ಚುನಾವಣಾ ಉದ್ದೇಶದ ಪುನರ್‌ರಚನೆ ಆಡಳಿತದ ಸುಧಾರಣೆಯ ಪ್ರಯತ್ನವಾಗಿ ಸಚಿವ ಸಂಪುಟ ಪುನರ್‌ರಚನೆ ಮಾಡಬೇಕೇ ಹೊರತು ಅದಕ್ಕೆ ಚುನಾವಣಾ ಉದ್ದೇಶ ಇರಬಾರದು. ಚುನಾವಣೆಯ ಉದ್ದೇಶ ಇದ್ದರೆ ಅದಕ್ಕಾಗಿ ಪಕ್ಷವನ್ನು ಪುನರ್‌ರಚಿಸಲು ಅದರ ನಾಯಕರು ಸ್ವತಂತ್ರರಿರುತ್ತಾರೆ. ಭಾನುವಾರ ನಡೆದ ಕೇಂದ್ರ ಸಚಿವ ಸಂಪುಟದ ಪುನರ್‌ರಚನೆಯಲ್ಲಿ ರಾಜಕೀಯದ ಈ ನೀತಿ ಸಂಹಿತೆಯನ್ನು ಪಾಲಿಸಿದಂತೆ ಕಾಣುತ್ತಿಲ್ಲ. ಎದುರಾಗಲಿರುವ ಚುನಾವಣೆಗಳು ಹಾಗೂ ಪಕ್ಷ ದುರ್ಬಲವಾಗಿರುವ ರಾಜ್ಯಗಳಲ್ಲಿ ಅದರ ಬಲವರ್ಧನೆಯ ಉದ್ದೇಶದಿಂದಲೇ ಪುನರ್‌ರಚನೆ ಮಾಡಿದಂತಿದೆ. ಮುಂದಿನ ಒಂದು ವರ್ಷದಲ್ಲಿ ಚುನಾವಣೆ ಎದುರಿಸಲಿರುವ ಆಂಧ್ರಪ್ರದೇಶ, ಕರ್ನಾಟಕ, ದೆಹಲಿ, ರಾಜಸ್ತಾನಗಳಿಗೆ ನೀಡಲಾಗಿರುವ ಮಹತ್ವದಿಂದ ಇದು ಸಾಬೀತಾಗಿದೆ. ಜಗನ್‌ರೆಡ್ಡಿ ಬಂಡಾಯ ಮತ್ತು ಪ್ರತ್ಯೇಕ ತೆಲಂಗಾಣ ಹೋರಾಟದಿಂದ ನಲುಗಿಹೋಗಿರುವ ಆಂಧ್ರಪ್ರದೇಶದ ಕಾಂಗ್ರೆಸಿಗೆ ಬಲ ನೀಡಲು ಐವರು ಹೊಸಬರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ, ಜತೆಗೆ ಚಿತ್ರನಟ ಚಿರಂಜೀವಿ ಅವರಿಗೆ ಸ್ವತಂತ್ರನಿರ್ವಹಣೆಯ ಖಾತೆ ನೀಡಲಾಗಿದೆ. ಹೊಸಬರ ಸೇರ್ಪಡೆಯ ನಂತರ 31 ಲೋಕಸಭಾ ಸದಸ್ಯರನ್ನು ಹೊಂದಿರುವ ಆಂಧ್ರಪ್ರದೇಶಕ್ಕೆ ಒಟ್ಟು ಹತ್ತು ಸಚಿವಸ್ಥಾನ ನೀಡಿದಂತಾಗಿದೆ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ಎದುರಿಸಲಿರುವ ಕರ್ನಾಟಕಕ್ಕೆ ನೀಡಿರುವ ಮಹತ್ವದಲ್ಲಿಯೂ ಇದೇ ಉದ್ದೇಶ ಇದ್ದಂತಿದೆ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯ ಸೋಲಿನಿಂದಾಗಿರುವ ಮುಖಭಂಗವನ್ನು ಅಳಿಸಿಹಾಕಿ ಆ ಸಮುದಾಯದ ಮತದಾರರನ್ನು ಒಲಿಸಿಕೊಳ್ಳಲು ರೆಹಮಾನ್‌ಖಾನ್ ಅವರನ್ನು ಸಂಪುಟ ಸಚಿವರನ್ನಾಗಿ ಮಾಡಲಾಗಿದೆ. ಇನ್ನೊಬ್ಬ ಹಿಂದುಳಿದ ಜಾತಿಯ ನಾಯಕರಾದ ಎಂ.ವೀರಪ್ಪ ಮೊಯಿಲಿ ಅವರಿಗೆ ಪೆಟ್ರೋಲಿಯಂನಂತಹ ಪ್ರಮುಖ ಖಾತೆ ನೀಡಲಾಗಿದೆ. ಈಗಾಗಲೇ ವಿದೇಶಾಂಗ ವ್ಯವಹಾರ ಖಾತೆ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ರಾಜೀನಾಮೆ ಕೊಡಿಸಿ ರಾಜ್ಯದಲ್ಲಿನ ಒಕ್ಕಲಿಗರನ್ನು ಒಲಿಸಿಕೊಳ್ಳಲು ಕಳುಹಿಸಿಕೊಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಹಣಿಯುವ ಉದ್ದೇಶದಿಂದಲೇ ಮೊದಲ ಬಾರಿ ಮೂರು ಹೊಸಮುಖಗಳಿಗೆ ಅವಕಾಶ ನೀಡಲಾಗಿದೆ. ಪಲ್ಲಮ್ ರಾಜು ಅವರಿಗೆ ಬಡ್ತಿ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸಚಿನ್ ಪೈಲಟ್ ಮೊದಲಾದವರಿಗೆ ಉತ್ತಮ ಖಾತೆಗಳನ್ನು ನೀಡಿದ್ದು ಬಿಟ್ಟರೆ ಸಂಪುಟಕ್ಕೆ ಯುವರಕ್ತ ಹರಿಸಲು ಪ್ರಧಾನಿಯವರಿಗೆ ಸಾಧ್ಯವಾಗಿಲ್ಲ. ರಾಹುಲ್‌ಗಾಂಧಿ ಇಂತಹ ಪ್ರಯತ್ನಕ್ಕೆ ಒತ್ತಡ ಹೇರಬಹುದು ಎಂಬ ನಿರೀಕ್ಷೆ ಕೂಡಾ ಹುಸಿಯಾಗಿದೆ. ಪತ್ನಿಯ ಟ್ರಸ್ಟ್‌ನ ಅವ್ಯವಹಾರದ ಆರೋಪ ಎದುರಿಸುತ್ತಿರುವ ಸಲ್ಮಾನ್ ಖುರ್ಷಿದ್ ಅವರಿಗೆ ವಿದೇಶಾಂಗ ವ್ಯವಹಾರದಂತಹ ಪ್ರಮುಖ ಖಾತೆಯನ್ನು ನೀಡುವ ಮೂಲಕ ಭ್ರಷ್ಟಾಚಾರದ ವಿರುದ್ದದ ಹೋರಾಟದ ಬಗ್ಗೆ ತನ್ನ ತಿರಸ್ಕಾರವನ್ನು ಯುಪಿಎ ವ್ಯಕ್ತಪಡಿಸಿದೆ. ರಿಲಯನ್ಸ್ ಕಂಪೆನಿಯ ಕೆಂಗಣ್ಣಿಗೆ ಈಡಾಗಿದ್ದರೆಂದು ಹೇಳಲಾದ ಸಚಿವ ಜೈಪಾಲ್ ರೆಡ್ಡಿಯವರಿಂದ ಪೆಟ್ರೋಲಿಯಂ ಖಾತೆಯನ್ನು ಕಿತ್ತುಕೊಂಡಿರುವುದು ಕೂಡಾ ಯುಪಿಎ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಸಂಪುಟ ಪುನರ್‌ರಚನೆಯಲ್ಲಿ ಆಡಳಿತ ಪಕ್ಷದ ನಾಯಕರ ಪಾತ್ರ ಇದ್ದರೂ ಅದು ಮುಖ್ಯವಾಗಿ ಪ್ರಧಾನಮಂತ್ರಿಯ ಪರಮಾಧಿಕಾರ. ಈಗಿನ ಪುನರ್‌ರಚನೆಯನ್ನು ಕಂಡಾಗ ಇದು ಪಕ್ಷದ ಬಲವರ್ಧನೆಗಾಗಿ, ಪಕ್ಷದ ಅಧ್ಯಕ್ಷರ ಆದೇಶದಂತೆಯೇ ನಡೆದಂತೆ ಕಾಣುತ್ತಿದೆ. ಸ್ವತಃ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ದುರ್ಬಲ ಪ್ರಧಾನಿಯವರಿಂದ ಇದಕ್ಕಿಂತ ಭಿನ್ನವಾದ ದಿಟ್ಟ ನಿರ್ಧಾರವನ್ನು ನಿರೀಕ್ಷಿಸಲಾಗದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.