ಕವಲೊಡೆದ ಚಳವಳಿ ಕಠಿಣ ಜನ ಲೋಕಪಾಲ್ ಮಸೂದೆಗೆ ಆಗ್ರಹಿಸುವ ಆಂದೋಲನದ ಪುನಶ್ಚೇತನಕ್ಕಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು 13 ಮಂದಿಯ ಹೊಸ ತಂಡದೊಂದಿಗೆ ಸಜ್ಜಾಗಿರುವುದಾಗಿ ಪ್ರಕಟಿಸಿರುವುದು ಹೊಸ ಬೆಳವಣಿಗೆ. `ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಚಳವಳಿ ಸ್ಥಗಿತಗೊಂಡಿಲ್ಲ~ ಎಂದು ಘೋಷಿಸಿರುವ ಅವರು ಜನವರಿಯಿಂದ ರಾಷ್ಟ್ರದಾದ್ಯಂತ ಪ್ರವಾಸ ಮಾಡುವುದಾಗಿ ಪ್ರಕಟಿಸಿದ್ದಾರೆ. ವಿಭಿನ್ನ ನಿಲುವುಗಳಿಂದಾಗಿ ರಾಜಕೀಯ ಪಕ್ಷಗಳು ಒಡೆದು ಹೋಳಾಗುವುದು ಸರ್ವೇಸಾಮಾನ್ಯ. ಆದರೆ ಈ ಪ್ರವೃತ್ತಿ ಜನಪರ ಆಂದೋಲನಗಳಲ್ಲೂ ವ್ಯಕ್ತವಾಗುತ್ತಿರುವುದು ದುರದೃಷ್ಟಕರ. ಉದಾತ್ತ ಉದ್ದೇಶಗಳನ್ನಿಟ್ಟುಕೊಂಡ ಹೋರಾಟಗಳು ಅಲ್ಪ ಕಾಲದಲ್ಲೇ ಕವಲೊಡೆಯುವುದು ಒಳ್ಳೆಯ ಸಂದೇಶಗಳನ್ನಂತೂ ನೀಡುವುದಿಲ್ಲ. ಈ ಬೆಳವಣಿಗೆಗಳು ಜನಪರ ಆಂದೋಲನಗಳ ಕುರಿತಂತೆ ಭ್ರಮನಿರಸನಕ್ಕೂ ಕಾರಣವಾಗಬಹುದು. ಅಣ್ಣ ಹಜಾರೆ ಅವರ ಹೋರಾಟ, ನಿರಶನ ಜನರನ್ನು ಸಾಗರೋಪಾದಿಯಲ್ಲಿ ಸೆಳೆದಿದ್ದವು. ಭ್ರಷ್ಟಾಚಾರದಿಂದ ವಿಮುಕ್ತಿಗೆ ನಡೆಯುತ್ತಿರುವಂತಹ `ಎರಡನೇ ಸ್ವಾತಂತ್ರ್ಯ ಹೋರಾಟ ಇದು~ ಎಂಬಂತೆಯೂ ಜನಮಾನಸದಲ್ಲಿ ಬಿಂಬಿತವಾಗಿತ್ತು. ಆದರೆ ಆಂದೋಲನ ಸಾಗಬೇಕಾಗಿದ್ದ ದಿಕ್ಕಿನ ಕುರಿತಂತೆ `ಇಂಡಿಯಾ ಎಗೇನ್ಸ್ಟ್ ಕರಪ್ಷನ್~ ತಂಡದೊಳಗೇ ಸ್ಪಷ್ಟತೆ ಇಲ್ಲದಿದ್ದುದು ಒಡಕಿನ ಬೆಳವಣಿಗೆಗಳಿಗೆ ಹಾದಿಯಾಗಿದ್ದು ಸಹಜ. `ಚುನಾವಣಾ ರಾಜಕಾರಣದಿಂದ ಮಾತ್ರ ವ್ಯವಸ್ಥೆಯನ್ನು ಬದಲಿಸುವುದು ಸಾಧ್ಯ~ ಎನ್ನುವ ನಿಲುವಿಗೆ ಅಂಟಿಕೊಂಡ ಅಣ್ಣಾ ಹಜಾರೆ ತಂಡದ ಪ್ರಮುಖ ವ್ಯಕ್ತಿ ಅರವಿಂದ ಕೇಜ್ರಿವಾಲ್ ಈಗ ಭಿನ್ನ ಹಾದಿ ತುಳಿಯುತ್ತಿದ್ದಾರೆ. ಇದು ಮೂಲ ಉದ್ದೇಶಕ್ಕೇ ಭಂಗ ತಂದಂತಾಗಿದೆ. ಭ್ರಷ್ಟಾಚಾರವೇ ತಮ್ಮ ಸಾಮಾನ್ಯ ಶತ್ರು ಎಂದು ಈ ಎರಡೂ ಗುಂಪುಗಳು ಘೋಷಿಸಿವೆ. ರಾಜಕೀಯ ಹಾಗೂ ಉದ್ಯಮ ವ್ಯಕ್ತಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಹಗರಣಗಳನ್ನು ಅರವಿಂದ ಕೇಜ್ರಿವಾಲ್ ಅವರು ಒಂದಾದ ಮೇಲೆ ಒಂದರಂತೆ ಬಹಿರಂಗಗೊಳಿಸುತ್ತಿದ್ದಾರೆ. ನಿಯಮಿತವಾಗಿ ಬಹಿರಂಗಗೊಳ್ಳುತ್ತಿರುವ ಈ ಹಗರಣಗಳು ಎಷ್ಟರ ಮಟ್ಟಿನ ತೀಕ್ಷ್ಣತೆಯಿಂದ ಜನರ ಮನಸ್ಸನ್ನು ಆವರಿಸುತ್ತಿವೆ ಎಂಬುದು ಮುಖ್ಯ. ಈ ಕುರಿತು ಅಣ್ಣಾ ತಂಡ ನೀಡಿರುವ ಹೇಳಿಕೆ ಪ್ರಸ್ತುತ. ಹಗರಣಗಳನ್ನು ಬಹಿರಂಗಗೊಳಿಸುವ ಕ್ರಿಯೆ ಹೆಚ್ಚಿನ ಫಲಿತಾಂಶಗಳನ್ನು ನೀಡುವುದಿಲ್ಲ; ಏಕೆಂದರೆ ಭ್ರಷ್ಟಾಚಾರ ಸಾಬೀತು ಪಡಿಸಲು ಸ್ವತಂತ್ರ ಸಂಸ್ಥೆಗಳೇ ಇಲ್ಲ ಎಂಬಂತಹ ವಾದವನ್ನು ಅಣ್ಣಾ ತಂಡ ಮಂಡಿಸಿದೆ. ಹೀಗಾಗಿ ಸ್ವತಂತ್ರ ತನಿಖಾ ಸಂಸ್ಥೆಗಳಿಗಾಗಿ ಹೋರಾಡುವ ಉದ್ದೇಶವನ್ನು ಮತ್ತೊಮ್ಮೆ ಅಣ್ಣಾ ತಂಡ ಪುನರುಚ್ಚರಿಸಿದೆ. `ಎಲ್ಲಾ ಪಕ್ಷಗಳೂ ಭ್ರಷ್ಟವಾಗಿವೆ. ನಮ್ಮ ಪಕ್ಷ ಸಂಸತ್ತಿನಲ್ಲಿರುವ ಮುಖಗಳನ್ನು ಮಾತ್ರವಲ್ಲ ವ್ಯವಸ್ಥೆಯನ್ನೇ ಬದಲಿಸುತ್ತದೆ~ ಎಂಬ ದೊಡ್ಡ ಆದರ್ಶದ ಮಾತುಗಳನ್ನು ಕೇಜ್ರಿವಾಲ್ ಆಡುತ್ತಿದ್ದಾರೆ. ಪ್ರಭುತ್ವದ ದೈತ್ಯ ಶಕ್ತಿಯ ವಿರುದ್ಧ ಸೆಡ್ಡುಹೊಡೆದಿರುವ ಕೇಜ್ರಿವಾಲ್ ಅವರ ಸ್ಥೈರ್ಯ, ಆದರ್ಶ ಮೆಚ್ಚುವಂತಹದ್ದೇ. ಆದರೆ ವಾಸ್ತವ ಅಷ್ಟೊಂದು ಸರಳವಾಗಿಲ್ಲ. ಸಂಕೀರ್ಣ ಒಳಸುಳಿಗಳ ವಿರುದ್ಧದ ಹೋರಾಟಕ್ಕೆ ತಾಳ್ಮೆ, ಸಂಯಮ ಮುಖ್ಯ. ವಿಶ್ವಾಸಾರ್ಹತೆಯೂ ಮುಖ್ಯ. ಹೋರಾಟಗಳ ಫಲಕ್ಕಾಗಿ ದೀರ್ಘ ಕಾಲ ಕಾಯುವುದೂ ಅಗತ್ಯ. ನಾಗರಿಕ ಹೋರಾಟಗಳು ಎಂದಿಗೂ ರಾಜಕೀಯ ಕೆಸರೆರಚಾಟವಾಗುವುದು ಸಲ್ಲದು. ಜನಪರ ಆಂದೋಲನಗಳು ರಾಜಕೀಯೇತರವಾಗಿ ಉಳಿದಾಗ ಮಾತ್ರ ಘನತೆಯನ್ನು ಸ್ಥಾಪಿಸುವುದು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.