ಮೋದಿ ಎನ್ನುವ ಬಿಸಿತುಪ್ಪ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ನಂತರ ದೆಹಲಿ ಕಡೆ ಮುಖಮಾಡಿ ಹೊರಟಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತನ್ನ ಭವಿಷ್ಯದ ದಾರಿಯನ್ನು ನಿರ್ಧರಿಸಿದ ಹಾಗಿದೆ. ಇತ್ತೀಚೆಗೆ ಅವರು ಪ್ರತಿಕ್ರಿಯಿಸುತ್ತಿರುವ ರಾಷ್ಟ್ರೀಯ ಮಹತ್ವದ ಸುದ್ದಿಗಳು ಮತ್ತು ಹೆಚ್ಚುತ್ತಿರುವ ದೆಹಲಿ ಭೇಟಿಗಳು ಕೂಡಾ ಇದನ್ನೇ ಸೂಚಿಸುತ್ತಿದೆ. ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅವರು ಪಡೆದುಕೊಂಡ ಸ್ವಾಗತ, ಪ್ರಶಂಸೆ ಮತ್ತು ಕಾಂಗ್ರೆಸ್ ವಿರುದ್ಧದ ಅವರ ಆಕ್ರಮಣಕಾರಿ ಮಾತುಗಳು ಕೂಡಾ ರಾಷ್ಟ್ರಮಟ್ಟದ ನಾಯಕನಾಗಿ ಬಿಂಬಿಸಿಕೊಳ್ಳುವ ಅವರ ಮಹತ್ವಾಕಾಂಕ್ಷೆಗೆ ಪೂರಕವಾಗಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರು ಮತ್ತು ಕಾರ್ಯಕರ್ತರು ಈಗಾಗಲೇ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡು ಬಿಟ್ಟಂತೆ ಕಾಣುತ್ತಿದೆ. ಆದರೆ ಈ ಬಗ್ಗೆ ಬಿಜೆಪಿಯ ನಾಯಕರಲ್ಲಿ ಸಹಮತ ಇದೆಯೇ ಎನ್ನುವುದು ಪ್ರಶ್ನೆ. ಅದೇ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಅಡ್ವಾಣಿ ಅವರು ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಪೃಥ್ವಿರಾಜ್ ಸಿಂಗ್ ಚೌಹಾಣ್ ಬಗ್ಗೆ ಆಡಿದ ಪ್ರಶಂಸೆಯ ಮಾತುಗಳು ಮತ್ತು ಸಭೆಯ ನಂತರ ಪಕ್ಷದ ಕೆಲವು ನಾಯಕರು ನೀಡುತ್ತಿರುವ ಪ್ರತಿಕ್ರಿಯೆ ಪಕ್ಷದ ಒಗ್ಗಟ್ಟಿನ ಬಗ್ಗೆ ಪ್ರಶ್ನೆಯನ್ನು ಕೇಳುವಂತೆ ಮಾಡಿದೆ. ಕೇಶುಭಾಯಿ ಪಟೇಲ್, ಸುರೇಶ್ ಮೆಹ್ತಾ, ಸಂಜಯ್ ಜೋಷಿ, ನಿತಿನ್ ಗಡ್ಕರಿ ಸೇರಿದಂತೆ ಪಕ್ಷದೊಳಗಿನ ತಮ್ಮ ವಿರೋಧಿಗಳನ್ನು ಮೋದಿಯವರು ಮೂಲೆಗುಂಪು ಮಾಡಿರುವುದನ್ನು ಬಿಜೆಪಿ ನಾಯಕರು ಗಮನಿಸದೆ ಇರಲಾರರು. ಇದರಜತೆಯಲ್ಲಿಯೇ ಎನ್‌ಡಿಎ ಅಂಗಪಕ್ಷಗಳಾದ ಸಂಯುಕ್ತ ಜನತಾದಳ ಮತ್ತು ಶಿವಸೇನೆ ಕೂಡಾ ಹೃತ್ಪೂರ್ವಕವಾಗಿ ಮೋದಿ ಬೆಂಬಲಕ್ಕೆ ನಿಂತಿಲ್ಲ. ಈ ಬಿಕ್ಕಟ್ಟನ್ನು ಬಗೆಹರಿಸುವ ಸವಾಲು ಬಿಜೆಪಿ ನಾಯಕತ್ವದ ಮುಂದಿದೆ. ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕೇಳಿದವರಿಗೆ ಗುಜರಾತ್ ಚುನಾವಣೆಯ ಪ್ರಚಾರ ಶೈಲಿ ನೆನಪಾಗದೆ ಇರದು. ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಅವರು ಬಳಸಿದ ಭಾಷೆ ಮತ್ತು ನುಡಿಗಟ್ಟುಗಳು ರಾಷ್ಟ್ರನಾಯಕನಾಗಲು ಹೊರಟಿರುವ ಅವರ ಮಹತ್ವಾಕಾಂಕ್ಷೆಗೆ ತಕ್ಕ ಹಾಗೆ ಇರಲಿಲ್ಲ. ಈ ಭಾಷಣವನ್ನು ಕೇಳಿದರೆ ಅಭಿವೃದ್ಧಿಯ ಹರಿಕಾರನಂತೆ ತಮ್ಮನ್ನು ಬಿಂಬಿಸುತ್ತಿರುವ ನರೇಂದ್ರ ಮೋದಿಯವರು ಬದಲಾಗಿಲ್ಲ ಎನ್ನುವ ಅಭಿಪ್ರಾಯವನ್ನೂ ನೀಡುತ್ತದೆ. ಈ ರೀತಿ ವೈಯಕ್ತಿಕ ಮಟ್ಟದ ನಿಂದೆ, ಅಪಹಾಸ್ಯಗಳು ಮತ್ತು ಸೇಡಿನ ರಾಜಕಾರಣವನ್ನು ಭಾರತದ ಮತದಾರರು ಎಂದೂ ಇಷ್ಟಪಟ್ಟಿಲ್ಲ ಎನ್ನುವುದನ್ನು ಮೋದಿಯಂತಹವರು ಗಮನಿಸಬೇಕು. 2004ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾಗಾಂಧಿ ಬಗ್ಗೆ ಸುಷ್ಮಾಸ್ವರಾಜ್ ಮಾಡಿದ ವೈಯಕ್ತಿಕ ಟೀಕೆಯ ಫಲ ಏನಾಯಿತು ಎನ್ನುವುದನ್ನೂ ಅವರು ಮರೆಯಬಾರದು. ಆರೋಪ, ಪ್ರತ್ಯಾರೋಪ, ಟೀಕೆ, ಟಿಪ್ಪಣಿಗಳು, ರಾಜಕೀಯ ಚರ್ಚೆ, ಸಂವಾದದ ಭಾಗವೇ ಆಗಿದೆ. ಇದರಿಂದ ಹುಟ್ಟಿಕೊಳ್ಳುವ ಚರ್ಚೆ ವಿಷಯ, ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಮತದಾರರಿಗೆ ನೆರವಾಗಬೇಕು. ಆದರೆ ಇದು ಶಿಷ್ಟಾಚಾರದ ಎಲ್ಲೆ ಮೀರದಂತೆ ರಾಜಕೀಯ ನಾಯಕರು ಎಚ್ಚರ ವಹಿಸಬೇಕು. ತಮ್ಮದು ಭಿನ್ನ ಪಕ್ಷ ಎಂದು ಹೇಳಿಕೊಳ್ಳುವವರು ಮೊದಲು ಇದನ್ನು ಪಾಲಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.