ಆತ್ಮಹತ್ಯೆ ಪ್ರಯತ್ನಕ್ಕೆ ಶಿಕ್ಷೆ ಬೇಡ ಆತ್ಮಹತ್ಯೆ ಪ್ರಯತ್ನವನ್ನು ಅಪರಾಧದ ವ್ಯಾಪ್ತಿಯಿಂದ ಹೊರತರಲು ಕೇಂದ್ರ ಆರೋಗ್ಯ ಸಚಿವಾಲಯ ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಈ ಸಂಬಂಧದಲ್ಲಿ ಹೊಸ ಮಾನಸಿಕ ಆರೋಗ್ಯ ಆರೈಕೆ ಮಸೂದೆ 2012 ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಈಗಿರುವ ಕಾನೂನಿನ ಪ್ರಕಾರ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ವಿಫಲವಾಗಿ ವ್ಯಕ್ತಿ ಬದುಕುಳಿದಲ್ಲಿ ಅಂತಹ ವ್ಯಕ್ತಿಗೆ ಶಿಕ್ಷೆ ನೀಡಲಾಗುತ್ತದೆ. ಭಾರತೀಯ ದಂಡ ಸಂಹಿತೆಯ(ಐಪಿಸಿ) 309 ಸೆಕ್ಷನ್ ಅನ್ವಯ, ಆತ್ಮಹತ್ಯೆಗೆ ಪ್ರಯತ್ನಪಟ್ಟ ವ್ಯಕ್ತಿಗೆ ದಂಡ ಸಹಿತ ಅಥವಾ ದಂಡ ರಹಿತವಾಗಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಆದರೆ ಆತ್ಮಹತ್ಯೆ ಯತ್ನವನ್ನು ಕಾನೂನಿನ ಪ್ರಕಾರ ಶಿಕ್ಷಿಸಬಹುದಾದ ಅಪರಾಧ ಎಂಬುದಕ್ಕಿಂತ `ಮಾನಸಿಕ ಸಮಸ್ಯೆ~ ಎಂದು ಗುರುತಿಸಬೇಕೆಂಬ ವಾದ ಬಹಳ ಕಾಲದಿಂದಲೂ ಇದೆ. ಆತ್ಮಹತ್ಯೆ ಪ್ರಯತ್ನಕ್ಕೆ ಶಿಕ್ಷೆ ವಿಧಿಸಬಾರದೆಂದು ಭಾರತದ ಕಾನೂನು ಆಯೋಗ 1971ರಷ್ಟು ಹಿಂದೆಯೇ ಶಿಫಾರಸು ಮಾಡಿತ್ತು. ನಂತರ 2008ರಲ್ಲಿ 210ನೇ ವರದಿಯಲ್ಲೂ ಮತ್ತೆ ಇದೇ ಶಿಫಾರಸನ್ನು ಮಾಡಲಾಗಿತ್ತು. ಬದುಕನ್ನೇ ಅಂತ್ಯಗೊಳಿಸಿಕೊಳ್ಳಲು ಹೋಗುವವರಿಗೆ ನಿಜಕ್ಕೂ ಬೇಕಿರುವುದು ವಾಸ್ತವವಾಗಿ ಆಪ್ತ ಸಲಹೆ ಹಾಗೂ ಸಾಂತ್ವನ. ವ್ಯಕ್ತಿಗತ ಅನುಭವಗಳು, ಕುಟುಂಬದಲ್ಲಿನ ಮಾನಸಿಕ ರೋಗದ ಇತಿಹಾಸ ಹಾಗೂ ಸಾಮಾಜಿಕ - ಸಾಂಸ್ಕೃತಿಕ ಕಾರಣಗಳೆಲ್ಲವೂ ಆತ್ಮಹತ್ಯೆ ಪ್ರವೃತ್ತಿಗೆ ಕಾರಣವಾಗುತ್ತವೆ. ಸಂದರ್ಭಗಳ ಒತ್ತಡಗಳಲ್ಲಿ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಯತ್ನಿಸುವ ವ್ಯಕ್ತಿಗೆ ಮನೋವೈದ್ಯರ ನೆರವು ಅತ್ಯಗತ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲೇ ಶಿಕ್ಷೆ ವಿಧಿಸಲು ಹೊರಡುವುದು ಅಮಾನವೀಯವಾಗುತ್ತದೆ. ಹೀಗಾಗಿಯೇ ಈ ಆಧುನಿಕ ಕಾಲದಲ್ಲಿ ಈ ರೀತಿ ಶಿಕ್ಷೆ ವಿಧಿಸುವ ಕ್ರಮ ಕೆಲವೇ ದೇಶಗಳಲ್ಲಷ್ಟೇ ಇನ್ನೂ ಉಳಿದುಕೊಂಡಿದೆ. ಅವುಗಳಲ್ಲಿ ಭಾರತವೂ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಪುರ ಹಾಗೂ ಮಲೇಷ್ಯಾ ಸೇರಿವೆ. ಆತ್ಮಹತ್ಯೆ ಪ್ರಯತ್ನವನ್ನು ಅಪರಾಧದ ವ್ಯಾಪ್ತಿಯಿಂದ ಹೊರತಂದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಬಹುದು ಎಂದು ವಾದ ಮಾಡುವವರೂ ಇದ್ದಾರೆ. ಆದರೆ ಈ ವಾದದಲ್ಲಿ ಹುರುಳಿಲ್ಲ. ಆತ್ಮಹತ್ಯೆ ಪ್ರಯತ್ನದ ನಂತರ ಶಿಕ್ಷೆಯ ಭೀತಿ ಇಲ್ಲದೆ ಮನೋವೈದ್ಯಕೀಯ ನೆರವು ಹಾಗೂ ಬೆಂಬಲ ಪಡೆದುಕೊಳ್ಳುವುದು ಸಾಧ್ಯವಿರುವುದರಿಂದ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿವೆ ಎಂದು ವರದಿಗಳು ಹೇಳುತ್ತವೆ. ಆತ್ಮಹತ್ಯೆ ಎಂಬುದು ಮಾನಸಿಕ ಹಾಗೂ ಸಾಮಾಜಿಕ ಆಯಾಮಗಳಿರುವ ಸಂಕೀರ್ಣ ಸಮಸ್ಯೆ. ಇದು `ಅಪರಾಧ ಪ್ರವೃತ್ತಿ~ಯ ಪ್ರತೀಕವಲ್ಲ ಎಂಬುದನ್ನು ಗುರುತಿಸಬೇಕಾದುದು ಇಲ್ಲಿ ಮುಖ್ಯ. ಆತ್ಮಹತ್ಯೆಗಳನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವುದು ಸಮಾಜ ಹಾಗೂ ಸರ್ಕಾರಗಳ ಹೊಣೆಗಾರಿಕೆಯೂ ಆಗಿರುತ್ತದೆ. ಮಾನವ ಜನ್ಮವನ್ನು ಉಳಿಸಿ ರಕ್ಷಿಸುವ ಹೊಣೆಗಾರಿಕೆಯಿಂದ ಅವು ತಪ್ಪಿಸಿಕೊಳ್ಳಲಾಗದು. ಹೀಗಾಗಿಯೇ, ಆತ್ಮಹತ್ಯೆಗೆ ಪ್ರೇರಕವಾಗುವುದು ಅಥವಾ ಕುಮ್ಮಕ್ಕು ನೀಡುವುದು ಐಪಿಸಿಯ ಸೆಕ್ಷನ್ 306ರ ಅನ್ವಯ ಅಪರಾಧವಾಗಿರುವುದು ಮುಂದುವರಿಯುತ್ತದೆ. ಆತ್ಮಹತ್ಯೆಗಳಿಗೆ ಪ್ರೇರಕವಾಗುವ ಭಾವನಾತ್ಮಕ, ಸಾಮಾಜಿಕ, ಆರ್ಥಿಕ ಒತ್ತಡಗಳ ಸಮಸ್ಯೆಗಳನ್ನು ಅಧ್ಯಯನ ಮಾಡಿ ನಿವಾರಣೋಪಾಯಗಳತ್ತ ಶ್ರಮಿಸುವುದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಖ್ಯವಾದುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.