ಎದುರಾಗಿರುವ ಸವಾಲು ಭಯೋತ್ಪಾದಕರ ಅಟ್ಟಹಾಸ ಇನ್ನೂ ಅಡಗಿಲ್ಲ. ಮಟ್ಟ ಹಾಕಲು ಯತ್ನಿಸಿದಷ್ಟೂ ಭಯೋತ್ಪಾದನೆ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕೆಲವು ಭಯೋತ್ಪಾದಕ ಸಂಘಟನೆಗಳು ನಕಲಿ ಕಂಪೆನಿಗಳ ಹೆಸರುಗಳಲ್ಲಿ ಷೇರುಪೇಟೆಯಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ತೊಡಗಿಸುತ್ತಿರುವುದು ಭಯೋತ್ಪಾದನೆಯ ಹೊಸ ರೂಪ. ನೆರೆರಾಷ್ಟ್ರಗಳಲ್ಲಿ ಸದಾ ಗಲಿಬಿಲಿ ಸೃಷ್ಟಿ ಮಾಡುವ ಭಯೋತ್ಪಾದಕರು ಈಗ ರಾಷ್ಟ್ರದಲ್ಲಿ ಆರ್ಥಿಕ ಭಯೋತ್ಪಾದನೆಗೆ ಪ್ರಯತ್ನಿಸುತ್ತಿರುವ ಆತಂಕದ ಸುದ್ದಿಯನ್ನು ಪ್ರಕಟಿಸಿರುವ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಇದನ್ನು ಪತ್ತೆ ಹಚ್ಚಲು ಅಂತರರಾಷ್ಟ್ರೀಯ ಸಹಕಾರವನ್ನು ಕೋರಿದ್ದಾರೆ. ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಭಯೋತ್ಪಾದಕರ ಕೃತ್ಯ ಇಂದು ನಿನ್ನೆಯದಲ್ಲ. ಶಾಂತಿ ಕದಡುವ ಯತ್ನವನ್ನು ಅವರು ಒಂದಲ್ಲಾ ಒಂದು ರೀತಿಯಲ್ಲಿ ಮಾಡುತ್ತಲೇ ಬಂದಿದ್ದಾರೆ. ಈಗ ಆರ್ಥಿಕ ವಲಯವನ್ನೇ ಬುಡಮೇಲು ಮಾಡುವ ಹೊಂಚು ಹಾಕುತ್ತಿರುವ ಭಯೋತ್ಪಾದಕರನ್ನು ಸದೆ ಬಡಿಯುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಲು ಕಾಲ ಪಕ್ವವಾಗಿದೆ. ಮುಂಬೈ ಸರಣಿ ಸ್ಫೋಟ, ಪುಣೆ ಬಾಂಬ್‌ಸ್ಫೋಟ, ತಾಜ್ ಹೋಟೆಲ್‌ಗೆ ಲಗ್ಗೆ. ಹೀಗೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಭಯೋತ್ಪಾದಕರು ಪದೇಪದೇ ಮಾಡುತ್ತಲೇ ಬಂದ್ದ್ದಿದಾರೆ ಈಗ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ತೊಡಗಿಸುವ ಮೂಲಕ ದೇಶದಲ್ಲಿ ಭಯೋತ್ಪಾದಕರಿಗೆ ಹಣ ಪೂರೈಕೆ ಮಾರ್ಗವನ್ನು ಹುಡುಕಿಕೊಳ್ಳಲಾಗಿದೆ ಎನ್ನುವ ಸೂಚನೆ ಗೃಹ ಇಲಾಖೆಯಿಂದ ಇದೇ ಮೊದಲ ಬಾರಿಗೆ ಬಹಿರಂಗವಾಗಿದೆ. 2007ರಲ್ಲಿ ರಾಷ್ಟೀಯ ಭದ್ರತಾ ಸಲಹೆಗಾರರಾಗಿದ್ದ ಎಂ.ಕೆ.ನಾರಾಯಣನ್, ಮುಂಬೈ ಮತ್ತು ಚೆನ್ನೈ ಷೇರುಮಾರುಕಟ್ಟೆಯಲ್ಲಿ ನಕಲಿ ಕಂಪೆನಿಗಳು ಪ್ರವೇಶಿಸಿರುವ ಸುಳಿವು ನೀಡಿದ್ದರು. ದುಬೈ ಮತ್ತು ಅರಬ್‌ಮಾರ್ಗವಾಗಿ ಹಣ ಹೂಡಿಕೆಯಾಗುತ್ತಿರುವ ಮಾಹಿತಿಯೂ ಇತ್ತು. ಕಳೆದ ಡಿಸೆಂಬರ್‌ನಲ್ಲಿ ಅಂದಿನ ಹಣಕಾಸು ಸಚಿವರು ಷೇರುಮಾರುಕಟ್ಟೆಯಲ್ಲಿ ಅನುಮಾನಾಸ್ಪದವಾಗಿ ಹತ್ತು ನಕಲಿ ಕಂಪೆನಿಗಳು ವ್ಯವಹಾರ ನಡೆಸುತ್ತಿರುವ ಮಾಹಿತಿಯನ್ನು ಸಂಸತ್ತಿನಲ್ಲೇ ಪ್ರಕಟಿಸಿದ್ದರು. ಜೊತೆಗೆ ಭಯೋತ್ಪಾದನೆ ಸಂಘಟನೆ ಮೂಲಗಳಿಂದ ಷೇರುಪೇಟೆಗೆ ಬಂಡವಾಳ ಹರಿಯುತ್ತಿದೆ ಎಂಬ ಅನುಮಾನವನ್ನು 35 ಷೇರು ದಲ್ಲಾಳಿ ಸಂಸ್ಥೆಗಳು ವ್ಯಕ್ತಪಡಿಸಿವೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ)ಯೂ ಇತ್ತೀಚೆಗಷ್ಟೇ ಹೇಳಿತ್ತು. ಈಗ ಇಂದಿನ ಗೃಹ ಸಚಿವರು ಇಂತಹ ಹೂಡಿಕೆಗಳ ವಿವರ ತಿಳಿಯಲು ಇಂಟರ್‌ಪೋಲ್ ನೆರವು ಕೇಳಿರುವುದು ಸಕಾಲಿಕವಾಗಿದೆ. ವಿದೇಶಿ ನೆಲದ ಆಶ್ರಯ ಪಡೆದು ಈ ಭಯೋತ್ಪಾದನೆ ನಡೆಯುತ್ತಿರುವ ಸಂಗತಿ ಕೂಡ ತಿಳಿಯದ ವಿಷಯವೇನಲ್ಲ. ಗಂಭೀರ ಹಾಗೂ ದಿಟ್ಟ ಕ್ರಮದ ಮೂಲಕ ಈ ಸವಾಲನ್ನು ಎದುರಿಸಲು ಸರ್ಕಾರ ಸಜ್ಜಾಗಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.