ಆಡಿದ್ದನ್ನು ಮಾಡಿತೋರಿಸಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಮದುವೆ ಆಗುವುದಿಲ್ಲ ಎಂದು ಹೇಳಿರುವುದು ಅವರಿಗಷ್ಟೇ ಸಂಬಂಧಿಸಿದ ವೈಯಕ್ತಿಕ ವಿಚಾರ. `ಪ್ರಧಾನಿಯಾಗುವ ಇಚ್ಛೆಯಿದೆಯೇ?' ಎಂಬ ಪ್ರಶ್ನೆಯೇ ಸರಿಯಾದುದಲ್ಲ ಎಂದು ಅವರು ಪ್ರತಿಕ್ರಿಯಿಸಿರುವುದು ಕೂಡಾ ಒಪ್ಪುವಂತಹದ್ದೇ. ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣವನ್ನು ವರ್ಷಗಳಿಂದ ನೋಡುತ್ತಾ ಬಂದವರಿಗೆ ಈ ಪ್ರಶ್ನೆ ಅಪ್ರಸ್ತುತವಾಗಿ ಕಾಣಬಹುದು. ಆದರೆ ಕಾಂಗ್ರೆಸ್‌ನೊಳಗಿನ ಹೈಕಮಾಂಡ್ ಸಂಸ್ಕೃತಿಗೆ ಅವರು ವ್ಯಕ್ತಪಡಿಸಿರುವ ವಿರೋಧ ಮತ್ತು ಜನಪ್ರತಿನಿಧಿಗಳ ಸಬಲೀಕರಣ ಹಾಗೂ ನಾಯಕತ್ವದ ತಯಾರಿ ಬಗ್ಗೆ ಅವರು ಆಡಿರುವ ಮಾತುಗಳು ಚರ್ಚೆಗೆ ಯೋಗ್ಯವಾದುದು. ಈ ಮೂರೂ ವಿಚಾರಗಳ ನಡುವೆ ಪರಸ್ಪರ ಸಂಬಂಧ ಇದೆ. ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಮತ್ತು ಎಲ್ಲವನ್ನೂ ದೆಹಲಿಯಿಂದಲೇ ಹೇರುವ ಕಾರ್ಯವಿಧಾನವೇ ಹೈಕಮಾಂಡ್ ಸಂಸ್ಕೃತಿ. ಇದರ ಕಾರಣದಿಂದಾಗಿಯೇ ಹಲವಾರು ಸ್ವಾಭಿಮಾನಿ ಮತ್ತು ಜನರಿಗೆ ಪ್ರಿಯರಾದ ನಾಯಕರು ಕಾಂಗ್ರೆಸ್ ಪಕ್ಷ ತೊರೆದುಹೋಗಿದ್ದಾರೆ. ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಗೊಳ್ಳಲು ಕೂಡಾ ಕಾಂಗ್ರೆಸ್ ಪಕ್ಷದ ಈ ಸಂಸ್ಕೃತಿ ಕಾರಣ. ಪಕ್ಷದ ಜಿಲ್ಲಾ ಸಮಿತಿಯ ಅಧ್ಯಕ್ಷನನ್ನು ಕೂಡಾ ನೇಮಿಸಲು ಹೈಕಮಾಂಡ್ ತಲೆಯಾಡಿಸಬೇಕು ಎನ್ನುವ ಗುಲಾಮಗಿರಿಯನ್ನು ಕಾಂಗ್ರೆಸ್ ಪೋಷಿಸಿಕೊಂಡು ಬಂದಿದೆ. ರಾಹುಲ್ ಇದರ ವಿರುದ್ಧ ದನಿ ಎತ್ತಿದಂತೆ ಕಾಣುತ್ತಿದೆ. 2004ರಲ್ಲಿ ಲೋಕಸಭೆಗೆ ಸ್ಪರ್ಧಿಸುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದ ರಾಹುಲ್‌ಗಾಂಧಿ, ಕಳೆದ ಒಂಬತ್ತು ವರ್ಷಗಳಲ್ಲಿ ಇಂತಹ ಆದರ್ಶದ ಮಾತುಗಳನ್ನು ಹಲವಾರು ಬಾರಿ ಆಡಿದ್ದಾರೆ. ಯುವಕಾಂಗ್ರೆಸ್ ಅಧ್ಯಕ್ಷರನ್ನು ಚುನಾವಣೆಯ ಮೂಲಕ ಆರಿಸುವ ಕ್ರಮವೊಂದನ್ನು ಹೊರತುಪಡಿಸಿದರೆ ಉಳಿದಂತೆ ಅವರ ಹೆಚ್ಚಿನ ಆಲೋಚನೆಗಳು ಮಾತುಗಳಲ್ಲಿಯೇ ಕರಗಿಹೋಗಿವೆ. ಆಡಿರುವುದನ್ನು ಮಾಡಿ ತೋರಿಸಲು ಈಗ ಸರಿಯಾದ ಕಾಲ. ಈ ವರ್ಷ ದೇಶದ ಒಂಬತ್ತು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ, ಅದರ ಬೆನ್ನಲ್ಲಿಯೇ ಲೋಕಸಭಾ ಚುನಾವಣೆ ಎದುರಾಗಲಿದೆ. ಈ ಚುನಾವಣೆಗಳಿಗೆ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಹುಲ್ ಮೊದಲು ಹೈಕಮಾಂಡ್ ಸಂಸ್ಕೃತಿಯನ್ನು ಮುರಿಯಲಿ. ಜಿಲ್ಲೆ ಮತ್ತು ಬ್ಲಾಕ್ ಮಟ್ಟಗಳಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡುವ ಹೊಸಪ್ರಕ್ರಿಯೆಯನ್ನು ಪ್ರಾರಂಭಿಸಲಿ. ರಾಹುಲ್‌ಗಾಂಧಿಯವರೇ ರಾಜ್ಯಗಳಿಗೆ ಭೇಟಿ ನೀಡಿ ಸ್ಥಳೀಯ ನಾಯಕರ ಅಭಿಪ್ರಾಯವನ್ನು ಮುಕ್ತವಾಗಿ ಪಡೆದು ಪಾರದರ್ಶಕ ರೀತಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಿ. ಸಂಸದರು ಮತ್ತು ಶಾಸಕರ ಸಬಲೀಕರಣವಾಗಬೇಕಾದರೆ ಮೊದಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕಾಗುತ್ತದೆ. ಭ್ರಷ್ಟರು, ಪಕ್ಷಾಂತರಿಗಳು ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿರುವವರನ್ನು ದೂರ ಇಟ್ಟು ಪ್ರಾಮಾಣಿಕತೆ, ಸೇವಾಮನೋಭಾವ ಮತ್ತು ಸಚ್ಚಾರಿತ್ರ್ಯ ಹೊಂದಿರುವ ವ್ಯಕ್ತಿಗಳಿಗೆ ಅವಕಾಶ ನೀಡಿದಾಗ ಮಾತ್ರ ಇದು ಸಾಧ್ಯ. ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರು ಕಾಂಗ್ರೆಸ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಪಕ್ಷದೊಳಗಿರುವ `ಅಧಿಕಾರದ ದಲ್ಲಾಳಿ'ಗಳನ್ನು ಹೊಡೆದೋಡಿಸುವ ಪ್ರತಿಜ್ಞೆ ಮಾಡಿದ್ದರು. ಅದು ಅವರಿಗೆ ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ಬದಲಾಗದ ಇಂದಿನ ಕಾಂಗ್ರೆಸ್ ಪಕ್ಷವೇ ಸಾಕ್ಷಿ. ತಂದೆಗೆ ಸಾಧ್ಯವಾಗದೆ ಇರುವುದನ್ನು ಮಾಡಿತೋರಿಸುವ ಇಚ್ಛಾಶಕ್ತಿಯನ್ನು ಮಗ ತೋರಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.