ಬಾಳಸಂಜೆಯಲ್ಲಿ ಬೆಳಕಿರಲಿ ವೃದ್ಧ ತಂದೆತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಮಕ್ಕಳದ್ದೇ ಹೊರತು ಸರ್ಕಾರದ್ದಲ್ಲ ಎಂಬಂತಹ ಅಭಿಪ್ರಾಯವನ್ನು ರಾಜ್ಯ ಹೈಕೋರ್ಟ್ ವ್ಯಕ್ತಪಡಿಸಿದೆ. ಹೌದು. ಭಾರತದಲ್ಲಿ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಕುಟುಂಬಗಳದ್ದು. `ಮಾತೃ ದೇವೋ ಭವ, ಪಿತೃ ದೇವೋ ಭವ' ಎಂದು ಹೇಳುವ ಪರಂಪರೆ ನಮ್ಮ ಬೆನ್ನಿಗಿದೆ. ಆದರೆ ಇಂದು ಭಾರತೀಯ ಕುಟುಂಬಗಳಲ್ಲಿ ತಮಗೆ ಸಿಗಬೇಕಾದ ಆರೈಕೆ, ಗೌರವಗಳಿಂದ ಮನೆಹಿರಿಯರು ವಂಚಿತರಾಗುತ್ತಿರುವ ಬೆಳವಣಿಗೆಗಳು ಕಂಡುಬರುತ್ತಿವೆ. ಪೋಷಣೆ ಸಿಗಬೇಕಾದ ಕುಟುಂಬಗಳಲ್ಲೇ ಹಿರಿಯರು ದೌರ್ಜನ್ಯಕ್ಕೊಳಗಾಗುವ ಪ್ರಕರಣಗಳು ನಡೆಯುತ್ತಿವೆ. ಈ ಕಹಿ ವಾಸ್ತವವನ್ನು ಸಮೀಕ್ಷೆಗಳೂ ದೃಢ ಪಡಿಸಿವೆ. ಹೊಂದಾಣಿಕೆಯ ಕೊರತೆ ಹಾಗೂ ಆರ್ಥಿಕ ಅವಲಂಬನೆ ಇಂತಹ ದೌರ್ಜನ್ಯಗಳಿಗೆ ಎರಡು ಮುಖ್ಯ ಕಾರಣಗಳೆಂದು ಗುರುತಿಸಲಾಗುತ್ತದೆ. ಮಕ್ಕಳು ಮೊಮ್ಮಕ್ಕಳ ಜೊತೆಗೆ ಅಜ್ಜ ಅಜ್ಜಿಯರೂ ಇರುವಂತಹ ಅವಿಭಕ್ತ ಕುಟುಂಬಗಳ ಸಂಖ್ಯೆ ಇಂದು ಕಡಿಮೆಯಾಗುತ್ತಿದೆ. ನಗರೀಕರಣ, ಉದ್ಯೋಗ ನಿಮಿತ್ತ ವಲಸೆ ಮುಂತಾದ ಕಾರಣಗಳು ಕುಟುಂಬ ವ್ಯವಸ್ಥೆಯಲ್ಲಿನ ಪಲ್ಲಟಗಳಿಗೆ ಕಾರಣ. ಈ ಹಿಂದೆ, ಮನೆಯೊಳಗೆ ಮಕ್ಕಳ ಆರೈಕೆ, ಹಿರಿಯರ ಪೋಷಣೆಯನ್ನು ಹೆಚ್ಚು ನಿರ್ವಹಿಸುತ್ತಿದ್ದವರು ಮಹಿಳೆಯರು.ಆದರೆ ಈಗ ಹೊರಗೆ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕುಟುಂಬದ ಸ್ವರೂಪದಲ್ಲಿ ಪಲ್ಲಟಗಳಾಗುತ್ತಿವೆ. ಬಹಳಷ್ಟು ಸಂಖ್ಯೆಯ ವೃದ್ಧರು ಏಕಾಂಗಿಯಾಗಿ ಜೀವಿಸುವುದು ಅನಿವಾರ್ಯ ಎಂಬಂತಹ ಬೆಳವಣಿಗೆಗಳನ್ನೂ ಸಮಾಜದಲ್ಲಿ ಕಾಣುತ್ತಿದ್ದೇವೆ. ಈ ಸಾಮಾಜಿಕ ಸ್ಥಿತ್ಯಂತರಗಳು, ಇವು ಸೃಷ್ಟಿಸುವ ಸಮಸ್ಯೆಗಳ ನಿವಾರಣೆಗೆ ಸರ್ಕಾರಗಳೂ ಗಮನ ಹರಿಸಬೇಕಾದುದು ಅವಶ್ಯ. 1999ನ್ನು `ವೃದ್ಧರ ಅಂತರರಾಷ್ಟ್ರೀಯ ವರ್ಷ'ಎಂದು ವಿಶ್ವಸಂಸ್ಥೆ ಆಚರಿಸಿತ್ತು. ಈ ಹಿನ್ನೆಲೆಯಲ್ಲಿ ವಯಸ್ಸಾಗುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಮಗ್ರವಾಗಿ ನಿರ್ವಹಿಸಲು 1999ರಲ್ಲಿ ವೃದ್ಧರಿಗಾಗಿ ರಾಷ್ಟ್ರೀಯ ನೀತಿಯೊಂದನ್ನು ಕೇಂದ್ರ ಜಾರಿಗೊಳಿಸಿತ್ತು. ಹಿರಿಯ ನಾಗರಿಕರಿಗೆ ಹಣಕಾಸು ನೆರವು, ಆಹಾರ ಭದ್ರತೆ, ಆರೋಗ್ಯ ಸೇವೆ, ಆಶ್ರಯ ಮತ್ತು ಶೋಷಣೆಯ ವಿರುದ್ಧ ರಕ್ಷಣೆ, ಈ ಎಲ್ಲವನ್ನೂ ಈ ನೀತಿ ಒಳಗೊಂಡಿತ್ತು. 2011ರಲ್ಲಿ ಈ ನೀತಿಯನ್ನು ಮತ್ತೆ ಪರಿಷ್ಕರಿಸಲಾಗಿದೆ. ವೃದ್ಧರನ್ನು ಬೀದಿಪಾಲು ಮಾಡಿದವರಿಗೆ ಶಿಕ್ಷೆ ನೀಡುವ ಮತ್ತು ಅವರ ಆಸ್ತಿ ಹಕ್ಕು ಭದ್ರಪಡಿಸುವಂತಹ ಪೋಷಕರು ಹಾಗೂ ಹಿರಿಯ ನಾಗರಿಕರ ಪಾಲನೆ ಕಾಯಿದೆಯನ್ನು 2007ರಲ್ಲಿ ರೂಪಿಸಲಾಯಿತು ಎಂಬುದನ್ನೂ ಗಮನಿಸಬೇಕು. ಆದರೆ ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಹೆಚ್ಚಬೇಕಾಗಿರುವುದು ಅವಶ್ಯ. ಈಗ ನಮ್ಮ ರಾಷ್ಟ್ರದಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಿದೆ ನಿಜ. ಆದರೆ ಬರಲಿರುವ ದಶಕಗಳಲ್ಲಿ ಹೆಚ್ಚಾಗುವಂತಹ ವೃದ್ಧರ ಕುರಿತಂತೆ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿಗಾಗಿ ಕಾರ್ಯತಂತ್ರಗಳನ್ನು ರೂಪಿಸುವ ಹೊಣೆಗಾರಿಕೆ ಸರ್ಕಾರಕ್ಕೆ ಇದ್ದೇ ಇದೆ ಎಂಬುದನ್ನು ಮರೆಯಲಾಗದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.