ವಿದ್ಯುತ್ ಮಂಡಳಿಗಳನ್ನು ಸುಧಾರಿಸಿ ಸಾಲಗಳ ಸುಳಿಯಲ್ಲಿರುವ ರಾಜ್ಯ ವಿದ್ಯುತ್ ಮಂಡಳಿಗಳು ಹಾಗೂ ವಿತರಣಾ ಕಂಪೆನಿಗಳಿಗೆ (ಡಿಸ್ಕಾಂ) ರೂ 1.9 ಲಕ್ಷ ಕೋಟಿ ಯಷ್ಟು ಹಣಕಾಸು ಪರಿಹಾರ ಪ್ಯಾಕೇಜ್ ಅನ್ನು ಯುಪಿಎ ಸರ್ಕಾರ ಘೋಷಿಸಿದೆ. ಇದನ್ನು ವಿದ್ಯುತ್ ವಲಯದ ಸುಧಾರಣಾ ಕ್ರಮ ಎಂದು ಪರಿಭಾವಿಸುವುದು ಸಾಧ್ಯವಿಲ್ಲ. ಹಣಕಾಸು ದಿವಾಳಿಗೆ ಸಿಲುಕಿರುವ ರಾಜ್ಯ ವಿದ್ಯುತ್ ವಿತರಣಾ ಕಂಪೆನಿಗಳನ್ನು ಬಿಕ್ಕಟ್ಟಿನಿಂದ ಪಾರು ಮಾಡುವಂತಹ ಸದ್ಯದ ಕ್ರಮ ಅಷ್ಟೆ ಇದು. ಆದರೆ ನಂತರದ ವಿದ್ಯುತ್ ವಲಯದ ಸುಧಾರಣಾ ಕ್ರಮಗಳಿಗೆ ಇದು ಮುನ್ನುಡಿಯಾಗಬಹುದು. ದುರದೃಷ್ಟದ ಸಂಗತಿ ಎಂದರೆ ರಾಜ್ಯ ವಿದ್ಯುತ್ ಮಂಡಳಿಗಳ ನಷ್ಟದ ಹೊರೆ ವರ್ಷವರ್ಷವೂ ಹೆಚ್ಚಾಗುತ್ತಿದ್ದು ಆತಂಕಕಾರಿ ಹಂತವನ್ನು ತಲುಪಿದೆ. ಕೋಟ್ಯಂತರ ರೂಪಾಯಿ ಸಾಲವನ್ನು ತಲೆ ಮೇಲೆ ಹೊತ್ತಿರುವ ರಾಜ್ಯ ವಿದ್ಯುತ್ ಮಂಡಳಿಗಳು ಈಗಲೂ ಸಾಲ ಪಡೆದುಕೊಳ್ಳುವ ಯೋಗ್ಯತೆ ಹೊಂದಿವೆಯೆ ಎಂಬುದು ಮತ್ತೊಂದು ಚರ್ಚೆಯ ವಿಚಾರ. ಸರ್ಕಾರ ಪ್ರಕಟಿಸಿರುವ ಪರಿಹಾರ ಪ್ಯಾಕೇಜ್ ಪ್ರಕಾರ, ವಿದ್ಯುತ್ ಮಂಡಳಿಗಳ ಅರ್ಧದಷ್ಟು ಸಾಲದ ಹೊರೆಯನ್ನು ರಾಜ್ಯಸರ್ಕಾರಗಳು ಹೊತ್ತುಕೊಂಡು ಅವನ್ನು ಬಾಂಡ್‌ಗಳಾಗಿ ಪರಿವರ್ತಿಸಲಿವೆ. ಈ ಪರಿಹಾರ ಪ್ಯಾಕೇಜ್‌ನ ಫಲಾನುಭವಿಗಳಾಗಲು ಸರ್ಕಾರಗಳು ವಿದ್ಯುತ್ ದರಗಳ ವಾರ್ಷಿಕ ಪುನರ್‌ವಿಮರ್ಶೆಗೆ ಬದ್ಧವಾಗಬೇಕಾಗುತ್ತವೆ. ಜೊತೆಗೆ ವಿದ್ಯುತ್ ಪ್ರಸರಣ ಹಾಗೂ ವಿತರಣೆ ನಷ್ಟ ಕಡಿಮೆ ಮಾಡಲೂ ಬದ್ಧವಾಗಬೇಕಿವೆ. ಕೆಲವು ರಾಜ್ಯಗಳಲ್ಲಿ ಈ ನಷ್ಟದ ಪ್ರಮಾಣ ಉತ್ಪಾದನೆಯಾದ ವಿದ್ಯುತ್‌ನ ಶೇ 40ರಷ್ಟಿದೆ ಎಂಬುದು ಆತಂಕಕಾರಿ. ಪ್ರತಿ ವರ್ಷ ವಿದ್ಯುತ್ ದರ ಪುನರ್‌ವಿಮರ್ಶೆ ಎಂಬುದು ರಾಜಕೀಯ ಇಚ್ಛಾಕ್ತಿಯನ್ನು ಅವಲಂಬಿಸಿದೆ. ಈಗಾಗಲೇ ಸಾಮಾನ್ಯ ಗ್ರಾಹಕರು ವಿದ್ಯುತ್ ಬೆಲೆಗಳ ಹೆಚ್ಚಳದಲ್ಲಿ ನಲುಗಿದ್ದಾರೆ. ಈ ಪರಿಹಾರ ಪ್ಯಾಕೇಜ್ ಅಂಗೀಕರಿಸಲು ಡಿಸೆಂಬರ್ 31ರವರೆಗೆ ಸಮಯ ಇದೆ. ಈವರೆಗೆ ರಾಜಸ್ತಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ಪಂಜಾಬ್, ಹರಿಯಾಣ ಹಾಗೂ ತಮಿಳುನಾಡುಗಳು ಸೇರಿದಂತೆ ಏಳು ರಾಜ್ಯಗಳು ಮಾತ್ರ ಈ ಪ್ರಸ್ತಾವಕ್ಕೆ ಒಪ್ಪಿವೆ. ಕಳೆದ ಒಂದು ದಶಕದಲ್ಲಿ ಇಂತಹ ಕ್ರಮ ಕೈಗೊಳ್ಳುತ್ತಿರುವುದು ಇದು ಎರಡನೇ ಸಲ. 2001ರಲ್ಲಿ ಕೈಗೊಳ್ಳಲಾಗಿದ್ದ ಇಂತಹದೇ ಕ್ರಮ ಫಲ ನೀಡಿರಲಿಲ್ಲ. ಈ ಬಾರಿ ಇದನ್ನು ಫಲಪ್ರದಗೊಳಿಸಲು ರಾಜ್ಯ ವಿದ್ಯುತ್ ವಿತರಣಾ ಹೊಣೆಗಾರಿಕೆ ಮಸೂದೆಯನ್ನು ತರಲು ಯೋಜಿಸಲಾಗುತ್ತಿದೆ. ವೆಚ್ಚಕ್ಕಿಂತ ಅಗ್ಗದ ದರದಲ್ಲಿ ವಿದ್ಯುತ್ ಮಾರಾಟದ ಜನಪ್ರಿಯ ವಿಧಾನಗಳು ಅಪಾರ ನಷ್ಟಕ್ಕೆ ಕಾರಣವಾಗುತ್ತಿವೆ. ಭ್ರಷ್ಟಾಚಾರ ಹಾಗೂ ದುರಾಡಳಿತವೂ ಇದಕ್ಕೆ ಜೊತೆಯಾಗಿದೆ. ಈಗ ಪ್ರಕಟಿಸಿರುವಂತಹದ್ದು ಅಲ್ಪಾವಧಿಯ ಹಣಕಾಸು ಪರಿಹಾರ. ಸರಾಸರಿ ಆದಾಯ- ವೆಚ್ಚಗಳ ಮಧ್ಯದ ಅಂತರವನ್ನು ಇದು ಕಡಿಮೆ ಮಾಡುತ್ತದೆ. ವಿದ್ಯುತ್ ಸಬ್ಸಿಡಿ ಖೋತಾ ಹಾಗೂ ವಿದ್ಯುತ್ ಕಳ್ಳತನಕ್ಕೆ ಶಿಕ್ಷೆ ವಿಧಿಸದೆ ವಿತರಣಾ ಕಂಪೆನಿಗಳ ಹಣಕಾಸು ಸ್ಥಿತಿ ಸುಧಾರಿಸುವುದು ಅಸಾಧ್ಯ. ಅನೇಕ ವಿದ್ಯುತ್ ಸ್ಥಾವರಗಳು ವಿದ್ಯುತ್ ಉತ್ಪಾದನೆಗೆ ಸನ್ನದ್ಧವಾಗಿದ್ದರೂ ಕಲ್ಲಿದ್ದಲು ಹಾಗೂ ಅನಿಲದ ಲಭ್ಯತೆ ಇರುವುದಿಲ್ಲ. ಇದನ್ನೂ ಗಂಭೀರವಾಗಿ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ಇಂತಹ ಪರಿಹಾರ ಕ್ರಮಗಳೂ ದೀರ್ಘಾ ವಧಿಯಲ್ಲಿ ವಿದ್ಯುತ್‌ಮಂಡಳಿಗಳನ್ನು ಇನ್ನಷ್ಟು ರೋಗಗ್ರಸ್ತವಾಗಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.