ಶಬ್ದ ಮಾಲಿನ್ಯ ನಿಯಂತ್ರಿಸಿ ರಾಷ್ಟ್ರದಲ್ಲಿ ಅತಿ ಹೆಚ್ಚು ಶಬ್ದ ಮಾಲಿನ್ಯವಿರುವ ನಗರಗಳ ಪೈಕಿ ಬೆಂಗಳೂರು ನಗರಕ್ಕೆ ಏಳನೇ ಸ್ಥಾನ ಸಿಕ್ಕಿದೆ. ಈಗಾಗಲೇ ವಾಯುಮಾಲಿನ್ಯ ಹಾಗೂ ವಾಹನ ದಟ್ಟಣೆಗಳಿಂದ ಕಂಗೆಟ್ಟಿರುವ ಜನತೆಗೆ ಇದು ಒಳ್ಳೆಯ ಸುದ್ದಿಯೇನೂ ಅಲ್ಲ. ಒಂದಾನೊಂದು ಕಾಲದಲ್ಲಿ ಉದ್ಯಾನನಗರಿ, ನಿವೃತ್ತರ ಸ್ವರ್ಗ ಎಂದೆಲ್ಲಾ ಬೆಂಗಳೂರಿಗೆ ಹೆಸರಿತ್ತು. ಆದರೆ ಈಗ ಬೆಂಗಳೂರಿನ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಲ್ಲೆಲ್ಲಾ ನಿಗದಿತ ಮಟ್ಟ ಮೀರಿ ಅತ್ಯಂತ ಹೆಚ್ಚು ಶಬ್ದ ಮಾಲಿನ್ಯ ಇದೆ ಎಂಬುದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಗಳಿಂದ ಬಹಿರಂಗವಾಗಿದೆ. ಅಚ್ಚರಿಯ ಸಂಗತಿ ಎಂದರೆ ಕೈಗಾರಿಕಾ ಪ್ರದೇಶಗಳ್ಲ್ಲಲೇ ಶಬ್ದ ಮಾಲಿನ್ಯ ಅಷ್ಟೊಂದು ಇಲ್ಲ. ಕೈಗಾರಿಕೆ ಪ್ರದೇಶಗಳಿಗೆ ಅನುಮತಿ ನೀಡಿರುವ ಮಿತಿಗಿಂತ (ಹಗಲಿನಲ್ಲಿ 75 ಡೆಸಿಬಲ್, ರಾತ್ರಿಗೆ 70 ಡೆಸಿಬಲ್) ಸ್ವಲ್ಪವೇ ಹೆಚ್ಚಿದೆ ಅಷ್ಟೆ. ಇದಕ್ಕೆ ತದ್ವಿರುದ್ಧವಾಗಿ ವಸತಿ ಹಾಗೂ ವಾಣಿಜ್ಯ ವಲಯಗಳಲ್ಲಿ ರಾತ್ರಿ ವೇಳೆ ಕೂಡ ಅನುಮತಿ ಇರುವ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಮಾಲಿನ್ಯವಿದೆ ಎಂಬುದು ಆತಂಕಕಾರಿ. ವಾಯು ಮಾಲಿನ್ಯ, ಜಲ ಮಾಲಿನ್ಯದಷ್ಟು ಗಂಭೀರವಾಗಿ ಶಬ್ದ ಮಾಲಿನ್ಯವನ್ನು ನಾವು ಪರಿಗಣಿಸುತ್ತಿಲ್ಲ. ವಾಹನ ದಟ್ಟಣೆ, ಕಟ್ಟಡ ನಿರ್ಮಾಣ ಚಟುವಟಿಕೆ, ಡೀಸೆಲ್ ಜನರೇಟರ್‌ಗಳು ಹಾಗೂ ಲೌಡ್ ಸ್ಪೀಕರ್‌ಗಳು ಶಬ್ದ ಮಾಲಿನ್ಯದ ಸಮಸ್ಯೆಗೆ ಕೊಡುಗೆ ಸಲ್ಲಿಸುತ್ತಿವೆ. ಲಾರಿ, ಬಸ್‌ಗಳಂತಹ ಭಾರಿ ವಾಹನಗಳ ಕರ್ಕಶ ಶಬ್ದಗಳು ಕಿವಿಕೊರೆಯುತ್ತವೆ. ಶ್ರವಣ ದೋಷದಂತಹ ಸಮಸ್ಯೆ, ನರ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಶಬ್ದ ಮಾಲಿನ್ಯ ಕಾರಣವಾಗುತ್ತಿದೆ. ಶಬ್ದ ಮಾಲಿನ್ಯದ ವಿವಿಧ ಸ್ವರೂಪಗಳನ್ನು ಕುರಿತಂತೆ ಸುಪ್ರೀಂಕೋರ್ಟ್ ಈ ಹಿಂದೆ ತೀವ್ರ ಟೀಕೆಗಳನ್ನು ಮಾಡಿತ್ತು. ಜೊತೆಗೆ, ಜನರು ವಾಸಿಸುವ ಪ್ರದೇಶಗಳಲ್ಲಿ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಕಿವಿಗಡಚಿಕ್ಕುವಂತೆ ಮೈಕುಗಳನ್ನು ಹಾಕುವಂತಿಲ್ಲ; ವಾಹನಗಳು ಹಾರ್ನ್ ಮಾಡುವಂತಿಲ್ಲ ಎಂಬ ಆದೇಶವನ್ನೂ ಸುಪ್ರೀಂ ಕೋರ್ಟ್ ನೀಡಿತ್ತು. 1986ರ ಪರಿಸರ ರಕ್ಷಣೆ ಕಾಯಿದೆಯ ಸೆಕ್ಷನ್ 3ರಲ್ಲಿ ಶಬ್ದ ನಿಯಂತ್ರಣ ನಿಯಮಾವಳಿಗಳನ್ನು ಸೇರಿಸಲಾಗಿದೆ. ಇದು ಶಬ್ದ ಮಾಲಿನ್ಯ ನಿಯಂತ್ರಿಸಿ ಪರಿಸರವನ್ನು ಸಂರಕ್ಷಿಸಲು ಇಟ್ಟಿರುವ ಒಂದು ಹೆಜ್ಜೆ ಸರಿ. ಆದರೆ ಕೈಗಾರಿಕೀಕರಣ, ನಗರೀಕರಣ ಹೆಚ್ಚಿದಂತೆ ಶಬ್ದ ಮಾಲಿನ್ಯ ದೊಡ್ಡ ಪಿಡುಗಾಗಿ ಬೆಳೆಯುತ್ತಿದೆ. ಹೀಗಾಗಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೇ ನಿರ್ದಿಷ್ಟವಾಗಿ ಸಮಗ್ರ ಕಾನೂನು ರೂಪುಗೊಳ್ಳಬೇಕಿರುವುದು ಸದ್ಯದ ಅಗತ್ಯ. ಶಬ್ದ ಮಾಲಿನ್ಯ ಕಡಿಮೆ ಮಾಡುವಂತಹ ತಂತ್ರಜ್ಞಾನಗಳೂ ಅಭಿವೃದ್ಧಿಯಾಗಬೇಕು. ಇಲ್ಲದಿದ್ದಲ್ಲಿ ನಗರಗಳು ಆಧುನಿಕ ಬದುಕಿನ ಸುಖ ಸೌಲಭ್ಯಗಳಿಗೆ ನೆಲೆಯಾದರೂ ಬದುಕಿನ ಗುಣಮಟ್ಟ ಕಡಿಮೆಯಾಗುತ್ತಾ ಸಾಗುತ್ತದೆ. ಹೀಗಾಗಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕರ್ಲ್ಲಲೂ ಜಾಗೃತಿ ಮೂಡಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.