ಎಫ್‌ಡಿಐಗೆ ವಿರೋಧ ಬೇಡ ಬಹು ಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ, ಡೀಸೆಲ್ ಬೆಲೆ ಏರಿಕೆ, ಅಡುಗೆ ಸಿಲಿಂಡರ್‌ಗಳ (ಎಲ್‌ಪಿಜಿ) ಸಬ್ಸಿಡಿ ಮಿತಿ 6ಕ್ಕೆ ಸೀಮಿತಗೊಳಿಸುವುದೂ ಸೇರಿದಂತೆ `ಯುಪಿಎ-2~ ಸರ್ಕಾರವು ಆರ್ಥಿಕ ಸುಧಾರಣೆಯ ಕೆಲ ದಿಟ್ಟ ನಿರ್ಧಾರ ಕೈಗೊಂಡಿದೆ . ಈ ಕ್ರಮಗಳು ಅರ್ಥವ್ಯವಸ್ಥೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದರೂ, ಪ್ರತಿಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ವೃಥಾ ಹುಯಿಲೆಬ್ಬಿಸಿ, ದಿಗಿಲು ಹುಟ್ಟಿಸುವ ಕೆಲಸ ಮಾಡುತ್ತಿವೆ. `ಎನ್‌ಡಿಎ~ ಅಧಿಕಾರದಲ್ಲಿದ್ದಾಗ, `ಎಫ್‌ಡಿಐ~ ಪರ ಒಲವು ಹೊಂದಿದ್ದ ಬಿಜೆಪಿ, ಈಗ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವುದು ಅದರ ಗೋಸುಂಬೆತನಕ್ಕೆ ಸಾಕ್ಷಿಯಾಗಿದೆ. ಸುಧಾರಣಾ ಕ್ರಮಗಳ ಫಲವಾಗಿ ಬದುಕಿನ ಗುಣಮಟ್ಟ ಹೆಚ್ಚಿ, ನಗರ ಪ್ರದೇಶದ ಮಧ್ಯಮ ವರ್ಗದವರು ತನ್ನ ಕೈಬಿಟ್ಟಾರು ಎನ್ನುವ ಅಳುಕು ಬಿಜೆಪಿಗೆ ಕಾಡುತ್ತಿರುವಂತಿದೆ. ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಗುರಿಯಾದ ಜನಸಾಮಾನ್ಯರ ನಿತ್ಯದ ಬದುಕಿನ ಮೇಲೆ ದುಬಾರಿ ಡೀಸೆಲ್, ಸೀಮಿತ ಸಂಖ್ಯೆಯ ಎಲ್‌ಪಿಜಿ ವಿತರಣೆಯು ಇನ್ನಷ್ಟು ಹೊರೆ ಹೇರಲಿರುವುದರಿಂದ ಜನಮಾನಸದಲ್ಲಿ ಸಹಜವಾಗಿಯೇ ಅಸಮಾಧಾನ ಸ್ಫೋಟಗೊಂಡಿದೆ. ಆದರೆ, ಮಂದಗತಿಯಲ್ಲಿ ಸಾಗುತ್ತಿರುವ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಇಂತಹ ದಿಟ್ಟ ಮತ್ತು ಅಪ್ರಿಯ ನಿರ್ಧಾರ ಅನಿವಾರ್ಯವಾಗಿತ್ತು. ಆರ್ಥಿಕ ಸುಧಾರಣಾ ಕ್ರಮಗಳು ಆರ್ಥಿಕ ಬೆಳವಣಿಗೆಗೆ ಕಾರಣವಾಗಿ ಜನರ ಜೀವನ ಮಟ್ಟವನ್ನು ಇನ್ನಷ್ಟು ಸುಧಾರಿಸಲಿವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸರಕುಗಳ ಮಾರಾಟ ಸಂಸ್ಥೆಯೊಂದು ಒಂದಕ್ಕಿಂತ ಹೆಚ್ಚು ಪ್ರತಿಸ್ಪರ್ಧಿ ಬ್ರಾಂಡ್‌ನ ವೈವಿಧ್ಯಮಯ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟ ಮಾಡುವ (ಬಹು ಬ್ರಾಂಡ್) ವಹಿವಾಟಿನಲ್ಲಿ, `ಎಫ್‌ಡಿಐ~ಗೆ ಅವಕಾಶ ಮಾಡಿಕೊಡುವುದರಿಂದ ದೇಶದ ಅರ್ಥ ವ್ಯವಸ್ಥೆಗೆ ಇನ್ನಷ್ಟು ಬಲ ಬರಲಿದೆ. `ಎಫ್‌ಡಿಐ~ಗೆ ಅನುಮತಿ ನೀಡುವುದು ಕೇಂದ್ರ ಮತ್ತು ರಾಜ್ಯಗಳ ಸಹವರ್ತಿ ಪಟ್ಟಿಯಲ್ಲಿ ಇರುವುದರಿಂದ ಬಹು ರಾಷ್ಟ್ರೀಯ ಸಂಸ್ಥೆಗಳ ಪ್ರವೇಶಕ್ಕೆ ರಾಜ್ಯಗಳ ಅನುಮತಿ ಕಡ್ಡಾಯ. ಜತೆಗೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಗೂ ಸೂಕ್ತ ತಿದ್ದುಪಡಿ ತರುವುದೂ ಅನಿವಾರ್ಯ. ಅಂತಿಮ ನಿರ್ಧಾರ ಕೈಗೊಳ್ಳುವ ಹೊಣೆ ರಾಜ್ಯ ಸರ್ಕಾರಗಳ ಮೇಲೆಯೇ ಇರುವುದರಿಂದ ಕೇಂದ್ರ ಸರ್ಕಾರವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಿಲ್ಲ. ಬಹುರಾಷ್ಟ್ರೀಯ ಸಂಸ್ಥೆಗಳಿಗೆ (ಎಂಎನ್‌ಸಿ) ರತ್ನಗಂಬಳಿ ಸ್ವಾಗತ ನೀಡುವುದರಿಂದ ಸರಕುಗಳು ಅಗ್ಗವಾಗಲಿವೆ. ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ಮಧ್ಯವರ್ತಿಗಳ ಹಾವಳಿ ದೂರವಾಗಲಿದೆ. ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ವಹಿವಾಟಿನ ಜುಟ್ಟು ಕೈವಶವಾಗುತ್ತಿದ್ದಂತೆ `ಎಂಎನ್‌ಸಿ~ಗಳ ಏಕಸ್ವಾಮ್ಯಕ್ಕೆ ಹಾದಿ ಮಾಡಿಕೊಡದಂತೆ ಆಡಳಿತಾರೂಢರು ಎಚ್ಚರವಹಿಸಬೇಕು. ರಾಜಕೀಯ ಪಕ್ಷಗಳು ತಮ್ಮ `ಚಿಲ್ಲರೆ~ ರಾಜಕಾರಣ ಮರೆತು ಸುಧಾರಣಾ ಕ್ರಮಗಳಿಗೆ ಒತ್ತಾಸೆಯಾಗಿ ನಿಲ್ಲಬೇಕಾಗಿದೆ. ಜನರಲ್ಲಿ ವೃಥಾ ಆತಂಕ ಮೂಡಿಸುವುದನ್ನು ಕೈಬಿಡಬೇಕಾಗಿದೆ. ಜನರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ರಾಜಕಾರಣಿಗಳು ಅತಿರೇಕದಿಂದ ವರ್ತಿಸುವುದೂ ತರವಲ್ಲ. ದೇಶಿ ಮಾರುಕಟ್ಟೆ ವಿಶಾಲವಾಗಿದ್ದು, ಕಿರಾಣಿ ಅಂಗಡಿ ಮತ್ತು ಬಹುರಾಷ್ಟ್ರೀಯ ದೈತ್ಯ ಸಂಸ್ಥೆಗಳ ವ್ಯಾಪಾರಕ್ಕೆ ವಿಪುಲ ಅವಕಾಶಗಳು ಇವೆ. ಬಹುರಾಷ್ಟ್ರೀಯ ಆಹಾರ ಸರಣಿ ಮಳಿಗೆಗಳ ವಿಷಯದಲ್ಲಿ ಈ ಮಾತು ಸಾಬೀತಾಗಿದೆ. ಸ್ಪರ್ಧೆ ಹೆಚ್ಚಿ ಬೆಲೆ ಕಡಿಮೆಯಾಗಿ, ಉತ್ತಮ ಗುಣಮಟ್ಟದ ಸರಕು ಲಭ್ಯವಾಗುವುದರಿಂದ ಅಂತಿಮವಾಗಿ ಗ್ರಾಹಕರಿಗೇ ಅನುಕೂಲವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.