ಈ ತಪ್ಪು ಮತ್ತೆ ನಡೆಯದಿರಲಿ ಭಯೋತ್ಪಾದನಾ ಚಟುವಟಿಕೆಯ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಮುತಿಉರ್ ರೆಹಮಾನ್ ಸಿದ್ದಿಕಿ ಮತ್ತು ಸೈಯ್ಯದ್ ಯೂಸುಫ್ ನಾಲಬಂದ ಅವರನ್ನು ನ್ಯಾಯಾಲಯ ಆರೋಪಮುಕ್ತಗೊಳಿಸಿರುವುದು ರಾಜ್ಯದ ಪೊಲೀಸರ ಕಾರ್ಯವೈಖರಿ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ. ಭಯೋತ್ಪಾದನಾ ಕೃತ್ಯದ ಸಂಚಿನಲ್ಲಿ ಪಾಲ್ಗೊಂಡಿದ್ದರೆಂದು ಆರೋಪಿಸಿ ಸಿದ್ದಿಕಿ ಸೇರಿದಂತೆ ಹನ್ನೊಂದು ಮುಸ್ಲಿಮ್ ಯುವಕರನ್ನು ಪೊಲೀಸರು ಆರು ತಿಂಗಳ ಹಿಂದೆ ಬಂಧಿಸಿದ್ದರು. ಪೊಲೀಸ್ ಮತ್ತು ನ್ಯಾಯಾಂಗ ಬಂಧನದಲ್ಲಿ ಒಟ್ಟು ಆರು ತಿಂಗಳ ಕಾಲ ಇದ್ದರೂ ಸಿದ್ದಿಕಿ ಮತ್ತು ಸ್ನೇಹಿತನ ಮೇಲಿನ ಆರೋಪವನ್ನು ಸಾಬೀತುಗೊಳಿಸುವಂತಹ ಸಾಕ್ಷ್ಯಸಂಗ್ರಹ ಸಾಧ್ಯವಾಗದೆ ಇರುವುದು ಪೊಲೀಸರಿಗೆ ಆಗಿರುವ ಮುಖಭಂಗ. ಮೊದಲು ಬಂಧಿಸಿ ನಂತರ ಸಾಕ್ಷ್ಯಗಳನ್ನು ಹುಡುಕಲು ಹೊರಟಿರುವುದು ಪೊಲೀಸ್ ತನಿಖೆಯ ಅಡ್ಡಕಸುಬಿತನಕ್ಕೆ ಜ್ವಲಂತ ಉದಾಹರಣೆ. ಇನ್ನಿಬ್ಬರು ಪತ್ರಕರ್ತರಾದ ನವೀನ್ ಸೂರಿಂಜೆ ಮತ್ತು ಶಾಹೀನಾ ಪ್ರಕರಣದಲ್ಲಿಯೂ ಹೊರಿಸಲಾಗಿರುವ ಆರೋಪಗಳ ಪಟ್ಟಿ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯನ್ನೇ ಸಂಶಯಿಸುವಂತೆ ಮಾಡಿದೆ. ಸಿದ್ದಿಕಿ ಪ್ರಕರಣದಲ್ಲಿ `ಅಪರಾಧ ಸಾಬೀತಾಗುವವರೆಗೆ ಎಲ್ಲರೂ ನಿರಪರಾಧಿಗಳು' ಎಂಬ ನ್ಯಾಯಶಾಸ್ತ್ರದ ಮೂಲತತ್ವವನ್ನೇ ಪೊಲೀಸರು ಮರೆತುಬಿಟ್ಟಿದ್ದರು. ಸಿದ್ದಿಕಿಯೇ ಇಡೀ ಸಂಚಿನ ರೂವಾರಿ ಎಂಬಿತ್ಯಾದಿ ಅರೆಬೆಂದ ಮತ್ತು ಅತಿರಂಜಿತ ತನಿಖಾ ವರದಿಗಳನ್ನು ಮೊದಲ ದಿನದಿಂದಲೇ ಮಾಧ್ಯಮಗಳಿಗೆ ಸೋರಿಬಿಡುವ ಮೂಲಕ ಪೊಲೀಸರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಅಗ್ಗದ ಪ್ರಚಾರದಲ್ಲಿ ತೊಡಗಿದ್ದು ವಿಷಾದನೀಯ ಬೆಳವಣಿಗೆ. ಪೊಲೀಸರು ಹರಿಸಿದ ಊಹಾಪೋಹದ ಸುದ್ದಿಯ ಹೊಳೆಯಲ್ಲಿ ತೇಲಿಹೋದ ಮಾಧ್ಯಮಗಳು ಕೂಡಾ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ ಈ ಪ್ರಕರಣ. ಈ ಹಿನ್ನೆಲೆಯಲ್ಲಿ `ಪೊಲೀಸರು ಒತ್ತಡಕ್ಕೆ ಮಣಿದು ರಾಜಕೀಯ ದುರುದ್ದೇಶದಿಂದ ನನ್ನನ್ನು ಬಂಧಿಸಿದ್ದರು. ನಾನು ಮುಸ್ಲಿಂ ಆಗಿರುವುದೇ ಇದಕ್ಕೆ ಕಾರಣ ಇರಬಹುದು' ಎಂಬ ಸಿದ್ದಿಕಿ ಹೇಳಿಕೆಯನ್ನು ಹೇಗೆ ತಳ್ಳಿಹಾಕಲು ಸಾಧ್ಯ? `ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು' ಎನ್ನುವ ಕೋಮುದ್ವೇಷದ ಹೇಳಿಕೆಯನ್ನು ಸುಳ್ಳು ಮಾಡಿದೆ ಇತ್ತೀಚೆಗೆ ಕೇಳಿಬರುತ್ತಿರುವ ಹಿಂದೂ ಭಯೋತ್ಪಾದನೆಯ ಆರೋಪಗಳು. ಭಯೋತ್ಪಾದನೆಯೂ ಸೇರಿದಂತೆ ಯಾವುದೇ ಬಗೆಯ ಅಪರಾಧಗಳಿಗೆ ಜಾತಿ,ಧರ್ಮಗಳಿಲ್ಲ ಎನ್ನುವುದನ್ನು ಎಲ್ಲರೂ ಮೊದಲು ಅರ್ಥಮಾಡಿಕೊಳ್ಳಬೇಕು. ತಮ್ಮ ಸ್ವಾರ್ಥಕ್ಕಾಗಿ ಜಾತಿ,ಧರ್ಮವನ್ನು ದುರ್ಬಳಕೆ ಮಾಡುತ್ತಿರುವ ರಾಜಕಾರಣಿಗಳ ಆಟದಲ್ಲಿ ದಾಳಗಳಾಗದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು. ಸಾಮಾಜಿಕವಾಗಿ ಶೋಷಣೆಗೊಳಗಾಗಿರುವ, ಆರ್ಥಿಕವಾಗಿ ದುರ್ಬಲರಾಗಿರುವ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಜಾತಿಗಳ ಬಗ್ಗೆ ಪೊಲೀಸರು ಸೇರಿದಂತೆ ತನಿಖಾ ಸಂಸ್ಥೆಗಳು ಸೂಕ್ಷ್ಮವಾಗಿ ವರ್ತಿಸಬೇಕು. ಹಲವಾರು ಬಗೆಯ ಆರೋಪಗಳ ಹೊರತಾಗಿಯೂ ಸಾಮಾನ್ಯ ಜನ ಈಗಲೂ ಪೊಲೀಸ್ ಮತ್ತು ನ್ಯಾಯಾಂಗದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ, ಅದು ಹುಸಿಯಾಗಲು ಬಿಡಬಾರದು. ದೇಶದ ಸುಭದ್ರತೆಗೆ ಸವಾಲಾಗಿರುವ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಯಬೇಕಾದ ಈ ಕಾಲದಲ್ಲಿ ಯಾವುದೋ ಒಂದು ಧರ್ಮವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಅಪಾಯಕಾರಿ ಬೆಳವಣಿಗೆ. ಪೊಲೀಸರಲ್ಲಿ ಇಂತಹ ಪೂರ್ವಗ್ರಹಪೀಡಿತ ಧೋರಣೆ ಇರಲೇಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.