ಮೊದಲು ತನಿಖೆ ನಡೆಯಲಿ ಭ್ರಷ್ಟಾಚಾರದ ಆರೋಪಗಳಿಗೀಡಾದ ರಾಜಕಾರಣಿಗಳು ಒಬ್ಬೊಬ್ಬರಾಗಿ ಮಾನಸಿಕ ಸಮತೋಲನ ಕಳೆದುಕೊಂಡವರ ರೀತಿಯಲ್ಲಿ ಮಾತನಾಡತೊಡಗಿದ್ದಾರೆ. ತಮ್ಮ ಪತ್ನಿಯ ಟ್ರಸ್ಟ್‌ಗೆ ಸಂಬಂಧಿಸಿದಂತೆ ಅವ್ಯವಹಾರದ ಆರೋಪ ಮಾಡಿದ್ದ ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ `ಲೇಖನಿ ಮೂಲಕ ಮಾತ್ರ ಅಲ್ಲ ರಕ್ತದ ಮೂಲಕವೂ ಕೆಲಸ ಮಾಡಲು ಗೊತ್ತು~ ಎಂದು ನೇರವಾಗಿ ಬೆದರಿಕೆಯೊಡ್ಡಿದ್ದರು. ಅಷ್ಟು ಮಾತ್ರ ಅಲ್ಲ ತಮ್ಮ ವಿರುದ್ಧ ಆರೋಪಗಳನ್ನು ಪ್ರಸಾರ ಮಾಡಿದ್ದ ಸುದ್ದಿವಾಹಿನಿಯ ವಿರುದ್ಧವೂ ತನಿಖೆ ನಡೆಯಬೇಕೆಂದು ಅವರು ಒತ್ತಾಯಿಸಿದ್ದರು. ಇದರ ನಂತರ ಉಕ್ಕು ಕಂಪೆನಿಯಿಂದ ಲಂಚ ಸ್ವೀಕರಿಸಿರುವ ಆರೋಪ ಎದುರಿಸುತ್ತಿರುವ ಕೇಂದ್ರದ ಮಾಜಿ ಸಚಿವ ವೀರಭದ್ರಸಿಂಗ್ `ಟಿವಿ ಕ್ಯಾಮೆರಾವನ್ನೇ ಒಡೆದು ಹಾಕುವ~ ಬೆದರಿಕೆಯೊಡ್ಡಿ ನಂತರ ಕ್ಷಮೆ ಯಾಚಿಸಿದ್ದಾರೆ. ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸರ್ಕಾರದ ವಿರುದ್ಧ ಬರೆಯುತ್ತಿರುವ ಪತ್ರಿಕೆಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ನಿರಂತರವಾಗಿ ನಡೆಸತೊಡಗಿದ್ದಾರೆ. ಸಾಮಾನ್ಯವಾಗಿ ಆರೋಪಗಳು ಎದುರಾದಾಗ ತಾಳ್ಮೆ ಕಳೆದುಕೊಳ್ಳುವುದು ತಪ್ಪು ಮಾಡಿದವರು ಮಾತ್ರ ಎನ್ನುವ ಅಭಿಪ್ರಾಯ ಇದೆ. ಇದು ನಿಯಮ ಅಲ್ಲದೆ ಇದ್ದರೂ ಭ್ರಷ್ಟಾಚಾರದ ಆರೋಪಕ್ಕೀಡಾದವರ ಪ್ರತಿಕ್ರಿಯೆಗಳನ್ನು ಗಮನಿಸುತ್ತಾ ಬಂದರೆ ಈ ಅಭಿಪ್ರಾಯವನ್ನು ನಿರಾಕರಿಸಲಾಗುವುದಿಲ್ಲ. ಇವರಲ್ಲಿ ಬಹಳಷ್ಟು ಮಂದಿ ಪತ್ರಕರ್ತರನ್ನೇ ತಮ್ಮ ದಾಳಿಗೆ ಆರಿಸಿಕೊಂಡಿದ್ದರಲ್ಲಿಯೂ ಆಶ್ಚರ್ಯವೇನಿಲ್ಲ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ರಾಮಕೃಷ್ಣ ಹೆಗಡೆಯವರಿಂದ ಹಿಡಿದು ಎನ್‌ಡಿಎ ನಾಯಕರವರೆಗೆ ಅಧಿಕಾರದಲ್ಲಿದ್ದಾಗ ಆರೋಪ ಎದುರಿಸಿದವರೆಲ್ಲ ಇದನ್ನೇ ಮಾಡಿದ್ದು. ಯುಪಿಎ ಸರ್ಕಾರ ಈ ರೀತಿಯ `ಬೀದಿಜಗಳ~ಕ್ಕೆ ಅವಕಾಶ ಮಾಡಿಕೊಟ್ಟು ಮೌನವಾಗಿರುವುದು ಆರೋಪಿಗಳನ್ನು ರಕ್ಷಿಸುವ ಹುನ್ನಾರದಂತೆ ಕಾಣಿಸುತ್ತಿದೆ. ಇದು ಎರಡು ಪಕ್ಷಗಳು ಇಲ್ಲವೇ ವ್ಯಕ್ತಿಗಳ ನಡುವಿನ ವೈಯಕ್ತಿಕ ಜಗಳ ಅಲ್ಲ. ಇದರಲ್ಲಿ ಸಾರ್ವಜನಿಕ ಆಸ್ತಿ ಮತ್ತು ತೆರಿಗೆ ಹಣ ಒಳಗೊಂಡಿದೆ. ವಾದ್ರಾ ಇರಲಿ, ಖುರ್ಷಿದ್, ಗಡ್ಕರಿ, ವೀರಭದ್ರಸಿಂಗ್ ಯಾರೇ ಇರಲಿ- ಎಲ್ಲರ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಇಂತಹ ಆರೋಪಗಳನ್ನು ಮಾಡುವವರು ಕೂಡಾ ಮಾಧ್ಯಮದ ಮೂಲಕವೇ ವಿಚಾರಣೆ ನಡೆಸುವುದನ್ನು ಬಿಟ್ಟು ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬೇಕು. ಅರವಿಂದ್ ಕೇಜ್ರಿವಾಲ್ ಅವರಂತಹವರ ಸಮಸ್ಯೆಯೇನೆಂದರೆ ಅವರಿಗೆ ಸಂಸತ್, ಸರ್ಕಾರ, ನ್ಯಾಯಾಲಯ ಯಾವುದರ ಮೇಲೆಯೂ ನಂಬಿಕೆ ಇಲ್ಲ. ಈ ಕಾರಣದಿಂದಾಗಿ ಭ್ರಷ್ಟಾಚಾರದ ಹಗರಣಗಳು ಮಾಧ್ಯಮಗಳಲ್ಲಷ್ಟೇ ಚರ್ಚೆ ಯಾಗುತ್ತಿವೆ. ಆರೋಪಕ್ಕೀಡಾದವರು ಕೂಡಾ ಮಾಧ್ಯಮಗಳ ಮೇಲೇರಿ ಹೋಗಲು ಇದು ಕಾರಣ. ತಮ್ಮ ವಿರುದ್ಧದ ಆರೋಪಗಳ ತನಿಖೆಗೆ ಸಿದ್ಧ ಇದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ. ಅವರೊಬ್ಬರ ವಿರುದ್ಧ ಮಾತ್ರ ಅಲ್ಲ ವಾದ್ರಾ, ಖುರ್ಷಿದ್, ವೀರಭದ್ರಸಿಂಗ್ ಸೇರಿದಂತೆ ಎಲ್ಲರ ವಿರುದ್ಧದ ಆರೋಪಗಳ ಬಗ್ಗೆಯೂ ತನಿಖೆ ನಡೆಸುವ ರಾಜಕೀಯ ಇಚ್ಛಾಶಕ್ತಿಯನ್ನು ಯುಪಿಎ ಸರ್ಕಾರ ತೋರಬೇಕು. ಇದಕ್ಕಾಗಿ ವಿಶೇಷ ತನಿಖಾ ತಂಡ ರಚಿಸುವುದು ಅನಿವಾರ್ಯವಾದರೆ ಅದನ್ನೂ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.