ಭಯೋತ್ಪಾದನೆ: ಸೂಕ್ಷ್ಮತೆಯ ಅಗತ್ಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಯಾರೇ ಮುಗ್ಧ ವ್ಯಕ್ತಿಗೆ ಭಯೋತ್ಪಾದಕ ಎಂಬಂತಹ ಹಣೆಪಟ್ಟಿ ಹಚ್ಚಬಾರದು; ತನ್ನದಲ್ಲದ ತಪ್ಪಿಗೆ ಅಂತಹ ವ್ಯಕ್ತಿ ಸೆರೆಮನೆಯಲ್ಲಿ ಕಾಲ ಕಳೆಯುವಂತಾಗಬಾರದು ಎಂದು ಸುಪ್ರೀಂಕೋರ್ಟ್ ಗುಜರಾತ್ ಪೊಲೀಸರಿಗೆ ಹೇಳಿರುವ ಕಿವಿಮಾತು ಗಣನೀಯವಾದದ್ದು. `ನನ್ನ ಹೆಸರು ಖಾನ್. ಆದರೆ ನಾನು ಭಯೋತ್ಪಾದಕನಲ್ಲ~ ಎಂಬಂತಹ ನೋವಿನ ಭಾವನೆಯನ್ನು ಯಾರೂ ಅನುಭವಿಸುವಂತಾಗಬಾರದು ಎಂದು ಕೋರ್ಟ್ ಉಲ್ಲೇಖಿಸಿರುವುದು ಮನನಯೋಗ್ಯ. 1994ರಲ್ಲಿ ಜಗನ್ನಾಥ ಪುರಿ ರಥಯಾತ್ರೆಯ ಸಂದರ್ಭದಲ್ಲಿ ಅಹಮದಾಬಾದ್‌ನಲ್ಲಿ ಕೋಮು ಹಿಂಸಾಚಾರ ಸೃಷ್ಟಿಸಲು ಯತ್ನಿಸಿದ್ದರೆಂಬ ಆರೋಪದ ಮೇಲೆ ಭಯೋತ್ಪಾದನೆ ಹಾಗೂ ವಿಧ್ವಂಸಕ ಚಟುವಟಿಕೆಗಳ (ತಡೆ) ಕಾಯಿದೆ ಅನ್ವಯ ಬಂಧಿಸಲಾಗಿದ್ದ 11 ಮಂದಿಯ ಬಿಡುಗಡೆಗೆ ಆದೇಶ ನೀಡುವ ಸಂದರ್ಭದಲ್ಲಿ ಹೇಳಿರುವ ಈ ಮಾತುಗಳು ಪ್ರಸ್ತುತವಾದದ್ದು. ಈ ನಿರ್ದಿಷ್ಟ ಪ್ರಕರಣವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿತ್ತು. ತಪ್ಪೊಪ್ಪಿಗೆ ದಾಖಲಾತಿಯಲ್ಲಿ ಅನುಸರಿಸಬೇಕಾದ ಕ್ರಮವನ್ನು ಅನುಸರಿಸದ ಪೊಲೀಸರ ಕ್ರಮದ ಬಗೆಗೂ ಕೋರ್ಟ್ ಟೀಕೆಗಳನ್ನು ಮಾಡಿದೆ. ಭಯೋತ್ಪಾದನೆ ವಿರೋಧಿ ಕಾನೂನನ್ನು ಉದಾರವಾಗಿ ಬೇಕಾಬಿಟ್ಟಿ ಅನ್ವಯಿಸಲಾಗದು ಎಂಬುದು ಕೋರ್ಟ್‌ನ ಹಿತವಚನ. ಯಾರೇ ಮುಗ್ಧ ವ್ಯಕ್ತಿಯ ಶಿಕ್ಷೆಗೆ ಈ ಕಾನೂನು ದುರುಪಯೋಗವಾಗಬಾರದು ಎಂಬಂತಹ ಮಾತುಗಳ ಹಿಂದಿರುವ ಕಾಳಜಿ ಜಾತ್ಯತೀತ ರಾಷ್ಟ್ರದ ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿ ಹಿಡಿಯುವಂತಹದ್ದು. ಪಾರದರ್ಶಕವಾದ ಅಪರಾಧ ನ್ಯಾಯ ವ್ಯವಸ್ಥೆ ಇರುವ ಪ್ರಜಾಪ್ರಭುತ್ವ ನಮ್ಮದು. ಹೀಗಿದ್ದೂ ಅನೇಕ ಮುಗ್ಧ ನಾಗರಿಕರು ಧಾರ್ಮಿಕ ಅಥವಾ ರಾಜಕೀಯ ಪೂರ್ವಗ್ರಹಗಳಿಗೆ ಬಲಿಪಶುಗಳಾಗಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಭಯೋತ್ಪಾದನೆ ತಡೆಗೆ ಶ್ರಮಿಸಬೇಕಾದ ಪೊಲೀಸರ ಆತಂಕ ಹಾಗೂ ಅವರು ಎದುರಿಸಬೇಕಾದ ಕಷ್ಟಕೋಟಲೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಭಯೋತ್ಪಾದನೆ ಬಹಳ ಗಂಭೀರವಾದ ಅಪರಾಧ. ಈ ಅಪರಾಧದ ಪರಿಣಾಮಗಳೂ ಘೋರವಾದುದು, ಜೊತೆಗೆ ಅಪಾಯಕಾರಿಯಾದುದು. ಅದೂ ಪರಕೀಯರ ಬೆಂಬಲದೊಂದಿಗೆ ಸಂಘಟಿತವಾಗಿ ನಡೆಸುವ ಕೃತ್ಯದ ನಿರ್ವಹಣೆಯಂತೂ ಇನ್ನೂ ಕಷ್ಟದ್ದು ಎಂಬುದೂ ನಿಜ. ಆದರೆ ಮಹಾತ್ಮ ಗಾಂಧಿಯವರ ನಾಡಿನಲ್ಲಿ ಗುರಿ ಸಾಧನೆಗಿಂತ ಮಾರ್ಗವೂ ಮುಖ್ಯವಾದುದು ಎಂಬುದನ್ನು ಕೋರ್ಟ್ ಎತ್ತಿ ಹೇಳಿರುವುದು ಸರಿಯಾಗಿಯೇ ಇದೆ. ಯಾರೇ ನಿರಪರಾಧಿ ಶಿಕ್ಷೆ ಅನುಭವಿಸಬಾರದು ಎಂಬಂತಹದ್ದು ಮಾನವೀಯ ಹಕ್ಕುಗಳು ಅಥವಾ ಮಾನವ ಘನತೆಯನ್ನು ಗೌರವಿಸುವ ಎಲ್ಲರೂ ಒಪ್ಪುವಂತಹ ಮಾತು. 2007ರಲ್ಲಿ ಆಸ್ಟ್ರೇಲಿಯಾದಲ್ಲಿ ಬೆಂಗಳೂರು ಮೂಲದ ವೈದ್ಯರೊಬ್ಬರು ಭಯೋತ್ಪಾದನೆ ಆರೋಪದಲ್ಲಿ ಬಂಧಿತರಾಗಿ ಬಿಡುಗಡೆಯಾದ ನಂತರ ಆಸ್ಟ್ರೇಲಿಯಾ ಸರ್ಕಾರ ಅವರ ಕ್ಷಮಾಪಣೆ ಕೋರಿದ್ದಲ್ಲದೆ ಪರಿಹಾರ ಹಣ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. 2008ರಲ್ಲಿ ದೆಹಲಿಯಲ್ಲಿ ನಡೆದ `ಬಾಟ್ಲಾ ಹೌಸ್ ಎನ್‌ಕೌಂಟರ್~ ಎಂದೇ ಹೆಸರಾದ ಪ್ರಕರಣದಲ್ಲಿ ಎಷ್ಟೆಲ್ಲಾ ಲೋಪದೋಷಗಳಿವೆ ಎಂಬುದನ್ನು ಇತ್ತೀಚಿನ ಜಾಮಿಯಾ ಟೀಚರ್ಸ್ ಸಾಲಿಡಾರಿಟಿ ಅಸೋಸಿಯೆಷನ್ (ಜೆಟಿಎಸ್‌ಎ) ವರದಿ ಎತ್ತಿ ತೋರಿಸಿದೆ. ಭಯೋತ್ಪಾದನೆ ಆರೋಪ ಹೊರಿಸಲಾಗಿದ್ದ ಆರೋಪಿಗಳನ್ನು ಕೋರ್ಟ್‌ಗಳು ಬಿಡುಗಡೆ ಮಾಡಿದಂತಹ ಪ್ರಕರಣಳನ್ನು ಆಧರಿಸಿ ಸಿದ್ಧಪಡಿಸಿದ ವರದಿ ಇದು. ಈ ಎಲ್ಲಾ ಅನುಭವಗಳ ಹಿನ್ನೆಲೆಗಳಲ್ಲಿ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಅನುಸರಿಸಬೇಕಿರುವ ಸೂಕ್ಷ್ಮತೆಗಳ ಅವಶ್ಯಕತೆಯನ್ನು ಮತ್ತೊಮ್ಮೆ ಪ್ರತಿಪಾದಿಸಿದಂತಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.