ತಾಲ್ಲೂಕುಗಳನ್ನು ಪುನರ್‌ರಚಿಸಿ ಐತಿಹಾಸಿಕ ಪ್ರಾಮುಖ್ಯ ಹೊಂದಿದ ರಾಣಿ ಚನ್ನಮ್ಮನ ಊರು ಕಿತ್ತೂರನ್ನು ರಾಜ್ಯದ 177ನೇ ತಾಲ್ಲೂಕಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಣೆ ಮಾಡಿದ್ದಾರೆ. ಮುಂದಿನ ವಾರ ಈ ಕುರಿತಂತೆ ಅಧಿಕೃತ ಆದೇಶ ಜಾರಿಯಾಗಲಿದೆ. ಅಂತೂ ಕಿತ್ತೂರನ್ನು ತಾಲ್ಲೂಕು ಮಾಡಬೇಕು ಎನ್ನುವ ಬಗ್ಗೆ ದಶಕಗಳಿಂದ ಇದ್ದ ಬೇಡಿಕೆ ಕಡೆಗೂ ಈಡೇರಿದಂತಾಗಿದೆ. ಕರ್ನಾಟಕ ರಾಜ್ಯ ರಚನೆಯಾದಾಗಲಿಂದಲೂ ತಾಲ್ಲೂಕು ಪುನರ್‌ವಿಂಗಡಣೆ ವ್ಯಾಪಕವಾಗಿ ಆಗಿಯೇ ಇಲ್ಲ ಎನ್ನಬೇಕು. 1996ರಿಂದೀಚೆಗೆ ಕೆಲವು ಜಿಲ್ಲೆಗಳ ಪುನರ್ವಿಂಗಡಣೆ ಆಗಿದೆ. ತಾಲ್ಲೂಕುಗಳ ಪುನರ್‌ವಿಂಗಡಣೆ ವಿಚಾರ ರಾಜಕೀಯವಾಗಿ ಸೂಕ್ಷ್ಮವಾಗಿಯೇ ಉಳಿದುಕೊಂಡು ಬಂದಿದೆ. ತಾಲ್ಲೂಕುಗಳ ಪುನರ್‌ವಿಂಗಡಣೆ ಕುರಿತಂತೆ ಈವರೆಗೆ ವಾಸುದೇವರಾವ್ ಆಯೋಗ (1973), ಟಿ ಎಂ ಹುಂಡೇಕರ್ ಸಮಿತಿ (1984) ಹಾಗೂ ಪಿ ಸಿ ಗದ್ದಿಗೌಡರ್ ಸಮಿತಿ (1986) ವರದಿಗಳನ್ನು ನೀಡಿವೆ. ನಂತರ, ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾಲ್ಲೂಕುಗಳ ಮತ್ತೊಂದು ಪುನರ್‌ವಿಂಗಡಣಾ ಸಮಿತಿ ರಚನೆಯಾಯಿತು. ಚಿರಂಜೀವಿಸಿಂಗ್ ಹಾಗೂ ಎಚ್. ಕೆ. ಶಿವಾನಂದ ಅವರು ಸದಸ್ಯರಾಗಿದ್ದ ಈ ಸಮಿತಿಯ ನೇತೃತ್ವ ವಹಿಸಿದ್ದವರು ನಿವೃತ್ತ ಐಎಎಸ್ ಅಧಿಕಾರಿ ಎಂ. ಬಿ. ಪ್ರಕಾಶ್. 136 ಹೊಸ ತಾಲ್ಲೂಕುಗಳ ರಚನೆಯ ಬೇಡಿಕೆ ಸಮಿತಿ ಮುಂದಿತ್ತು. ಕಡೆಗೆ 43 ಹೊಸ ತಾಲ್ಲೂಕುಗಳ ರಚನೆಗೆ 2009ರಲ್ಲಿ ಈ ಸಮಿತಿ ಶಿಫಾರಸು ಮಾಡಿದೆ. ರಾಜ್ಯದಾದ್ಯಂತ ಪ್ರವಾಸ ಮಾಡಿ, ಅಧ್ಯಯನ ನಡೆಸಿ ಮಾಡಿರುವ ಶಿಫಾರಸು ಇದು. ಈ ಶಿಫಾರಸಿನ ಅನುಷ್ಠಾನ ಕುರಿತಂತೆ ನಿರೀಕ್ಷೆಗಳು ಈಗ ಮತ್ತೆ ಗರಿಗೆದರಿವೆ. ತಾಲ್ಲೂಕುಗಳು ದೊಡ್ಡದಾದಷ್ಟೂ ಸಮಸ್ಯೆಗಳು ಹೆಚ್ಚಾಗುತ್ತವೆ; ತಾಲ್ಲೂಕುಗಳು ಚಿಕ್ಕದಾದಷ್ಟೂ ಆಡಳಿತಯಂತ್ರ ಜನರನ್ನು ವೇಗವಾಗಿ ತಲುಪುವುದು ಸಾಧ್ಯ ಎಂಬುದು ಸಿದ್ಧಾಂತ. ಹೆಚ್ಚಿದ ಜನಸಂಖ್ಯೆ, ದೊಡ್ಡದಾದ ಭೂಪ್ರದೇಶ ಆಡಳಿತದ ಮೇಲಿನ ಒತ್ತಡವನ್ನು ಹೆಚ್ಚಿಸುವುದರಿಂದ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕುಂಠಿತವಾಗುತ್ತದೆ. ಜನರು ಮತ್ತು ಸರ್ಕಾರದ ಮಧ್ಯದ ಸಂಪರ್ಕ ನಿರಂತರವಾಗಿರಬೇಕು ಎಂಬುದು ಪ್ರಜಾತಂತ್ರದ ಆಶಯ. ಪ್ರತಿ ತಾಲ್ಲೂಕು ಕೇಂದ್ರವೂ ಏನಿಲ್ಲವೆಂದರೂ ಕನಿಷ್ಠ 15 ಸರ್ಕಾರಿ ಕಚೇರಿಗಳನ್ನು ಹೊಂದಿರಬೇಕಾಗುತ್ತದೆ. ರಾಜ್ಯದಲ್ಲಿ ಈಗಿರುವಂತೆ ತಾಲ್ಲೂಕುಗಳ ಸರಾಸರಿ ವಿಸ್ತೀರ್ಣ 1090 ಚದರ ಕಿ.ಮೀ. ಹಾಗೂ ತಾಲ್ಲೂಕುಗಳಲ್ಲಿನ ಜನಸಂಖ್ಯೆ ಪ್ರಮಾಣ ಸರಾಸರಿ 3 ಲಕ್ಷ. ಆದರೆ ರಾಷ್ಟ್ರೀಯ ಸರಾಸರಿ ಪ್ರಮಾಣ ತೀರಾ ಕಡಿಮೆ ಇದ್ದು ತಾಲ್ಲೂಕುಗಳ ಸರಾಸರಿ ವಿಸ್ತೀರ್ಣ 603 ಚದರ ಕಿ.ಮೀ. ಹಾಗೂ ಸರಾಸರಿ ಜನಸಂಖ್ಯೆ 1.9 ಲಕ್ಷ. ರಾಜ್ಯದಲ್ಲಿ ಈಗಿರುವುದು 176 ತಾಲ್ಲೂಕುಗಳು. 43 ಹೊಸ ತಾಲ್ಲೂಕುಗಳು ರಚನೆಯಾದಲ್ಲಿ ತಾಲ್ಲೂಕುಗಳ ಸಂಖ್ಯೆ 219ಕ್ಕೆ ಏರುತ್ತದೆ. ಇದರಿಂದ ಬೊಕ್ಕಸಕ್ಕೆ 756 ಕೋಟಿ ರೂಪಾಯಿ ಹೊರೆ ಬೀಳುತ್ತದೆ. ಈ ಹೊರೆ ಹಗುರವಾಗಿಸಿಕೊಳ್ಳಲು ಹಂತಹಂತವಾಗಿ ಹೊಸ ತಾಲ್ಲೂಕುಗಳ ರಚನೆಗೆ ಸರ್ಕಾರ ಮುಂದಾಗಬೇಕು. ಇದು ಪ್ರತ್ಯೇಕ ರಾಜ್ಯರಚನೆಯ ಕೂಗಿಗೆ ಉತ್ತರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.