ರೈಲ್ವೆ ಯೋಜನೆ ಜಾರಿ ಚುರುಕಾಗಲಿ ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗಿರುವ ರೈಲ್ವೆ ಯೋಜನೆಗಳ ಅನುಷ್ಠಾನ ಕುಂಟುತ್ತಾ ಸಾಗಿದೆ. ಇದರಿಂದ ಈ ಯೋಜನೆಗಳ ಯೋಜನಾ ವೆಚ್ಚ ಭಾರಿ ಪ್ರಮಾಣದಲ್ಲಿ ಏರುತ್ತಲೇ ಇದೆ. ಈ ಕುರಿತು ಯೋಜನಾ ಆಯೋಗದಿಂದಲೂ ಕಳವಳ ವ್ಯಕ್ತವಾಗಿದೆ. ವಾಸ್ತವವಾಗಿ ಈ ಯೋಜನೆಗಳು ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಂಡಿರುವಂತಹವು. ಎಂದರೆ, ಯೋಜನೆಯ ವೆಚ್ಚದ ಶೇಕಡ 50ರಷ್ಟು ಹಣವನ್ನು ರಾಜ್ಯ ಸರ್ಕಾರವೇ ನೀಡಲಿದೆ. ರೈಲ್ವೆ ಯೋಜನೆಗಳ ವಿಳಂಬ ತಪ್ಪಿಸುವುದಕ್ಕಾಗಿ, ಯೋಜನಾ ವೆಚ್ಚದಲ್ಲಿ ಶೇಕಡ 50ರಷ್ಟು ವೆಚ್ಚವನ್ನು ಭರಿಸುವ ಆಸಕ್ತಿ ತೋರಿದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿತ್ತು. ಆದಷ್ಟು ಬೇಗ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂಬುದು ಇದರ ಹಿಂದಿದ್ದ ಸದುದ್ದೇಶ. ವೆಚ್ಚ ಹಂಚಿಕೆ ಆಧಾರದಲ್ಲಿ ಒಟ್ಟು 14 ರೈಲ್ವೆ ಯೋಜನೆಗಳನ್ನು ರಾಜ್ಯದ್ಲ್ಲಲಿ ಈಗ ಕೈಗೆತ್ತಿಕೊಳ್ಳಲಾಗಿದೆ. ಹೀಗಿದ್ದೂ ನಿರೀಕ್ಷಿತ ಗತಿಯಲ್ಲಿ ಈ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂಬುದು ಖಂಡನೀಯ. ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವುದು ಬಿಟ್ಟು ಯೋಜನಾ ವೆಚ್ಚಗಳನ್ನು ಏರಿಸುವುದೇ ಕೆಲಸವಾದಂತಾಗಿದೆ ಎಂಬಂಥ ಟೀಕೆಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವ್ಯಕ್ತವಾಗಿವೆ. ವೆಚ್ಚ ಏರಿಕೆಯಿಂದ ರಾಜ್ಯ ಸರ್ಕಾರದ ಮೇಲೆ ಹೆಚ್ಚಾಗುವ ಹೊರೆಯ ಬಗ್ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಯೋಜನೆ ಜಾರಿಯಲ್ಲಿರುವ ಅಡೆತಡೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ದೂರುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಯೋಜನೆಗಳ ಜಾರಿಯಲ್ಲಿನ ವಿಳಂಬ ತಪ್ಪಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರಗಳೆರಡೂ ಒಟ್ಟಾಗಿ ಶ್ರಮಿಸಬೇಕಿರುವುದು ಅಗತ್ಯ. ಯೋಜನೆ ಜಾರಿಯಾದ 2-3 ವರ್ಷಗಳ್ಲ್ಲಲೇ ಯೋಜನೆ ಪೂರ್ಣಗೊಂಡರೆ ಮಾತ್ರ ಯೋಜನಾ ವೆಚ್ಚ ಹೆಚ್ಚಾಗುವುದಿಲ್ಲ. ಆ ರೀತಿ ಯಾವ ಯೋಜನೆಗಳೂ ಪೂರ್ಣಗೊಳ್ಳುತ್ತಿಲ್ಲ ಎಂಬುದೇ ವಿಷಾದದ ಸಂಗತಿ. ಮುಖ್ಯವಾಗಿ ರಾಜ್ಯದಲ್ಲಿ ರೈಲ್ವೆ ಯೋಜನೆಗಳು ಬಂದರೂ ಅವಕ್ಕೆ ಬೇಕಾದ ಭೂಮಿ ನೀಡುವಲ್ಲಿ ರಾಜ್ಯ ಸರ್ಕಾರ ಉದಾಸೀನ ತೋರುತ್ತಾ ಬಂದಿರುವುದು ಸುಳ್ಳಲ್ಲ. ಅನೇಕ ಜಿಲ್ಲೆಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಅರ್ಜಿಗಳು ಜಿಲ್ಲಾಧಿಕಾರಿಗಳ ಮುಂದೆ ದಶಕಗಳಷ್ಟು ಕಾಲದಿಂದ ಕೊಳೆಯುತ್ತಾ ಬಿದ್ದಿವೆ. ಇವುಗಳ ಪರಿಹಾರಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಬೆಂಗಳೂರು-ಮೈಸೂರು ರೈಲು ಮಾರ್ಗವನ್ನು ಜೋಡಿಮಾರ್ಗವಾಗಿ ಪರಿವರ್ತಿಸುವ ಕಾಮಗಾರಿ ಆರಂಭವಾಗಿ ದಶಕಗಳೇ ಕಳೆದಿವೆ. ಚನ್ನಪಟ್ಟಣದವರೆಗೆ ಮಾತ್ರ ಕಾಮಗಾರಿ ಮುಗಿದಿದೆ. ಮಂಡ್ಯ ಜಿಲ್ಲೆಯಲ್ಲಿ ಅನೇಕ ಕಡೆ ಇರುವ ಭೂಸ್ವಾಧೀನ ಸಮಸ್ಯೆಯನ್ನು ರಾಜ್ಯ ಸರ್ಕಾರಕ್ಕೆ ಇನ್ನೂ ಬಗೆಹರಿಸಿಕೊಳ್ಳಲಾಗಿಲ್ಲ. ಪರಿಸರ ಇಲಾಖೆಯ ಅನುಮೋದನೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ರೈಲ್ವೆ ಕಾಮಗಾರಿಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಹಿಂದಿನಿಂದಲೂ ಚುರುಕಾಗಿಲ್ಲ. ಹೀಗಾಗಿಯೇ ರೈಲ್ವೆಸೌಲಭ್ಯಗಳ ವಿಚಾರದಲ್ಲಿ ರಾಜ್ಯ ಹಿಂದುಳಿದಿರುವುದು ಮುಂದುವರಿದಿದೆ. ಇನ್ನಾದರೂ ಈ ವಿಚಾರದಲ್ಲಿ ತನ್ನ ಆಲಸ್ಯನೀತಿಯನ್ನು ರಾಜ್ಯಸರ್ಕಾರ ತೊರೆಯಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.