ನಿತೀಶ್ ಸವಾಲು ಬಿಹಾರದ ಮುಖ್ಯಮಂತ್ರಿಯಾದ ಎಂಟು ವರ್ಷಗಳ ಅವಧಿಯಲ್ಲಿ ನಿತೀಶ್‌ಕುಮಾರ್ ತಮ್ಮ ರಾಜ್ಯದಿಂದ ಹೊರಗೆ ಕಾಲಿಟ್ಟಿದ್ದೇ ಕಡಿಮೆ. ಹಾಗೆಂದು ಅವರು ಪ್ರಾರಂಭದಲ್ಲಿಯೇ ಘೋಷಿಸಿಕೊಂಡಿದ್ದರು. ಈ ಕಾರಣದಿಂದಾಗಿಯೇ ಅವರು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆಸಿದ `ಅಧಿಕಾರ್ ರ‍್ಯಾಲಿ' ಕುತೂಹಲ ಕೆರಳಿಸಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನದ ಒತ್ತಾಯ ಒಂದು ನೆಪ ಮಾತ್ರ. ಅವರ ಕಣ್ಣು ಮುಂದಿನ ಲೋಕಸಭಾ ಚುನಾವಣೆಯ ಮೇಲೆ ನೆಟ್ಟಿರುವುದು ಸ್ಪಷ್ಟ. ರ‍್ಯಾಲಿಯಲ್ಲಿ ಅವರು ಆಡಿದ ಮಾತುಗಳು ಆಡಳಿತಾರೂಢ ಯುಪಿಎಗಿಂತ ಹೆಚ್ಚಾಗಿ ತಮ್ಮ ಪಕ್ಷವನ್ನೂ ಒಳಗೊಂಡಿರುವ ಎನ್‌ಡಿಎಯನ್ನು ಉದ್ದೇಶಿಸಿದಂತಿತ್ತು. ಮುಂದಿನ ಲೋಕಸಭಾ ಚುನಾವಣೆಯ ನಂತರ ಸರ್ಕಾರ ರಚನೆಯಲ್ಲಿ ತಮ್ಮ ಪಾತ್ರ ನಿರ್ಣಾಯಕ ಎಂದು ಹೇಳುವ ಮೂಲಕ ಎನ್‌ಡಿಎ ತಮಗೆ ಅನಿವಾರ್ಯ ಅಲ್ಲ ಎನ್ನುವ ಸಂದೇಶವನ್ನು ಅವರು ನೀಡಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಬಿಜೆಪಿಯಲ್ಲಿ ನಡೆಯುತ್ತಿರುವ ಪ್ರಯತ್ನಕ್ಕೆ ಎಚ್ಚರಿಕೆ ನೀಡುವಂತಿತ್ತು ರ‍್ಯಾಲಿ. ಸ್ಪಷ್ಟ ಶಬ್ದಗಳಲ್ಲಿ ಹೇಳದಿದ್ದರೂ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದನ್ನು ನಿತೀಶ್ ವಿರೋಧಿಸುತ್ತಲೇ ಬಂದಿದ್ದಾರೆ. ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟ ಬಹಳ ದಿನಗಳಿಂದ ನಡೆಯುತ್ತಲೇ ಇದೆ. ಮೋದಿ ಅವರ ದೆಹಲಿ ಭೇಟಿಯ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಈ ಬಾರಿ ತಾನು ನೇರವಾಗಿ ಕಣಕ್ಕಿಳಿಯಲು ನಿತೀಶ್ ನಿರ್ಧರಿಸಿದಂತಿದೆ. ತನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲು ನರೇಂದ್ರ ಮೋದಿ ಅವರು ಬಳಸುತ್ತಿರುವ ಗುಜರಾತ್ ಅಭಿವೃದ್ಧಿಯ ಮಾದರಿ ಎದುರು ಬಿಹಾರ ಅಭಿವೃದ್ಧಿಯ ಮಾದರಿಯನ್ನು ನಿತೀಶ್ ತಂದು ನಿಲ್ಲಿಸಿದ್ದಾರೆ. `ನಮ್ಮದು ಎಲ್ಲರನ್ನೂ ಒಳಗೊಂಡಿರುವಂತಹ ಅಭಿವೃದ್ಧಿ ಮಾದರಿ' ಎಂದು ಹೇಳಿರುವ ಉದ್ದೇಶ ಕೂಡಾ ಮೋದಿ ಅವರ ಮೇಲಿನ ಕೋಮುವಾದಿ ರಾಜಕಾರಣದ ಆರೋಪವನ್ನು ನೆನಪುಮಾಡಿಕೊಡುವುದೇ ಆಗಿದೆ. `ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸಬೇಕಾಗಿರುವುದು ಬಿಜೆಪಿಯಲ್ಲ, ಎನ್‌ಡಿಎ' ಎಂದು ನಿತೀಶ್ ಹೇಳುತ್ತಲೇ ಬಂದಿದ್ದಾರೆ. ಈ ಅಭಿಪ್ರಾಯವನ್ನು ಒಪ್ಪುವವರು ಬಿಜೆಪಿ ಒಳಗೆ ಕೂಡಾ ಇದ್ದಾರೆ. ಈ ಗುಂಪಿನಲ್ಲಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಕೆಲವು ದೆಹಲಿ ಕೇಂದ್ರಿತ ನಾಯಕರಿದ್ದಾರೆ. ಸಾಮಾನ್ಯವಾಗಿ ಸೌಮ್ಯ ಸ್ವಭಾವದ ನಿತೀಶ್‌ಕುಮಾರ್ ಇದ್ದಕ್ಕಿದ್ದಂತೆ ಆಕ್ರಮಣಕಾರಿ ನಿಲುವನ್ನು ತಾಳಿರುವುದು ಆಕಸ್ಮಿಕ ಬೆಳವಣಿಗೆ ಇರಲಾರದು. ಆದರೆ ನರೇಂದ್ರ ಮೋದಿ ಬಗೆಗಿನ ವಿರೋಧವನ್ನು ಅನಿವಾರ್ಯವಾದರೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ದಿಟ್ಟತನವನ್ನು ನಿತೀಶ್ ಕುಮಾರ್ ಪ್ರದರ್ಶಿಸಬಹುದೇ ಎನ್ನುವುದಷ್ಟೇ ಈಗಿನ ಪ್ರಶ್ನೆ. ನಿತೀಶ್ ಕುಮಾರ್ ಅವರ ಮೋದಿ ವಿರೋಧಕ್ಕೆ ಸೈದ್ಧಾಂತಿಕ ಕಾರಣಕ್ಕಿಂತ ಹೆಚ್ಚಾಗಿ ಮುಸ್ಲಿಂ ಮತಗಳನ್ನು ಕಳೆದುಕೊಳ್ಳಬಹುದೆಂಬ ಭೀತಿಯೂ ಕಾರಣ ಎನ್ನುವುದನ್ನು ನಿರಾಕರಿಸಲಾಗದು. ಗುಜರಾತ್ ಕೋಮುದಂಗೆ ನಡೆದಾಗ ರಾಮ್‌ವಿಲಾಸ್ ಪಾಸ್ವಾನ್ ಅವರಂತಹವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಾಗ ನಿತೀಶ್ ಕುಮಾರ್ ಮಾತ್ರ ಸಂಪುಟದಲ್ಲಿ ಮುಂದುವರಿದಿದ್ದರು. ಇದರಿಂದಾಗಿಯೇ ನಿತೀಶ್ ಒಡ್ಡಿರುವ ಸವಾಲನ್ನು ಅದರ ಮುಖಬೆಲೆಯಲ್ಲಿಯೇ ಸ್ವೀಕರಿಸುವುದು ಕಷ್ಟ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.