ವೈಜ್ಞಾನಿಕ ಸಂಶೋಧನೆಗೆ ಆದ್ಯತೆ ಕಲ್ಪಿಸಿ ನಮ್ಮ ದೇಶದಲ್ಲಿರುವ ವೈಜ್ಞಾನಿಕ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ತೀವ್ರ ಪರಿಣಾಮ ಬೀರುವಂತಹ ಯಾವುದೇ ಸಾಧನೆ ಮಾಡಿ ತೋರಿಸಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ಮನಮೋಹನಸಿಂಗ್ ಅವರು ಕಳವಳ ವ್ಯಕ್ತಪಡಿಸಿರುವುದು ಸಕಾಲಿಕ ಎಚ್ಚರಿಕೆ ಎಂದೇ ಪರಿಗಣಿಸಬಹುದು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಸಭೆಯಲ್ಲಿ ಅವರು ಮಾತನಾಡಿ, ಕಳೆದ 70 ವರ್ಷಗಳಿಂದ ದೇಶದ ವೈಜ್ಞಾನಿಕ ಕ್ಷೇತ್ರದಲ್ಲಿ ಆಗಿರುವ ಸಾಧನೆಯನ್ನು ಶ್ಲಾಘಿಸಿದ್ದಾರೆ. ಆದರೆ ಅಷ್ಟಕ್ಕೇ ತೃಪ್ತಿ ಪಡುವಂತಿಲ್ಲ. ದೊಡ್ಡ ಕನಸುಗಳನ್ನು ಕಟ್ಟಿ ಅದನ್ನು ಸಾಕಾರಗೊಳಿಸಬೇಕು, ವಿಜ್ಞಾನಿಗಳ ಶ್ರೇಷ್ಠತೆ, ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಕೆಯಾಗಬೇಕು ಎಂದು ಕಿವಿಮಾತು ಹೇಳಿರುವುದು ಆ ಕ್ಷೇತ್ರದ ಕೊರತೆಯನ್ನು ಗುರುತಿಸಿರುವ ಸಕಾಲಿಕ ಚಿಂತನೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವದ ಅಗತ್ಯವಿದೆ ಎಂಬ ಮಾತೂ ಕೂಡ ಅರ್ಥಗರ್ಭಿತವಾಗಿದೆ. ದೇಶದಲ್ಲಿ ವಿಜ್ಞಾನ ಕ್ಷೇತ್ರ ಪ್ರತಿಭಾವಂತರ ಕೊರತೆ ಎದುರಿಸುತ್ತಿರುವುದು ಪ್ರಧಾನಿಯವರಿಗೆ ತಿಳಿಯದ ವಿಷಯವೇನಲ್ಲ. ಹಿಂದಿನ ಕೆಲವು ದಶಕಗಳಲ್ಲಿ ರೂಪುಗೊಂಡ ಪ್ರತಿಭಾವಂತ ವಿಜ್ಞಾನಿಗಳಲ್ಲಿ ಬಹುಪಾಲು ಮಂದಿಯ ಪ್ರತಿಭಾ ಪಲಾಯನವಾಗಿದೆ. ದೇಶದಲ್ಲಿ ಉಳಿದವರು ಮೂಲಭೂತ ಸೌಲಭ್ಯಗಳು, ಪ್ರಯೋಗಾಲಯಗಳು ಮತ್ತು ಹಣಕಾಸಿನ ಕೊರತೆಯಿಂದ ಹತಾಶರಾಗಿದ್ದಾರೆ. ಯಾವುದೇ ಒಂದು ದೇಶ ಮುಂದುವರೆದ ದೇಶವಾಗುವುದು ಷೇರುಪೇಟೆಯಲ್ಲಿ ಷೇರುಗಳ ಬೆಲೆ ಏರಿಕೆಯಿಂದಲ್ಲ. ಮೂಲವಿಜ್ಞಾನ ಮತ್ತಿತರ ಮುಂಚೂಣಿ ಕ್ಷೇತ್ರಗಳಲ್ಲಿ ಎಷ್ಟರಮಟ್ಟಿಗೆ ಸಾಧನೆ ಮಾಡಿದೆ ಎನ್ನುವುದರ ಮೇಲೆ. ಈ ದೃಷ್ಟಿಯಿಂದ ನೋಡಿದರೆ ಭಾರತದ ಪ್ರಗತಿ ಆಶಾದಾಯಕವಾಗಿಲ್ಲ. ವಿಜ್ಞಾನದ ಪ್ರತಿಭೆಗಳು ಅರಳಲು ವಿಶ್ವವಿದ್ಯಾಲಯಗಳು ವೇದಿಕೆಯಾಗಬೇಕು. ಕೈಗಾರಿಕೋದ್ಯಮ ಮತ್ತು ವಿಜ್ಞಾನ ಜೊತೆಜೊತೆಯಾಗಿ ಬೆಳೆಯುವಂತಾದರೆ ಬಂಡವಾಳದ ಸಮಸ್ಯೆ ಪರಿಹಾರವಾದಂತಾಗುತ್ತದೆ. ಹಾಗೆ ನೋಡಿದರೆ ವಿಜ್ಞಾನ ಕ್ಷೇತ್ರಕ್ಕೆ ಭಾರತ ಖರ್ಚು ಮಾಡುತ್ತಿರುವುದು ಕಡಿಮೆ. ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವಲ್ಲಿ ನಾವು ಯಶಸ್ವಿಯಾಗದೇ ಇರುವುದರಿಂದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಶೇ 2ರಷ್ಟು ಹಣವನ್ನೂ ವೈಜ್ಞಾನಿಕ ಕ್ಷೇತ್ರಕ್ಕೆ ನೀಡಲಾಗಿಲ್ಲ ಎನ್ನುವ ವಿಷಾದವನ್ನೂ ಪ್ರಧಾನಿ ವ್ಯಕ್ತಪಡಿಸಿರುವುದು ಪರಿಸ್ಥಿತಿಯ ವ್ಯಂಗ್ಯದಂತಿದೆ. ವಿಜ್ಞಾನ ಕ್ಷೇತ್ರದಲ್ಲಿ ನಾವೀಗ ಇತರ ರಾಷ್ಟ್ರಗಳೊಂದಿಗೆ ಸ್ಪರ್ಧಿಸಬೇಕಾಗಿದೆ. ಭಾರತ ಹಿಂದೆ ಬಿದ್ದರೆ ಅಭಿವೃದ್ಧಿ ದೃಷ್ಟಿಯಿಂದ ಹಿನ್ನಡೆ ಅನುಭವಿಸಬೇಕಾಗುತ್ತದೆ. ವಿಜ್ಞಾನ ಕ್ಷೇತ್ರವನ್ನು ಎಲ್ಲ ನಿರ್ಬಂಧಗಳಿಂದ ಮುಕ್ತಗೊಳಿಸುವುದೂ ತುರ್ತಾಗಿ ಆಗಬೇಕಾದ ಕಾರ್ಯ. ಮೂಲ ವಿಜ್ಞಾನ ಅಧ್ಯಯನದಲ್ಲಿ ಯುವಕರಲ್ಲಿ ಹಿಂಜರಿಕೆ ಹೆಚ್ಚುತ್ತಿದೆ. ದೊಡ್ಡದೊಡ್ಡ ಕೈಗಾರಿಕೆಗಳಲ್ಲಿ ಲಾಭದ ಕೆಲವು ಅಂಶವನ್ನು ಸಂಶೋಧನೆಗೆ ಮೀಸಲಿಡಬೇಕು. ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ಕೈಗಾರಿಕಾ ವಲಯದಲ್ಲಿ ಸಂಶೋಧನೆಗೆ ಆದ್ಯತೆ ಇದೆ. ವೈಜ್ಞಾನಿಕ ಸಂಶೋಧನೆಗೆ ತೊಡಗಿಸಿಕೊಳ್ಳುವ ದೂರದೃಷ್ಟಿ ಎಲ್ಲ ವಲಯಗಳಲ್ಲಿ ಕಂಡು ಬರಬೇಕು. ಸಂಶೋಧನೆಯಲ್ಲಿ ಹಿನ್ನಡೆಯಾದರೆ ಅದು ಒಟ್ಟಾರೆ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.