ಜಾತಿ ರಾಜಕಾರಣ ಸಲ್ಲದು ರಾಜಕೀಯದಲ್ಲಿ ಜಾತಿಯ ಪಾತ್ರ ಹೊಸದಲ್ಲದೆ ಇದ್ದರೂ ರಾಜ್ಯದಲ್ಲಿ ಇದು ಇಷ್ಟೊಂದು ನಗ್ನವಾಗಿ ಹಿಂದೆಂದೂ ಪ್ರದರ್ಶನಗೊಂಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಯಾವುದೇ ಮುಜುಗರ ಇಲ್ಲದೆ ಬಹಿರಂಗವಾಗಿ ರಾಜಕೀಯದಲ್ಲಿ ಜಾತಿಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದು ಹಿಂದೂ ಧರ್ಮದ ಏಕತೆ ಪಾಠವನ್ನು ಬೋಧಿಸುತ್ತಿರುವ ಭಾರತೀಯ ಜನತಾ ಪಕ್ಷ. ರಾಜಕೀಯವಾಗಿ ನಿರ್ಲಕ್ಷ್ಯಕ್ಕೀಡಾಗಿದ್ದೇವೆ ಎಂಬ ವೀರಶೈವರಲ್ಲಿನ ಕೊರಗನ್ನು ಯಶಸ್ವಿಯಾಗಿ ಬಳಸಿಕೊಂಡ ಬಿಜೆಪಿ, ಬಿ.ಎಸ್.ಯಡಿಯೂರಪ್ಪನವರನ್ನು ನಾಯಕರಾಗಿ ಬಿಂಬಿಸುವ ಮೂಲಕ ರಾಜಕೀಯ ಲಾಭವನ್ನು ಪಡೆದು ಅಧಿಕಾರವನ್ನು ಗಳಿಸಿಯೇ ಬಿಟ್ಟಿತು. ಈಗ ಅದೇ ಯಡಿಯೂರಪ್ಪನವರು ಜಾತಿಯನ್ನು ಬಳಸಿಕೊಂಡು ಪಕ್ಷದ ಹೈಕಮಾಂಡ್‌ಗೆ ಸವಾಲು ಹಾಕುತ್ತಿದ್ದಾರೆ. ಪಕ್ಷದ ಶಿಸ್ತನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಿರುವ ಯಡಿಯೂರಪ್ಪನವರ ವಿರುದ್ಧ ಕ್ರಮ ಕೈಗೊಳ್ಳಲಾಗದಷ್ಟು ಬಿಜೆಪಿ ಹೈಕಮಾಂಡ್ ಅಸಹಾಯಕವಾಗಿದೆ. ಅವರನ್ನು ಮುಟ್ಟಲು ಹೋದರೆ ವೀರಶೈವ ಮತದಾರರು ಬಿಟ್ಟುಹೋಗಬಹುದು ಎಂಬ ಭೀತಿ ಬಿಜೆಪಿ ನಾಯಕರ ಕೈ ಕಟ್ಟಿಹಾಕಿದೆ. ಈಗ ಇದೇ ಹಾದಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ವೀರಶೈವ ಮುಖಂಡರು ಹೊರಟಿದ್ದಾರೆ. ತಮ್ಮ ಜಾತಿಯ ಮುಖಂಡರನ್ನೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲು ಹಲವಾರು ಪ್ರಮುಖ ವೀರಶೈವ ನಾಯಕರು ದೆಹಲಿಗೆ ಹೋಗಿ ಬೀಡುಬಿಟ್ಟಿದ್ದಾರೆ. ವೀರಶೈವ ನಾಯಕರ ನೇತೃತ್ವದಲ್ಲಿ ಚುನಾವಣೆ ನಡೆದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದು ಈ ನಾಯಕರು ಬ್ಲ್ಯಾಕ್‌ಮೇಲ್ ಮಾಡತೊಡಗಿದ್ದಾರೆ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿರುವ ಜಾತಿಗಳು ಜಾತಿಯ ಕಾರಣದಿಂದಾಗಿಯೇ ತಮಗಾಗಿರುವ ಅನ್ಯಾಯದ ವಿರುದ್ಧ ಹೋರಾಡಲು ಸಂಘಟಿತಗೊಂಡರೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅದಕ್ಕೊಂದು ಸಮರ್ಥನೆ ಇದೆ. ಆದರೆ ಜಾತಿ ವ್ಯವಸ್ಥೆಯ ಫಲಾನುಭವಿಗಳು ಅಸಮಾನತೆಯ ತಳಹದಿಯ ಮೇಲೆ ನಿಂತಿರುವ ಸಾಮಾಜಿಕ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗಲು ಮಾಡುವ ಪ್ರಯತ್ನಗಳನ್ನು ಒಪ್ಪುವುದು ಸಾಧ್ಯ ಇಲ್ಲ. ಅದೂ ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಜಾತಿ ಆಧಾರಿತ ಅಸಮಾನತೆಯನ್ನು ತೊಡೆದುಹಾಕಲು ನಡೆಸಿದ ಸಾಮಾಜಿಕ ಕ್ರಾಂತಿಯ ಫಲವಾಗಿ ಹುಟ್ಟಿಕೊಂಡ ಲಿಂಗಾಯತ ಧರ್ಮಕ್ಕೆ ಸೇರಿದವರು ಇಂತಹ ಕೃತ್ಯದಲ್ಲಿ ತೊಡಗಿರುವುದು ಆ ಧರ್ಮದ ಆಶಯಕ್ಕೆ ಬಗೆಯುವ ಅಪಚಾರ. ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯ ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಸಾಗಬೇಕು. ಆದರೆ ಕರ್ನಾಟಕದಲ್ಲಿ ಜಾತಿಯ ಬೆತ್ತಲೆ ನರ್ತನವನ್ನು ಕಂಡಾಗ ಬದಲಾವಣೆಯ ಬಂಡಿ ಹಿಮ್ಮಗವಾಗಿ ಚಲಿಸುತ್ತಿರುವಂತೆ ಕಾಣುತ್ತಿದೆ. ಈ ರಾಜ್ಯದಲ್ಲಿ ಒಕ್ಕಲಿಗರು, ಲಿಂಗಾಯತರು, ಹಿಂದುಳಿದ ಜಾತಿಯವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ಜನಸಂಖ್ಯೆಯಲ್ಲಿ ಶೇಕಡಾ 22ರಷ್ಟಿರುವ ದಲಿತರಲ್ಲಿ ಯಾರಿಗೂ ಆ ಸ್ಥಾನಕ್ಕೆ ಏರಲಾಗಿಲ್ಲ. ಹೀಗಿದ್ದಾಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಒಬ್ಬ ದಲಿತನನ್ನು ಕಿತ್ತುಹಾಕಿ ತಮ್ಮ ಜಾತಿಗೆ ಸೇರಿದ ನಾಯಕನನ್ನು ಆ ಸ್ಥಾನದಲ್ಲಿ ಕೂರಿಸಬೇಕೆಂದು ವೀರಶೈವ ಮುಖಂಡರು ಒತ್ತಾಯಿಸುತ್ತಿರುವುದು ಎಷ್ಟು ಸರಿ ಎಂಬ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತ್ಯತೀತ ಮೌಲ್ಯಕ್ಕೆ ತನ್ನನ್ನು ಅರ್ಪಿಸಿಕೊಂಡಿರುವುದಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್‌ನ ಕಾಳಜಿಯಲ್ಲಿ ಪ್ರಾಮಾಣಿಕತೆ ಇದ್ದರೆ ಜಾತಿವಾದಿ ನಾಯಕರ ಮಾತಿಗೆ ಮಣೆ ಹಾಕಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.