ರಕ್ಷಣೆ ಕೊಡಿ ಅಂತರ್ಜಾತಿ ವಿವಾಹವಾದ ಕಾರಣಕ್ಕೆ ದಂಪತಿಗೆ ಸಾಮಾಜಿಕ ಬಹಿಷ್ಕಾರ ಹಾಕುವಂತಹ ಅಮಾನವೀಯ ಪ್ರಕರಣಗಳು ಈಗಲೂ ನಡೆಯುತ್ತಿವೆ ಎನ್ನುವುದು ತಲೆ ತಗ್ಗಿಸುವ ವಿಚಾರ. ಉಪ್ಪಾರಶೆಟ್ಟಿ ಜನಾಂಗದ ಸೌಭಾಗ್ಯಮ್ಮ ಹಾಗೂ ಒಕ್ಕಲಿಗ ಜನಾಂಗದ ಪುಟ್ಟರಾಮು, ಅಂತರ್ಜಾತಿ ವಿವಾಹವಾದ ತಪ್ಪಿಗೆ ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಗ್ರಾಮ ಮುಖಂಡರಿಗೆ ದಂಡ ಪಾವತಿಸುತ್ತಿದ್ದಾರೆ ಎಂಬುದು ಆಘಾತಕಾರಿ. `ದಂಡ ನೀಡದಿದ್ದಲ್ಲಿ ಸಾಮಾಜಿಕ ಬಹಿಷ್ಕಾರ ಎದುರಿಸಬೇಕು~ ಎಂಬಂಥ ಸ್ಥಿತಿ ಸ್ವತಂತ್ರ ಭಾರತದ ಜಾತ್ಯತೀತ ರಾಷ್ಟ್ರದ ಪರಿಕಲ್ಪನೆಯನ್ನೇ ಅಣಕಿಸಿದಂತಾಗಿದೆ. ಸಾಮಾಜಿಕ ಬಹಿಷ್ಕಾರವೆಂದರೆ, ಆ ಕುಟುಂಬದವರನ್ನು ಯಾರೂ ಮಾತನಾಡಿಸುವಂತಿಲ್ಲ, ನೀರು ನೀಡುವಂತಿಲ್ಲ. ಗ್ರಾಮದ ಅಂಗಡಿಗಳಲ್ಲಿ ವಸ್ತು ಖರೀದಿಗೂ ಅವಕಾಶವಿರುವುದಿಲ್ಲ. ಈ ಬಹಿಷ್ಕಾರ ತಪ್ಪಿಸಿಕೊಳ್ಳುವುದಕ್ಕಾಗಿ ಈವರೆಗೆ ದಂಪತಿ 20 ಸಾವಿರ ರೂಪಾಯಿಗಳವರೆಗೆ ದಂಡ ಪಾವತಿಸಿದ್ದಾರೆ ಎಂಬಂಥ ವರದಿಗಳು ಆಘಾತಕಾರಿ. ಈ ವರ್ಷ ದಂಡದ ಮೊತ್ತವನ್ನು ಏರಿಕೆ ಮಾಡಿ ರೂ 5000 ದಂಡ ಪಾವತಿಸುವಂತೆ ದಂಪತಿಗೆ ಆದೇಶಿಸಿರುವುದಂತೂ ಕಾನೂನಿಗೆ ಮಾಡಿರುವ ಅವಮಾನ. ಈ ಅರಣ್ಯನ್ಯಾಯದ ಪ್ರಕರಣ ನಾಗರಿಕಲೋಕದ ಸಂಪರ್ಕ ಇಲ್ಲದ ದೂರದ ಪ್ರದೇಶದಲ್ಲೇನೂ ನಡೆದಿಲ್ಲ. ಬೆಂಗಳೂರು - ಮೈಸೂರು ಹೆದ್ದಾರಿಯ್ಲ್ಲಲೇ ಇರುವ ಮದ್ದೂರು (ಮಂಡ್ಯ ಜಿಲ್ಲೆ) ಬಳಿಯ ಉಪ್ಪಾರದೊಡ್ಡಿ ಗ್ರಾಮದ್ಲ್ಲಲಿ ಇಂತಹ ಕೃತ್ಯ ರಾಜಾರೋಷವಾಗಿ ನಡೆಯುತ್ತಿದೆ. ಸಕ್ಕರೆಯ ಕಣಜವೆನಿಸಿದ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗಳ ಪ್ರಮಾಣ ಹೆಚ್ಚಿದೆ ಎಂಬಂಥ ಕಳಂಕ ಈಗಾಗಲೇ ಇದೆ. ಈಗ ಅಂತರ್ಜಾತಿ ವಿವಾಹಗಳ ಬಗ್ಗೆ ಈ ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿರುವ ಅಸಹನೆ ಗಂಭೀರವಾದದ್ದು. ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಮಂಡ್ಯ ಜಿಲ್ಲೆಯ ಅಂಬಲಪಾಡಿಯ ಯುವತಿ ತನ್ನ ಕುಟುಂಬದವರಿಂದಲೇ ಹತ್ಯೆಯಾದಳೆಂಬ ಆರೋಪ ಇರುವ ಪ್ರಕರಣವನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ರಾಷ್ಟ್ರ ಸ್ವತಂತ್ರವಾಗಿ 65 ವರ್ಷಗಳು ಕಳೆದರೂ ಜಾತಿ ತಾರತಮ್ಯಗಳು ಅಳಿಯಲಿಲ್ಲ; ಬದಲಿಗೆ ಆಧುನಿಕ ನಾಗರಿಕ ಸಮಾಜಕ್ಕೆ ಸೆಡ್ಡು ಹೊಡೆಯುವ ರೀತಿ ಜಾತಿ ವ್ಯವಸ್ಥೆಯನ್ನು ಪೋಷಿಸುವಂತಹ ದಮನಕಾರಿ ಶಕ್ತಿಗಳು ಜೀವಂತವಾಗಿರುವುದು ನಮ್ಮ ಆಡಳಿತಯಂತ್ರದ ವೈಫಲ್ಯ. ಈ ವಿಷಯವನ್ನು ಈಗಲಾದರೂ ಆಡಳಿತ ವ್ಯವಸ್ಥೆ ಕಡೆಗಣಿಸಬಾರದು. ನಾಗರಿಕ ಸಮಾಜದ ಪ್ರಗತಿಗೆ ಅಡ್ಡಗಾಲಾಗುವ ಇಂತಹ ಶಕ್ತಿಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ರಾಜಕೀಯ ಇಚ್ಛಾಶಕ್ತಿಯನ್ನು ನಮ್ಮನ್ನಾಳುವವರು ಪ್ರದರ್ಶಿಸಬೇಕಿದೆ. ಜಾತಿ ಲೆಕ್ಕಾಚಾರಗಳೇ ತುಂಬಿ ತುಳುಕುವ ಮತಬ್ಯಾಂಕ್ ರಾಜಕಾರಣದಲ್ಲಿ ಇಂತಹ ಪ್ರಕರಣಗಳು ಕೊಚ್ಚಿಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಬೇಕು. ಆಧುನಿಕ ಸಮಾಜದಲ್ಲಿ ತಲೆ ಎತ್ತುತ್ತಿರುವ ಇಂತಹ ಪಿಡುಗುಗಳ ಕುರಿತು ಸಮಾಜಶಾಸ್ತ್ರೀಯ ಅಧ್ಯಯನಗಳು ನಡೆಯಬೇಕು. ಈಗಾಗಲೇ ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಪ್ರಬಲವಾಗಿರುವ ಜಾತಿ ಪಂಚಾಯಿತಿಗಳು ಸೃಷ್ಟಿಸುತ್ತಿರುವ ಅವಾಂತರಗಳ ಕೆಡುಕುಗಳನ್ನು ನಾವು ಮನಗಾಣಬೇಕಿದೆ. ಹೀಗಾಗಿ, ಗ್ರಾಮ ಮಟ್ಟಗಳಲ್ಲಿ ಜಾತಿಭೇದದ ಪಿಡುಗು ಸೇರಿದಂತೆ ಎಲ್ಲಾ ಸಾಮಾಜಿಕ ಪಿಡುಗುಗಳ ಬಗೆಗೂ ಜಾಗೃತಿ ಕಾರ್ಯಕ್ರಮಗಳು ನಡೆಯುವುದೂ ಅಷ್ಟೇ ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.