ಸಮತೋಲನದ ಕಸರತ್ತು ಆರ್ಥಿಕ ಹಿಂಜರಿಕೆಯ ತೂಗುಕತ್ತಿಯ ಕೆಳಗೆನಿಂತು ಕೇಂದ್ರ ಹಣಕಾಸು ಸಚಿವ ಪಳನಿಯಪ್ಪ ಚಿದಂಬರಂ ಮಂಡಿಸಿದ ದೇಶದ 82ನೇ ಬಜೆಟ್‌ನಲ್ಲಿ ಎಚ್ಚರಿಕೆಯಿಂದ ಇಟ್ಟಿರುವ ಹೆಜ್ಜೆಗುರುತುಗಳಿವೆ. ಇದು ಅವರ ಹದಿನಾರು ವರ್ಷಗಳ ಹಿಂದಿನ `ಕನಸಿನ ಬಜೆಟ್' ಅಲ್ಲ. ಇದನ್ನು ಚುನಾವಣಾ ಕಾಲದ ರಾಜಕೀಯ ಉದ್ದೇಶದ ಜನಪ್ರಿಯ ಬಜೆಟ್ ಎಂದು ಆರೋಪಿಸುವಂತೆಯೂ ಇಲ್ಲ. ಎಂದಿನಂತೆ ಯಾವ ಅಚ್ಚರಿಯ ಮೂಟೆಗಳನ್ನೂ ಅವರು ಉರುಳಿಸಿಲ್ಲ. ಆದರೆ ವಿರೋಧಿಗಳನ್ನು ಗೊಂದಲದಲ್ಲಿ ಕೆಡವಿಹಾಕುವ ಅವರ ಎಂದಿನ ಚಾಲಾಕಿತನ ಈ ಬಜೆಟ್‌ನಲ್ಲಿಯೂ ಕಾಣುತ್ತಿದೆ. ಜನಪ್ರಿಯ ಯೋಜನೆಗಳನ್ನು ಘೋಷಿಸಲು ಹೋಗದ ಸಚಿವರು ಸಾಮಾಜಿಕ ವಲಯದ ಯೋಜನೆಗಳಿಗೆ ಬೇಕಾದಷ್ಟು ಹಣ ಒದಗಿಸಿದ್ದಾರೆ. ಕೈ ಇಟ್ಟರೆ ಸುಡುವ ಸಬ್ಸಿಡಿಯನ್ನು ಮುಟ್ಟಲು ಹೋಗಿಲ್ಲ. ವೈಯಕ್ತಿಕ ವರಮಾನದ ಮೇಲಿನ ತೆರಿಗೆದರವನ್ನು ಇಳಿಸದೆ ಇದ್ದರೂ ಏರಿಸಲು ಹೋಗಿಲ್ಲ. ಇದರ ಜತೆಗೆ ಮನೆಸಾಲದ ಮೇಲಿನ ತೆರಿಗೆಯಲ್ಲಿ ಅಲ್ಪ ವಿನಾಯಿತಿ ನೀಡಿ ಇತ್ತೀಚೆಗೆ ಹೆಚ್ಚು ಜಾಗೃತಗೊಂಡಂತೆ ಕಾಣುತ್ತಿರುವ ಮಧ್ಯಮವರ್ಗ ಸಮಾಧಾನಪಟ್ಟುಕೊಳ್ಳುವಂತೆ ಮಾಡಿದ್ದಾರೆ. ಎಲ್ಲ ಶ್ರಿಮಂತರನ್ನು ಎದುರುಹಾಕಿಕೊಳ್ಳಲು ಹೋಗದೆ ಒಂದುಕೋಟಿ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿದವರ ಮೇಲೆ ಮಾತ್ರ ಒಂದು ವರ್ಷದ ಮಟ್ಟಿಗೆ ಶೇಕಡಾ 10ರ ಸರ್ಚಾರ್ಜ್ ವಿಧಿಸಿದ್ದಾರೆ. ಹತ್ತುಕೋಟಿ ರೂಪಾಯಿಗಳಿಗಿಂತ ಹೆಚ್ಚು ವರಮಾನ ಹೊಂದಿರುವ ಕಂಪೆನಿಗಳ ಮೇಲೆ ಐದರಿಂದ ಹತ್ತರಷ್ಟು ಸರ್ಚಾರ್ಜ್ ವಿಧಿಸಿರುವ ಸಚಿವರು ನೂರು ಕೋಟಿಗಿಂತ ಹೆಚ್ಚು ಬಂಡವಾಳ ಹೂಡುವ ಉದ್ಯಮಿಗಳಿಗೆ ಶೇಕಡಾ 15ರ ಬಂಡವಾಳ ಭತ್ಯೆ ಘೋಷಿಸಿದ್ದಾರೆ. ಈ ರೀತಿ ಎಲ್ಲ ಜನವರ್ಗಗಳ ನಡುವೆ ಸಮತೋಲನವನ್ನು ಕಾಯ್ದುಕೊಂಡು ಬರಲು ಹಣಕಾಸು ಸಚಿವರು ಕಸರತ್ತು ನಡೆಸಿದಂತೆ ಕಾಣುತ್ತಿದೆ. ಮಹಿಳೆಯರು, ಯುವಕರು ಮತ್ತು ಬಡವರ ಬಗ್ಗೆ ಬಜೆಟ್ ಭಾಷಣದಲ್ಲಿ ಭಾವುಕವಾಗಿ ಮಾತನಾಡಿದ ಸಚಿವರು ಅದಕ್ಕೆ ತಕ್ಕಂತಹ ರಚನಾತ್ಮಕ ಯೋಜನೆಗಳನ್ನು ನೀಡಿಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ. ವಿತ್ತೀಯ ಕೊರತೆಯನ್ನು ಈ ಸಾಲಿನಲ್ಲಿ ಶೇಕಡಾ 5.2ಕ್ಕೆ ಮಿತಿಗೊಳಿಸಿರುವುದು ಮಾತ್ರವಲ್ಲ,ಮುಂದಿನ ಹಣಕಾಸು ವರ್ಷದಲ್ಲಿ ಇದನ್ನು ಶೇಕಡಾ 4.2ಕ್ಕೆ ಇಳಿಸುವ ಭರವಸೆ ನೀಡಿದ್ದು ಆರ್ಥಿಕ ದೃಢತೆಯ ನಿರೀಕ್ಷೆ ಹುಟ್ಟಿಸಿದೆ. ಆದರೆ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ಮೂಲಕ 18,000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಅತಿರೇಕತನದ್ದು ಎನ್ನುತ್ತಿದೆ ಇಲ್ಲಿಯವರೆಗಿನ ಸಾಧನೆಯ ದಾಖಲೆ. ಇದರಿಂದಾಗಿಯೇ ಶೇಕಡಾ 30ರಷ್ಟು ಹೆಚ್ಚಿಸಲಾದ ಯೋಜನಾ ವೆಚ್ಚವನ್ನು ಕೂಡಾ ನಂಬುವುದು ಕಷ್ಟವಾಗುತ್ತದೆ. ಏಕರೂಪದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಮುಂದಿನ ಹಣಕಾಸು ವರ್ಷದಲ್ಲಿಯಾದರೂ ಜಾರಿಗೆ ಬರಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ವಿರೋಧಿಸುತ್ತಿರುವ ರಾಜ್ಯಗಳನ್ನು ಎದುರುಹಾಕಿಕೊಳ್ಳಲು ಹೋಗದ ಸಚಿವರು ನಷ್ಟದ ಪರಿಹಾರಕ್ಕೆ 10,000 ಕೋಟಿ ರೂಪಾಯಿ ನಿಗದಿಪಡಿಸಿ ಕೈತೊಳೆದುಕೊಂಡಿದ್ದಾರೆ. ಬಜೆಟ್‌ಗಳಲ್ಲಿ ಬರಿಗಣ್ಣಿನಲ್ಲಿ ಕಾಣುವುದೆಲ್ಲವೂ ಸತ್ಯ ಅಲ್ಲ. ಕಾಗದಗಳಲ್ಲಿ ಆಕರ್ಷಕವಾಗಿ ಕಾಣುವ, ಭಾಷಣ ಕೇಳಿದಾಗ ನಿರೀಕ್ಷೆ ಹುಟ್ಟಿಸುವ ಯೋಜನೆಗಳೆಲ್ಲವೂ ಜಾರಿಯಾಗುತ್ತದೆ, ನಿಗದಿಪಡಿಸಿದ ಹಣವನ್ನೆಲ್ಲಾ ಒದಗಿಸಲಾಗುತ್ತದೆ ಎನ್ನುವುದಕ್ಕೆ ಖಾತರಿ ಇಲ್ಲ. ಹೊಸ ಬಜೆಟ್ ಮಂಡನೆಯ ಜತೆಯಲ್ಲಿಯೇ ನೀಡಲಾಗುವ ಪರಿಷ್ಕೃತ ಬಜೆಟ್ ಅಂದಾಜಿನ ಮೇಲೆ ಕಣ್ಣಾಡಿಸಿದರೆ ಸರ್ಕಾರದ ಬಣ್ಣ ಬಯಲಾಗುತ್ತದೆ. ಮೇಲ್ನೋಟದಲ್ಲಿ ಭರವಸೆ ಹುಟ್ಟಿಸುವ ಚಿದಂಬರಂ ಬಜೆಟನ್ನು ಕೂಡಾ ಈ ಅನುಭವದ ಹಿನ್ನೆಲೆಯಲ್ಲಿಯೇ ನೋಡಬೇಕಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.