ಪರೋಕ್ಷ ಸೆನ್ಸಾರ್ ಆಗದಿರಲಿ ಅಂತರಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ವಸ್ತು, ವಿಷಯಗಳು ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದೇ ಎಂಬುದನ್ನು ನಿರಂತರವಾಗಿ ಪರಿಶೀಲಿಸಲು ಒಂದು ವ್ಯವಸ್ಥೆಯನ್ನು ರೂಪಿಸುವ ಕುರಿತಂತೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಮಾಧ್ಯಮ ವರದಿಗಳು ಹೇಳುತ್ತಿರುವಂತೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದೆ ಇರುವ ಚೀನಾ, ಸೌದಿ ಅರೇಬಿಯಾದಂಥ ದೇಶಗಳಲ್ಲಿರುವ ವ್ಯವಸ್ಥೆಯನ್ನೇ ಹೋಲುತ್ತಿದೆ. ಚೀನಾದ್ಲ್ಲಲಿ ಅಂತರ್ಜಾಲವನ್ನು ನಿಯಂತ್ರಿಸುವ ವ್ಯವಸ್ಥೆಯಲ್ಲಿ 40,000 ಮಂದಿ ಪೊಲೀಸ್ ಅಧಿಕಾರಿಗಳಿದ್ದಾರೆ. ಹಾಗೆಯೇ ಈ ವ್ಯವಸ್ಥೆಯ ತಾಂತ್ರಿಕ ನಿಯಂತ್ರಣ, ಆಡಳಿತಾತ್ಮಕ ನಿಯಂತ್ರಣ ಮುಂತಾದ ಕೆಲಸಗಳಿಗಾಗಿ ಇರುವ ನೌಕರರು ಮುಂತಾದವರೆಲ್ಲಾ ಸೇರಿದರೆ ಇದೊಂದು ಬೃಹತ್ ಅಧಿಕಾರಶಾಹಿ ವ್ಯವಸ್ಥೆ. ಇಷ್ಟನ್ನೆಲ್ಲಾ ಮಾಡಿದ ನಂತರವೂ ಚೀನಾಕ್ಕೆ ಅಂತರ್ಜಾಲ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣವೇನೂ ಇಲ್ಲ. ಸೌದಿ ಅರೇಬಿಯಾದ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಸರ್ಕಾರದ ಉಕ್ಕಿನ ಪರದೆಯನ್ನು ಭೇದಿಸುವ ಅನೇಕ ತಾಂತ್ರಿಕ ಆವಿಷ್ಕಾರಗಳನ್ನು ಈ ದೇಶಗಳ ಸ್ವಾತಂತ್ರ್ಯದಾಹಿಗಳು ತಮ್ಮದೇ ಆದ ಬಗೆಯಲ್ಲಿ ಕಂಡುಕೊಂಡಿದ್ದಾರೆ. ಭಾರತದ ಉದಾಹರಣೆಯನ್ನೇ ತೆಗೆದುಕೊಂಡರೆ ಕಾಂಗ್ರೆಸ್ ವಕ್ತಾರರಾಗಿದ್ದ ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಾಲಯಕ್ಕೆ ಹೋಗಿಯೂ ತಮ್ಮ ಅಶ್ಲೀಲ ಭಂಗಿಯ ವಿಡಿಯೋಗಳ ಹಂಚಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಅಂದರೆ ಅಂತರ್ಜಾಲದ ಮೇಲೆ ನಿಗಾ ಇರಿಸಲು ಸರ್ಕಾರ ರೂಪಿಸುವ ವ್ಯವಸ್ಥೆ ಹೊಸತೊಂದು ಅಧಿಕಾರಶಾಹಿಯನ್ನು ಸೃಷ್ಟಿಸುವುದಕ್ಕಿಂತ ಹೆಚ್ಚಿನದ್ದೇನನ್ನೂ ಮಾಡುವುದಿಲ್ಲ ಎಂಬುದು ಖಚಿತ. ಆದರೆ ಇದರ ಪರಿಣಾಮ ಕೇವಲ ಈ ವ್ಯವಸ್ಥೆಯನ್ನು ಸಾಕುವ ಹಣಕಾಸಿಗಷ್ಟೇ ಸೀಮಿತವಾಗಿರುವುದಿಲ್ಲ ಎಂಬುದು ಮತ್ತೂ ಆಘಾತಕಾರಿಯಾದ ವಿಷಯ. `ನಿಗಾ ಇರಿಸುವ~ ಕೆಲಸಕ್ಕಾಗಿ ಸೃಷ್ಟಿಯಾಗುವ ಅಧಿಕಾರಶಾಹಿ ತನ್ನ `ನಿಗಾವಣಾ ಕ್ರಿಯೆ~ಯನ್ನು ಸಾಬೀತು ಮಾಡುವುದಕ್ಕಾಗಿ ಏನೇನು ಮಾಡಬಹುದು ಎಂಬುದನ್ನು ಊಹಿಸಿದರೆ ಈ ವ್ಯವಸ್ಥೆಯ ಕರಾಳ ಮುಖ ಅನಾವರಣಗೊಳ್ಳುತ್ತದೆ. ಮಾಧ್ಯಮ ವರದಿಗಳು ಹೇಳುತ್ತಿರುವಂತೆ `ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದಾದ ಅಂಶಗಳ ಮೇಲೆ ಈ ವ್ಯವಸ್ಥೆ ನಿಗಾ ಇರಿಸುತ್ತದೆ~. ಅಂದರೆ ಅಂತರ್ಜಾಲ ತಾಣ ಅಥವಾ ಸಾಮಾಜಿಕ ಜಾಲ ತಾಣವೊಂದರಲ್ಲಿ ಪ್ರಕಟವಾಗುವ ಯಾವ ಅಂಶ ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದು ಎಂಬುದನ್ನು ಈ ವ್ಯವಸ್ಥೆ ನಿರ್ಧರಿಸಿ ಕ್ರಮ ಕೈಗೊಳ್ಳುತ್ತದೆ. ಶಾಂತಿ ಕದಡುವ ವಿಚಾರಗಳು ಯಾವುವು ಎಂಬುದನ್ನು ನಿರ್ಧರಿಸಲು ನಿರಪೇಕ್ಷ ಮಾನದಂಡವೊಂದನ್ನು ರೂಪಿಸುವುದಂತೂ ಸಾಧ್ಯವಿಲ್ಲ. ಪರಿಣಾಮವಾಗಿ ಸರ್ಕಾರ ರೂಪಿಸಿರುವ ಅಧಿಕಾರಶಾಹಿಯ ಊಹೆಗೆ ನಿಲುಕುವುದೆಲ್ಲವೂ `ಶಾಂತಿ ಕದಡುವ~ ವಿಚಾರಗಳಾಗುತ್ತವೆ. ದೇಶದ ವಿವಿಧೆಡೆಗಳಿಂದ ಈಶಾನ್ಯರಾಜ್ಯಗಳ ಜನರು ತಮ್ಮೂರಿಗೆ ತೆರಳಲು ಆರಂಭಿಸಿದ್ದಕ್ಕೆ ಕಾರಣವಾದ ವದಂತಿಯನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡ ಕ್ರಮಗಳು ಬೇಕಾಬಿಟ್ಟಿಯಾಗಿ ಅಂತರ್ಜಾಲತಾಣಗಳನ್ನು ತಡೆಹಿಡಿಯುವುದರಲ್ಲಿ ಕೊನೆಗೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸಾಪೇಕ್ಷ ಮಾನದಂಡಗಳಲ್ಲಿ ನಿಯಂತ್ರಿಸಬಹುದಾದ ಎಲ್ಲವೂ ಅಧಿಕಾರದಲ್ಲಿರುವವರ ಅನುಕೂಲಕ್ಕಾಗಿ ಬಳಕೆಯಾಗುತ್ತದೆ. ಆದಾಯ ತೆರಿಗೆ ಇಲಾಖೆಯಿಂದ ಆರಂಭಿಸಿ ಪೊಲೀಸ್ ವ್ಯವಸ್ಥೆಯ ತನಕದ ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಸರ್ಕಾರವನ್ನು ಕಂಡಿರುವ ನಮಗೆ ಇದು ಪರೋಕ್ಷ ಸೆನ್ಸಾರಿಂಗ್ ಎಂಬ ಅನುಮಾನ ಮೂಡುವಂತಿದೆ, ಹಾಗಾಗದಿರಲಿ. ಇಷ್ಟಕ್ಕೂ ಈಗ ಸರ್ಕಾರ ಮಾಡಬೇಕಾಗಿರುವುದು ವದಂತಿಗಳ ನಿಯಂತ್ರಣವನ್ನಲ್ಲ. ವದಂತಿಗಳ ಬೇಳೆ ಬೇಯದಂಥ ಪಾರದರ್ಶಕ ವಾತಾವರಣ ನಿರ್ಮಾಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.