ಸಂಸ್ಕೃತ ಹೇರಿಕೆ ಕುತಂತ್ರ ಬೇಡ ರಾಜ್ಯದಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸುವ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಎಸ್. ಎ. ರಾಮದಾಸ್ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾದದ್ದು. ದಂತವೈದ್ಯಕ್ಕೆ ಸಂಬಂಧಿಸಿದ ಪುರಾತನ ವೈದ್ಯಕೀಯ ಪದ್ಧತಿಗಳನ್ನು ಅರ್ಥ ಮಾಡಿಕೊಳ್ಳಲು ಸಂಸ್ಕೃತ ಭಾಷಾ ಕಲಿಕೆ ಸಹಾಯ ಮಾಡುತ್ತದೆ ಎಂಬುದು ಸಚಿವರ ತರ್ಕ. ದಂತ ವಿಜ್ಞಾನ ಮೊದಲು ರೂಪು ತಳೆದದ್ದೇ ಭಾರತದಲ್ಲಿ; ಇದಕ್ಕೆ ಸಂಸ್ಕೃತದಲ್ಲಿ ಅನೇಕ ಪುರಾವೆಗಳಿವೆ ಎಂಬ ಪ್ರತಿಪಾದನೆಯನ್ನೂ ಸಚಿವರು ಮಾಡಿದ್ದಾರೆ. ದಂತ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಪ್ರಾಚೀನ ವೈದ್ಯಪದ್ಧತಿಗಳ ಪರಿಶೀಲನೆಗೆಂದೇ ರಾಜಸ್ತಾನ, ಉದಯಪುರಗಳಿಗೆ ಇತ್ತೀಚೆಗೆ ತಾವು ಭೇಟಿ ನೀಡಿದ್ದುದಾಗಿಯೂ ಸಚಿವರು ಹೇಳಿಕೊಂಡಿದ್ದಾರೆ. ಈ ಪ್ರಾಚೀನ ವೈದ್ಯಪದ್ಧತಿಗಳ ಅಧ್ಯಯನಕ್ಕೆ ಸಂಸ್ಕೃತ ಜ್ಞಾನ ಅತ್ಯವಶ್ಯ ಎಂಬುದು ಸಚಿವರ ವಿವರಣೆ. ಜೊತೆಗೆ ಪಾರಂಪರಿಕ ಚಿಕಿತ್ಸಾ ವಿಧಾನಗಳನ್ನು ಬಳಕೆ ಮಾಡಿಕೊಳ್ಳುವ ಜಲಂಧರ್ ವೈದ್ಯಕೀಯ ಪದ್ಧತಿ ಅತ್ಯಂತ ಪ್ರಸಿದ್ಧವಾದುದಾಗಿದ್ದು ವೈಜ್ಞಾನಿಕವಾಗಿಯೂ ಸಾಬೀತಾಗಿರುವಂತಹದ್ದು ಎಂಬಂತಹ ಮಾತುಗಳನ್ನೂ ಹೇಳಿದ್ದಾರೆ ಸಚಿವರು. ದಂತ ವೈದ್ಯ ವಿದ್ಯಾರ್ಥಿಗಳು ಸಂಸ್ಕೃತ ಕಲಿಯಬೇಕೆನ್ನುವ ಪ್ರಸ್ತಾವನೆಯೇ ಹಾಸ್ಯಾಸ್ಪದ. ನಿಜ. ಗ್ರೀಕ್, ಲ್ಯಾಟಿನ್, ಸಂಸ್ಕೃತದಂತಹ ಅನೇಕ ಪ್ರಾಚೀನ ಶಾಸ್ತ್ರೀಯ ಭಾಷೆಗಳಲ್ಲಿ ಅಗಾಧ ಜ್ಞಾನಭಂಡಾರವೇ ಹುದುಗಿದೆ. ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಆ ಜ್ಞಾನಭಂಡಾರವನ್ನು ಪಡೆದುಕೊಳ್ಳಲು ಆ ಭಾಷೆಗಳನ್ನು ವೈದ್ಯ ವಿದ್ಯಾರ್ಥಿಗಳು ಕಲಿಯಲೇಬೇಕು ಎಂಬಂತಹ ಅವಶ್ಯಕತೆಯೇನೂ ಇಲ್ಲ. ಆ ಜ್ಞಾನಸಂಪತ್ತನ್ನು ಕನ್ನಡ, ಇಂಗ್ಲಿಷ್ ಭಾಷೆಗಳಿಗೆ ಅನುವಾದ ಮಾಡುವ ಅವಕಾಶ ಇದ್ದೇ ಇದೆ. ಸಂಸ್ಕೃತ ಕುರಿತಂತೆ ಗೌರವ ಇರಲಿ. ಆದರೆ ಹಾಗಂತ ಬೇಕಾಬಿಟ್ಟಿಯಾಗಿ ಅದನ್ನು ಹೇರುವ ಅಧಿಕಾರ ಮಾತ್ರ ಸರ್ಕಾರಕ್ಕೆ ಇಲ್ಲ. ವೈದ್ಯಶಿಕ್ಷಣದಂತಹ ತಾಂತ್ರಿಕ ಕೋರ್ಸ್‌ಗಳಿಗೆ ಪಠ್ಯ ವಿಷಯಗಳು ಯಾವುದಿರಬೇಕು ಎಂಬುದನ್ನು ತೀರ್ಮಾನಿಸುವುದು ವಿಷಯತಜ್ಞರು, ಪರಿಣತರ ಕೆಲಸ. ಅದು ರಾಜಕಾರಣಿಗಳ ಕೆಲಸವಲ್ಲ ಎಂಬುದನ್ನು ನಮ್ಮ ಮಾನ್ಯ ವೈದ್ಯಶಿಕ್ಷಣ ಸಚಿವರು ಅರಿತುಕೊಳ್ಳುವುದು ಲೇಸು. ಪಠ್ಯಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ನಿಯಮಾವಳಿಗಳು, ಮಾರ್ಗದರ್ಶಿ ಸೂತ್ರಗಳು ಇರಬೇಕಾದುದು ಕಡ್ಡಾಯ. ಇದರಲ್ಲಿ ಮೂಗು ತೂರಿಸುವಂತಹ ಸಚಿವರ ಮಾತುಗಳು, ಹೇಳಿಕೆಗಳು ಅರ್ಥಹೀನ. ವೈದ್ಯಕೀಯ ಶಿಕ್ಷಣ ಸಚಿವರಾದ ಮಾತ್ರಕ್ಕೆ ಬೇಕಾಬಿಟ್ಟಿ ನೀತಿಗಳನ್ನು ರೂಪಿಸುವ ಅಧಿಕಾರ ಅವರಿಗಿಲ್ಲ. ತಮ್ಮ ಕಾರ್ಯವ್ಯಾಪ್ತಿ ಮೀರಿ ಸಚಿವರಾಡುವ ಇಂತಹ ಮಾತುಗಳು ಖಂಡನೀಯ. ಈ ಬಗೆಯ ಅವಾಸ್ತವಿಕ ಸಲಹೆಗಳು, ಮಾತುಗಳು ಸಚಿವ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 470 ಸಂಸ್ಕೃತ ಪಾಠಶಾಲೆಗಳಿವೆ. ಆದರೆ ಈ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ. ಇಂತಹ ವಿಪರ್ಯಾಸಗಳನ್ನು ಸರಿ ಮಾಡುವತ್ತ ಸರ್ಕಾರ ಮೊದಲು ಗಮನ ಹರಿಸಲಿ. ಆಡಳಿತವನ್ನು ಬಿಗಿಯಾಗಿಸಲಿ. ಅದು ಬಿಟ್ಟು ಸಂಬಂಧವೇ ಇಲ್ಲದ ದಂತವೈದ್ಯ ಶಿಕ್ಷಣದಲ್ಲಿ ಸಂಸ್ಕೃತವನ್ನು ಹೇರುವ ಮಾತುಗಳನ್ನಾಡುವುದು ಪ್ರಸ್ತುತ ಸರ್ಕಾರದ ಆಡಳಿತದ ಅಪ್ರಬುದ್ಧತೆಗೆ ಸಾಕ್ಷಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.