ಆರ್ಥಿಕ ಸಬಲೀಕರಣವಾಗಲಿ ಸರ್ಕಾರಿ ಕ್ಷೇತ್ರದಲ್ಲಿ ಮೊತ್ತ ಮೊದಲ ಬಾರಿಗೆ ಸರ್ವ ಮಹಿಳಾ ಬ್ಯಾಂಕ್ ಈ ವರ್ಷ ನವೆಂಬರ್‌ನಲ್ಲಿ ರಾಷ್ಟ್ರದಾದ್ಯಂತ ಆರು ಶಾಖೆಗಳ ಮೂಲಕ ಕಾರ್ಯಾಚರಣೆ ಆರಂಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಪ್ರಕಟಿಸಿದ್ದಾರೆ. ಇದಕ್ಕಾಗಿ ರೂ 1000 ಕೋಟಿ ಆರಂಭಿಕ ಬಂಡವಾಳವನ್ನು ಸಚಿವರು ಬಜೆಟ್‌ನಲ್ಲಿ ಒದಗಿಸಿದ್ದಾರೆ. ಈ ಉದ್ದೇಶಿತ ಬ್ಯಾಂಕ್ ಮುಖ್ಯವಾಗಿ ಮಹಿಳೆಯರು, ಮಹಿಳೆಯರು ನಡೆಸುವ ಉದ್ಯಮ, ವ್ಯವಹಾರಗಳಿಗೆ ಹಣಕಾಸು ನೆರವು ನೀಡಲಿದೆ. ಜೊತೆಗೆ ಮಹಿಳೆಯರ ಸ್ವಸಹಾಯ ಗುಂಪುಗಳು (ಎಸ್‌ಎಚ್‌ಜಿ) ಹಾಗೂ ಅವರ ಜೀವನೋಪಾಯಗಳಿಗೂ ಹಣಕಾಸು ಬೆಂಬಲವನ್ನು ನೀಡಲಿದೆ. ಮಹಿಳೆಯರಿಗಾಗಿ ಕೆಲವು ವಿಶೇಷ ಯೋಜನೆಗಳನ್ನು ಈ ಬ್ಯಾಂಕ್ ಹೊಂದಲಿದೆ ಎಂಬ ಇಂಗಿತವೂ ಇದೆ. ಈ ಬ್ಯಾಂಕ್‌ನಲ್ಲಿ ಹೆಚ್ಚಿನ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಆದರೆ ಪುರುಷರ ಠೇವಣಿಗಳನ್ನು ಹೊಂದಲೂ ಈ ಬ್ಯಾಂಕ್‌ಗೆ ಅವಕಾಶವಿರುತ್ತದೆ. ಬ್ಯಾಂಕ್‌ಗಳಾಗಲಿ, ಹಣಕಾಸು ಸಂಸ್ಥೆಗಳಾಗಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಈಗಲೂ ಪೂರ್ವಗ್ರಹ ದೃಷ್ಟಿಗಳನ್ನೇ ಹೊಂದಿವೆ ಎಂಬುದು ಕಟು ವಾಸ್ತವ. ಇಂತಹ ವಾತಾವರಣದಲ್ಲಿ ಹಣಕಾಸು ನೆರವು, ಸೌಲಭ್ಯಗಳನ್ನು ಪಡೆದುಕೊಳ್ಳಲು ಮಹಿಳೆಯರಿಗೆ ಮಹಿಳಾ ಬ್ಯಾಂಕ್ ವರದಾನವಾಗಲಿದೆ ಎಂಬಂತಹ ನಿರೀಕ್ಷೆ ಸಹಜ. ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರನ್ನು ಒಳಗೊಳ್ಳುವ ಮೂಲಕ ಮಹಿಳಾ ಸಬಲೀಕರಣದತ್ತ ಹೆಜ್ಜೆ ಇಡುವ ಕ್ರಮ ಇದು ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ ಮಹಿಳೆ - ಪುರುಷ ಎಂಬ ಭೇದಭಾವಗಳನ್ನು ಪ್ರಶ್ನಿಸುವ ಬದಲಿಗೆ ಮತ್ತದೇ ಭೇದಭಾವಗಳನ್ನು ಇಂತಹ ಉಪಕ್ರಮಗಳು ಹೆಚ್ಚುಮಾಡುವುದಿಲ್ಲವೆ? ಹೊಸ ಬ್ಯಾಂಕ್ ಆರಂಭಿಸುವ ಬದಲಿಗೆ ಈಗಿರುವ ಬ್ಯಾಂಕ್‌ಗಳೇ, ಮಹಿಳೆಯರಿಗೆ ಸಾಲಗಳನ್ನು ವಿತರಿಸುವುದನ್ನು ಹೆಚ್ಚು ಮಾಡಬಹುದಿತ್ತಲ್ಲವೆ ಎಂಬಂತಹ ಟೀಕೆಗಳೂ ಇವೆ. ಆದರೆ ಬ್ಯಾಂಕ್ ಒಳಗೆ ಕಾಲಿರಿಸುವುದಕ್ಕೇ ಅನೇಕ ಮಹಿಳೆಯರು ಹಿಂಜರಿಯುವ ವಾತಾವರಣವಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಈ ಹಿಂಜರಿಕೆ ದಟ್ಟವಾಗಿದೆ. ಮಹಿಳಾ ಬ್ಯಾಂಕ್ ಪರಿಕಲ್ಪನೆ ಈ ಹಿಂಜರಿಕೆಗಳನ್ನು ತಗ್ಗಿಸಲು ಸಹಾಯ ಮಾಡಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕುಟುಂಬದ ಪುರುಷರ ಸಹಾಯವಿಲ್ಲದೆಯೂ ಸ್ವತಂತ್ರವಾಗಿ ಬ್ಯಾಂಕ್ ವ್ಯವಹಾರಗಳನ್ನು ನಿರ್ವಹಿಸುವುದಕ್ಕೆ ಇಂತಹ ಬ್ಯಾಂಕ್ ಅವಕಾಶ ಮಾಡಿಕೊಡುತ್ತದೆ. ಈಗಲೂ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಮಹಿಳೆಯರ ಪಾತ್ರ ಗೌಣವಾಗಿದೆ. ಇಂತಹ ಸಾಮಾಜಿಕ ಮನಸ್ಥಿತಿಗಳ ಬದಲಾವಣೆ ಪ್ರಯತ್ನಕ್ಕೆ ಮಹಿಳಾ ಬ್ಯಾಂಕ್ ಪರಿಕಲ್ಪನೆ ಸಹಾಯಕವಾಗಬಹುದು. ಕಾಲಾನುಕ್ರಮದಲ್ಲಿ ಮಹಿಳೆಯರ ಆರ್ಥಿಕ ಸದೃಢತೆ ಸಾಧನೆಗೆ ಸಹಾಯಕವಾಗುವಂತಹದ್ದು ಇದು. ಈಗಾಗಲೇ ರಾಷ್ಟ್ರದಲ್ಲಿ ಸಹಕಾರಿ ರಂಗದಲ್ಲಿ ಅನೇಕ ಮಹಿಳಾ ಬ್ಯಾಂಕುಗಳು ಸಣ್ಣ ಪ್ರಮಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಯಶಸ್ಸನ್ನೂ ಸಾಧಿಸಿವೆ ಎಂಬುದನ್ನು ನೆನೆಯಬೇಕು. ಮಹಿಳಾ ಗ್ರಾಹಕರ ವ್ಯವಹಾರಗಳನ್ನೇ ಹೆಚ್ಚಾಗಿ ಒಳಗೊಳ್ಳಬೇಕಾಗಿರುವುದರಿಂದ ಆರಂಭದಲ್ಲಿ ಮಹಿಳಾ ಬ್ಯಾಂಕ್ ಕಾರ್ಯನಿರ್ವಹಣೆಯಲ್ಲಿ ಅಡೆತಡೆಗಳು ಎದುರಾಗಬಹುದು. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಅದರಲ್ಲೂ ಬಡ ಮಹಿಳೆಯರು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಹಿಳಾ ಸಬಲೀಕರಣದತ್ತ ದೃಢವಾದ ಹೆಜ್ಜೆಗಳನ್ನಿರಿಸಲು ನಿಷ್ಠೆಯಿಂದ ಕಾರ್ಯಪ್ರವೃತ್ತವಾಗಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.