ಸಾಧನೆಗೆ ಸಿಕ್ಕ ಗೆಲುವು ಮೊದಲ ಚುನಾವಣೆಯನ್ನು ಭರವಸೆಯ ಬಲದಿಂದ ಗೆದ್ದುಬಿಡಬಹುದು, ಎರಡನೆ ಅವಧಿಗೆ ಆ ಅನುಕೂಲತೆ ಇರುವುದಿಲ್ಲ. ಆಡಳಿತ ವಿರೋಧಿ ಅಲೆಯನ್ನು ಎದುರಿಸಿ ಸಾಧನೆಯ ಬಲದಿಂದ ಚುನಾವಣೆಯನ್ನು ಗೆಲ್ಲಬೇಕಾಗುತ್ತದೆ. ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಹುಸೇನ್ ಒಬಾಮ ಮರು ಆಯ್ಕೆಯಾಗಿರುವುದು ವಿಶೇಷ ಅನಿಸಿಕೊಳ್ಳಲು ಇದು ಮುಖ್ಯ ಕಾರಣ. ಅವರ ಗೆಲುವಿನ ಹಾದಿ ಸುಲಭದ್ದಾಗಿರಲಿಲ್ಲ. ನಾಲ್ಕು ವರ್ಷಗಳ ಹಿಂದೆ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಕಾಲದಲ್ಲಿ ಸಂಕಷ್ಟ ಸ್ಥಿತಿಯಲ್ಲಿದ್ದ ಅಮೆರಿಕದ ಅರ್ಥಿಕತೆಯಲ್ಲಿ ಈಗಲೂ ಬಹಳ ಸುಧಾರಣೆ ಆಗಿಲ್ಲ. ನಿರುದ್ಯೋಗದ ಪ್ರಮಾಣ ಶೇಕಡಾ 7.9ರ ದಾಖಲೆ ಪ್ರಮಾಣವನ್ನು ತಲುಪಿದೆ.ಬಜೆಟ್ ಕೊರತೆ ಏರುತ್ತಲೇ ಇದೆ. ರೋಗಗ್ರಸ್ತ ಉದ್ಯಮಗಳು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಿದ್ದರೂ ಈ ಬಿಕ್ಕಟ್ಟಿನ ಸಮಯದಲ್ಲಿ ದೇಶವನ್ನು ಮುನ್ನಡೆಸಬಲ್ಲ ನಾಯಕತ್ವ ಒಬಾಮ ಅವರಲ್ಲಿದೆ ಎಂಬ ವಿಶ್ವಾಸವನ್ನು ಅಮೆರಿಕದ ಜನತೆ ವ್ಯಕ್ತಪಡಿಸಿರುವುದಕ್ಕೆ ಅವರು ಕೈಗೊಂಡ ಕೆಲವು ದಿಟ್ಟ ನಿರ್ಧಾರಗಳು ಕಾರಣ. `ಆರ್ಥಿಕ ಹಿಂಜರಿತದಿಂದಾಗಿ ನಷ್ಟಕ್ಕೀಡಾಗಿರುವ ಖಾಸಗಿ ಕ್ಷೇತ್ರದ ಉದ್ಯಮಗಳ ರಕ್ಷಣೆ ಸರ್ಕಾರದ ಕೆಲಸ ಅಲ್ಲ, ಅದನ್ನು ಮುಕ್ತ ಮಾರುಕಟ್ಟೆಗೆ ಬಿಟ್ಟುಬಿಡಬೇಕು~ ಎಂಬ ರಿಪಬ್ಲಿಕ್ ಪಕ್ಷದ ಅಭಿಪ್ರಾಯವನ್ನು ಡೆಮಾಕ್ರಟಿಕ್ ಪಕ್ಷ ಪ್ರಾರಂಭದಿಂದಲೇ ವಿರೋಧಿಸುತ್ತಾ ಬಂದಿದೆ. `ದೊಡ್ಡ ಸಂಖ್ಯೆಯಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತಿರುವ ಖಾಸಗಿ ಕ್ಷೇತ್ರದ ಉದ್ಯಮಗಳಿಗೆ ಕಷ್ಟದಲ್ಲಿ ನೆರವಾಗುವುದು ಸರ್ಕಾರದ ಕರ್ತವ್ಯ~ ಎಂದು ಹೇಳುತ್ತಾ ಬಂದ ಬರಾಕ್ ಒಬಾಮ ನಷ್ಟದಿಂದಾಗಿ ಮುಚ್ಚುವ ಭೀತಿಯಲ್ಲಿದ್ದ ಮೋಟಾರ್ ಉದ್ಯಮವನ್ನು ಪಾರು ಮಾಡಿ ವಿರೋಧವನ್ನು ಎದುರಿಸಿದ್ದರು. ದೇಶದ ಸುರಕ್ಷತೆಯ ವಿಚಾರದಲ್ಲಿ ಡೆಮಾಕ್ರ್ರಟಿಕ್ ಪಕ್ಷದ ನಿಲುವು ಪ್ರಾರಂಭದಿಂದಲೂ ಟೀಕೆಗೊಳಗಾಗುತ್ತಾ ಬಂದಿದೆ. ಆದರೆ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಹತ್ಯೆಯ ಯಶಸ್ವಿ ಕಾರ್ಯಾಚರಣೆಯ ಮೂಲಕ ಒಬಾಮ ಅಮೆರಿಕನ್ನರ ಮನಸ್ಸನ್ನು ಗೆದ್ದುಬಿಟ್ಟಿದ್ದಾರೆ. ಹೆಚ್ಚು ವಿವಾದಕ್ಕೀಡಾಗಿರುವುದು ಒಬಾಮ ಮಹತ್ವಾಕಾಂಕ್ಷೆಯ ಸಾಮೂಹಿಕ ಆರೋಗ್ಯ ವಿಮಾ ಯೋಜನೆ. ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಮಿಟ್ ರೊಮ್ನಿ ಚುನಾವಣಾ ಪ್ರಚಾರ ಕಾಲದಲ್ಲಿಯೂ ಅದರ ವಿರುದ್ದ ವಾಗ್ದಾಳಿ ನಡೆಸಿದ್ದರು. ಗರ್ಭಪಾತವನ್ನು ಕಾನೂನುಬದ್ಧಗೊಳಿಸಬೇಕು ಮತ್ತು ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂಬ ಬೇಡಿಕೆಗಳನ್ನು ಕೂಡಾ ಒಬಾಮ ಬೆಂಬಲಿಸಿದ್ದರು. ಅಧಿಕಾರದ ಮೊದಲ ಅವಧಿಯಲ್ಲಿ ಒಬಾಮ ಕೈಗೊಂಡ ಇಂತಹ ಅನೇಕ ನಿರ್ಧಾರಗಳು ವಿವಾದಕ್ಕೆ ಕಾರಣವಾಗಿದ್ದವು. ಚುನಾವಣೆಯಲ್ಲಿನ ಗೆಲುವು ಆ ನಿರ್ಧಾರಗಳಿಗೆ ಜನಮತದ ಬೆಂಬಲ ಇದೆ ಎನ್ನುವುದನ್ನು ಸಾಬೀತುಪಡಿಸಿರುವುದು ಅವರು ಎರಡನೆ ಅವಧಿಯನ್ನು ಹೆಚ್ಚು ಆತ್ಮವಿಶ್ವಾಸದಿಂದ ನಿರ್ವಹಿಸಲು ನೆರವಾಗಬಹುದು. ಆರ್ಥಿಕ ಹಿಂಜರಿತದಿಂದ ಅಮೆರಿಕವನ್ನು ಪಾರುಮಾಡಲು ಒಬಾಮ ಜನಪ್ರಿಯವಲ್ಲದ ಕೆಲವು ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗಿದೆ. ತುಂಬಿತುಳುಕುವ ಆತ್ಮವಿಶ್ವಾಸವೇ ಬರಾಕ್ ಒಬಾಮ ಅವರ ವ್ಯಕ್ತಿತ್ವಕ್ಕೆ ವರ್ಚಸ್ಸನ್ನು ತಂದುಕೊಟ್ಟಿರುವುದು. ಕಳೆದ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಅವರ ಜನಪ್ರಿಯ ವ್ಯಕ್ತಿತ್ವ ಅನುಭವದಿಂದ ಪಕ್ವಗೊಂಡಿರಬಹುದು. ಅಮೆರಿಕ ಒಂದು ಪ್ರತ್ಯೇಕ ದೇಶವಾದರೂ ಅಲ್ಲಿನ ಸರ್ಕಾರದ ನಿರ್ಧಾರಗಳ ಪರಿಣಾಮದಿಂದ ವಿಶ್ವದ ಇತರ ರಾಷ್ಟ್ರಗಳು ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ. ಈ ಕಾರಣದಿಂದಲೇ ಇಡೀ ಜಗತ್ತು ಮುಂದಿನ ನಾಲ್ಕು ವರ್ಷದ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಮರುಆಯ್ಕೆಯಾಗಿರುವ ಬರಾಕ್ ಒಬಾಮ ಕಡೆ ನೋಡುತ್ತಿದೆ. ಅವರು ನಿರೀಕ್ಷೆಯನ್ನು ಹುಸಿಗೊಳಿಸದಿರಲಿ, ಅವರಿಗೆ ಒಳ್ಳೆಯದಾಗಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.