾಹರಣೆ ಕಾಣುತ್ತಿಲ್ಲ. ಕ್ರಮ ಕೈಗೊಳ್ಳದೆ ಪ್ರತೀ ಸಲ ದುರಂತ ಸಂಭವಿಸಿದಾಗ ಶೋಕ ವ್ಯಕ್ತಪಡಿಸುವುದು, ಪರಿಹಾರ ವಿತರಿಸುವುದು ನಡೆದೇ ಇದೆ. ಇಂತಹ ನಾಟಕಗಳಿಂದ ಸಮಸ್ಯೆಗೆ ಪರಿಹಾರ ಸಿಗದು. ಹತ್ತು ಎಕರೆಯಷ್ಟಿದ್ದ ಪಟಾಕಿ ಕಾರ್ಖಾನೆಯಲ್ಲಿ 48 ಷೆಡ್‌ಗಳು ಸಂಪೂರ್ಣ ಭಸ್ಮವಾಗಿವೆ. ಅತಿ ಸೂಕ್ಷ್ಮ ರಾಸಾಯನಿಕಗಳನ್ನು ಒಂದೇ ಕಡೆ ದಾಸ್ತಾನುಮಾಡಿದ್ದು ಕೂಡ ದುರಂತಕ್ಕೆ ಕಾರಣವಾಗಿರಬಹುದು. ವಿಷಯಜ್ಞಾನವಿಲ್ಲದ ಅನನುಭವಿಗಳನ್ನು ಸಮಯಾನುಕೂಲಕ್ಕೆ ನೇಮಕಮಾಡಿಕೊಂಡದ್ದರ ಫಲ ಇದು. ಪಟಾಕಿ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರೂ ಇದ್ದಾರೆ. ಯಾವ ಕಾರ್ಮಿಕರಿಗೂ ಜೀವವಿಮೆಯೂ ಇಲ್ಲ. ಯಾವ ರೀತಿಯ ತರಬೇತಿಗಳೂ ಇಲ್ಲ. ಕಡಿಮೆ ಕೂಲಿಗೆ ಕೆಲಸಕ್ಕೆ ಸೇರಿಸಿಕೊಂಡು, ಬೇಡಿಕೆ ಪೂರೈಸುವ ಸಲುವಾಗಿ ಹಗಲೂ ಇರುಳೂ ದುಡಿಸುವುದರಿಂದ ಕಾರ್ಮಿಕರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಆಕಸ್ಮಿಕಗಳಿಗೆ ಇದೂ ಒಂದು ಕಾರಣ. ಈ ವಿಷಯದಲ್ಲಿ ಕೂಡ ಕಾರ್ಮಿಕ ಇಲಾಖೆ ಕಣ್ಮುಚ್ಚಿಕೊಂಡು ಕುಳಿತಿದೆ. ಯಾವುದೇ ಕ್ಷಣ ಯಾವುದೇ ರೀತಿಯ ಅಪಾಯ ಸಂಭವಿಸಬಹುದು ಎನ್ನುವುದು ಯಾರೇ ಆದರೂ ಊಹಿಸಬಹುದಾದ ಸಂಗತಿ. ಆದರೆ ಇಂತಹ ನಗರದಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ. ಅಗ್ನಿಶಾಮಕದಳ ಸಿಬ್ಬಂದಿಯೂ ಮುಖಗವುಸು ಇಲ್ಲದೆ ಪರದಾಡಿದ ವರದಿಗಳು ಬಂದಿವೆ. ಕಾರ್ಖಾನೆಗಳ್ಲ್ಲಲೂ ಸುರಕ್ಷಾ ಸಾಧನಗಳಿಲ್ಲ. ಅಗ್ನಿಶಾಮಕ ಕೇಂದ್ರಗಳೂ ಸಜ್ಜಾಗಿಲ್ಲ. ಆಸ್ಪತ್ರೆಗಳಲ್ಲೂ ವ್ಯವಸ್ಥೆಗಳಿಲ್ಲ. ಇದು ನಾಚಿಕೆಗೇಡಿನ ವಿಷಯ. ಮುಂದಿನ ದಿನಗಳಲ್ಲಿ ಇಂತಹ ಆಕಸ್ಮಿಕಗಳು ಮರುಕಳಿಸದಂತೆ ಎಚ್ಚರವಹಿಸಬೇಕಾದ ಹೊಣೆಗಾರಿಕೆಯನ್ನು ಸರ್ಕಾರ ಹೊರಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.