ನಷ್ಟಕ್ಕೆ ಕಾರಣವೇ ಇಲ್ಲ ಖಾಸಗಿ ಬಸ್‌ಗಳ ಅಕ್ರಮ ಸಂಚಾರದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವಾರ್ಷಿಕ ನೂರು ಕೋಟಿ ರೂಪಾಯಿ ಆದಾಯ ಕಡಿಮೆಯಾಗುತ್ತಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಇದಕ್ಕೆ ಖಾಸಗಿ ಬಸ್‌ಗಳ ಅಕ್ರಮ ಸಂಚಾರವೇ ಕಾರಣ ಎಂದೂ ಅವರು ಬೊಟ್ಟು ಮಾಡಿ ತೋರಿಸಿರುವುದರಲ್ಲಿ ಹೊಸತೇನಿಲ್ಲ. ಖಾಸಗಿ ಬಸ್ಸುಗಳು ನಿಗದಿತ ಮಾರ್ಗ ಮತ್ತು ವೇಳಾಪಟ್ಟಿಯನ್ನು ಬದಿಗೆ ಸರಿಸಿ, ಸರ್ಕಾರಿ ಬಸ್‌ಗಳು ಸಂಚರಿಸುವ ವೇಳೆಯಲ್ಲೇ ಅಕ್ರಮವಾಗಿ ಸಂಚರಿಸುವುದು ಒಪ್ಪಂದದ ಪರವಾನಗಿ ಪಡೆದು ಅಂತಹ ಪರವಾನಗಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಾರಿಗೆ ಸಂಸ್ಥೆಗೆ ಸವಾಲಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಈ ರೀತಿಯ ಅಕ್ರಮ ಸಂಚಾರ, ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳ ಕಣ್ಣಮುಂದೆಯೇ ನಡೆಯುತ್ತಿದ್ದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ನಿಗಮ ವ್ಯವಸ್ಥಾಪಕರೇ ದೂರಿದ್ದಾರೆ. ಕೆಎಸ್‌ಆರ್‌ಟಿಸಿ ಗೆ ನಷ್ಟ ಸಂಭವಿಸಿದೆ ಎನ್ನುವ ಸಂಗತಿಯಲ್ಲಿ ಹೊಸತೇನಿಲ್ಲ. ನಷ್ಟದ ಸಂಸ್ಥೆ ಎಂದೇ ಒಂದು ಕಾಲದಲ್ಲಿ ಇದನ್ನು ಕರೆಯಲಾಗುತ್ತಿತ್ತು. ಸುಧಾರಣೆಯೇ ಸಾಧ್ಯವಿಲ್ಲ ಎನ್ನುವ ಈ ನಿಗಮ ಐದು ವರ್ಷಗಳ ಹಿಂದೆ ಲಾಭ ಮಾಡಲಾರಂಭಿಸಿತು. ಆದರೆ ಆದಾಯ ಸೋರಿಕೆ ಮುಂದುವರಿದಿದೆ. ಕಳೆದ ವರ್ಷವಷ್ಟೇ 2400 ಕೋಟಿ ರೂಪಾಯಿ ವಹಿವಾಟು ನಡೆಸಿರುವ ಕೆಎಸ್‌ಆರ್‌ಟಿಸಿ ಗೆ ಈ ಪರಿಸ್ಥಿತಿ ಏಕೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಖಾಸಗಿ ಬಸ್ಸುಗಳೇ ಆದಾಯ ಖೋತಾಗೆ ಕಾರಣ ಎಂದು ದೂರುವುದೂ ಇದೇ ಮೊದಲೇನಲ್ಲ. ಗ್ರಾಹಕರಿಗೆ ಉತ್ತಮ ಸೌಲಭ್ಯ, ಸೇವೆ, ನೀಡುವಲ್ಲಿ ಪೈಪೋಟಿ ಇರುವ ಈ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಇದೆ. ಬೆಲೆಯಿಂದ ಆರಂಭಿಸಿ, ತ್ವರಿತ ಪ್ರಯಾಣದವರೆಗೆ ಸೌಲಭ್ಯಗಳ ಆಮಿಷವನ್ನು ನೀಡುವವರ ಕಡೆಗೆ ಜನ ವಾಲುತ್ತಾರೆ. ಖಾಸಗಿ ಬಸ್ಸುಗಳು ರಾಜಾರೋಷವಾಗಿ ಹೆದ್ದಾರಿಯಲ್ಲೇ ಸಂಚರಿಸುತ್ತವೆ ಎಂದರೆ ಅದಕ್ಕೆ ಕಾರಣವೂ ಸ್ಪಷ್ಟವಾಗಿರುತ್ತದೆ. ಅಧಿಕಾರಿಗಳು ಹಾಗೂ ಖಾಸಗಿ ಬಸ್ ಮಾಲೀಕರ ನಡುವೆ ಅನೈತಿಕ, ಅಲಿಖಿತ ಒಪ್ಪಂದವೇ ಇಂತಹ ಅಕ್ರಮಕ್ಕೆ ರಹದಾರಿ. ಇಂತಹ ಅಕ್ರಮಗಳನ್ನು ತಡೆಯುವುದು ಸಾಧ್ಯವಿಲ್ಲವೇ? ನಿಯಮ ಉಲ್ಲಂಘಿಸುವ ಖಾಸಗಿ ಬಸ್‌ಗಳ ವಿವರ ಕಣ್ಣೆದುರೇ ಇರುತ್ತದೆ. ನಿಖರವಾಗಿ ಅಂತಹ ಖಾಸಗಿ ಬಸ್‌ಗಳ ಮೇಲೆ ಕ್ರಮ ಜರುಗಿಸುವ ಅಧಿಕಾರ ಸಾರಿಗೆ ಇಲಾಖೆಗೆ ಇದೆ. ಆದರೆ ಇದುವರೆಗೆ ಅಂತಹ ದೂರೂ ದಾಖಲಾಗಿಲ್ಲ. ಕ್ರಮವನ್ನೂ ಜರುಗಿಸಿಲ್ಲ ಎಂದರೆ ಅಕ್ರಮದಲ್ಲಿ ಎರಡೂ ಕಡೆಯವರು ಶಾಮೀಲಾಗಿದ್ದಾರೆ ಎಂದೇ ಅರ್ಥೈಸಬೇಕಾಗುತ್ತದೆ. ಐಷಾರಾಮಿ ಬಸ್‌ಗಳನ್ನು ಖರೀದಿಸಿ, ನಗರ ಪ್ರದೇಶಕ್ಕೆ ಮಾತ್ರ ಓಡಿಸಿದರೆ ಸಾಲದು. ಗ್ರಾಮೀಣ ಪ್ರದೇಶಕ್ಕೂ ಹೆಚ್ಚಿನ ಬಸ್ ಸೌಲಭ್ಯಗಳನ್ನು ಓಡಿಸುವತ್ತ ಗಮನ ಹರಿಸಬೇಕು. ಖಾಸಗಿ ಬಸ್ಸುಗಳಲ್ಲಿ ಸಿಗುವುದಕ್ಕಿಂತ ಉತ್ತಮ ಸೌಲಭ್ಯಗಳು ದೊರಕಿದರೆ ಜನ ನಿಗಮದ ಬಸ್ಸುಗಳಲ್ಲೇ ಸಂಚರಿಸುತ್ತಾರೆ ಎನ್ನುವ ಸತ್ಯ ಅರಿತರೆ ಸಾಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.