ಸಂತ್ರಸ್ತರ ಶಾಪ ತಟ್ಟೀತು ಮೂರು ವರ್ಷಗಳ ಹಿಂದೆ ಉತ್ತರಕರ್ನಾಟಕದ ಹದಿನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಂತ್ರಸ್ತರಾದವರ ಗೋಳು ಇನ್ನೂ ಕೊನೆಗೊಂಡಿಲ್ಲ. ಅತಿವೃಷ್ಟಿಪೀಡಿತ ಕುಟುಂಬಗಳ ಕಷ್ಟ-ನಷ್ಟಕ್ಕೆ ಸ್ಪಂದಿಸಿದ ರಾಜ್ಯದ ಜನತೆ ಆ ಪ್ರದೇಶದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಶಕ್ತಿಮೀರಿ ನೆರವು ನೀಡಿದ್ದರು. ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಸಹೋದ್ಯೋಗಿಗಳು ಬೀದಿಬೀದಿ ತಿರುಗಿ ಸಾರ್ವಜನಿಕರಿಂದ ನೆರವು ಯಾಚಿಸಿದ್ದರು. ರಾಜ್ಯದ ಉದ್ಯಮಿಗಳು ಕೂಡಾ ಉದಾರವಾಗಿ ದೇಣಿಗೆ ನೀಡಿದ್ದರು. ಪ್ರತಿದಿನ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹವಾಯಿತೆಂದು ಸರ್ಕಾರ ಕೊಚ್ಚಿಕೊಂಡಿತ್ತು. ಪುನರ್ವಸತಿಗಾಗಿ ಸುಮಾರು 300 ಸ್ಥಳಾಂತರ ಮತ್ತು ಕನಿಷ್ಠ 70,000 ಮನೆಗಳ ನಿರ್ಮಾಣದ ಉದ್ದೇಶದೊಂದಿಗೆ ಸರ್ಕಾರ `ಆಸರೆ~ ಎನ್ನುವ ಯೋಜನೆಯನ್ನು ರೂಪಿಸಿತ್ತು. ಈ `ಆಶ್ವಾಸನೆಗಳ ಸುರಿಮಳೆ~ ಸುರಿದು, `ನೆರವಿನ ಮಹಾಪೂರ~ ಹರಿದು ಆಗಲೇ ಮೂರು ಮಳೆಗಾಲಗಳು ಕಳೆದುಹೋಗಿವೆ. ಇಬ್ಬರು ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಐವತ್ತು ಸಾವಿರ ಮನೆ ನಿರ್ಮಿಸಿಕೊಡುತ್ತೇನೆಂದು ಘೋಷಿಸಿದ್ದ ಆಗಿನ ಸಚಿವ ಜನಾರ್ದನ ರೆಡ್ಡಿ ಜೈಲಲ್ಲಿದ್ದಾರೆ. ಈಗಲೂ ಸಾವಿರಾರು ಕುಟುಂಬಗಳು ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ತಗಡು ಷೀಟುಗಳ ಮನೆಯಲ್ಲಿಯೇ ಅತ್ಯಂತ ದಯನೀಯ ಸ್ಥಿತಿಯಲ್ಲಿ ವಾಸವಾಗಿದ್ದಾರೆ. ಕೆಲವು ಧಾರ್ಮಿಕ ಮುಖಂಡರು ಸ್ವಂತ ಆಸಕ್ತಿಯಿಂದ ಒಂದಷ್ಟು ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಸರ್ಕಾರದ ನಿರ್ಲಕ್ಷದಿಂದ ಬೇಸತ್ತು ಬಹಳಷ್ಟು ಉದ್ಯಮಿಗಳು ಮನೆ ನಿರ್ಮಿಸಿಕೊಡುವ ವಾಗ್ದಾನದಿಂದ ಹಿಂದೆ ಸರಿದಿರುವುದರಿಂದ ಇಡೀ ಯೋಜನೆಯು ದಿಕ್ಕು ತಪ್ಪಿದೆ. ಪುನರ್ವಸತಿ ಯೋಜನೆಯಡಿ ಪೂರ್ಣಗೊಂಡಿರುವ ಮನೆಗಳಾದರೂ ವಾಸಕ್ಕೆ ಯೋಗ್ಯವಾಗಿದೆಯೇ? ಅದೂ ಇಲ್ಲ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮುಳ್ಳೊಳ್ಳಿಯಲ್ಲಿ ಒಂದು ವರ್ಷದ ಹಿಂದೆ ನಿರ್ಮಿಸಿದ್ದ 320 ಮನೆಗಳಲ್ಲಿ 10-15 ಮನೆಗಳನ್ನು ಬಿಟ್ಟು ಉಳಿದೆಲ್ಲವೂ ಪಾಳು ಬಿದ್ದಿವೆ. ಕಳಪೆ ಕಾಮಗಾರಿಯಿಂದಾಗಿ ತಳಪಾಯಗಳೇ ಕುಸಿದುಬಿದ್ದಿವೆ, ಛಾವಣಿ ಸೋರತೋಡಗಿದೆ. ವಿದ್ಯುತ್ ಮತ್ತು ಕುಡಿಯುವ ನೀರಿನ ಪೂರೈಕೆ ಇಲ್ಲ. ಇಂತಹ ಸ್ಥಿತಿಯಲ್ಲಿ ಯಾವ ಕುಟುಂಬಗಳು ಅಲ್ಲಿ ವಾಸಿಸಲು ಸಾಧ್ಯ? ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಸ್ಥಳೀಯ ರಾಜಕಾರಣಿಗಳ ಅಪವಿತ್ರ ಸಂಬಂಧ ಇಂತಹ ಕಳಪೆ ಕಾಮಗಾರಿಗೆ ಕಾರಣ ಎಂದು ಹೇಳುವುದಕ್ಕೆ ತನಿಖೆ ಮಾಡಬೇಕಾಗಿಲ್ಲ. ಇದು ಕೇವಲ ಧಾರವಾಡ ಜಿಲ್ಲೆಯ ಒಂದು ಹಳ್ಳಿಯ ಕತೆಯಲ್ಲ. ಬಿಜಾಪುರ,ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಕೂಡಾ `ಆಸರೆ~ ಮನೆಗಳು ಪೂರ್ಣಗೊಂಡ ಕೆಲವೇ ತಿಂಗಳುಗಳ ಅವಧಿಯಲ್ಲಿ ಕುಸಿದುಬಿದ್ದಿರುವ ಘಟನೆಗಳು ನಡೆದಿವೆ. ಭಿನ್ನಮತೀಯ ಚಟುವಟಿಕೆಯಲ್ಲಿಯೇ ಮೂರುಹೊತ್ತು ಮುಳುಗಿರುವ ರಾಜ್ಯಸರ್ಕಾರ ಒಂದಷ್ಟು ಹೊತ್ತು ಬಿಡುವು ಮಾಡಿಕೊಂಡು ಈ ಕಡೆ ಗಮನಹರಿಸಬೇಕು. ಆಸರೆ ಯೋಜನೆಯಡಿ ಸಂತ್ರಸ್ತರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ಕಾಲವನ್ನು ನಿಗದಿಪಡಿಸಿ ಪೂರ್ಣಗೊಳಿಸಬೇಕು. ಇದರ ಜತೆಯಲ್ಲಿ ಕಳಪೆಕಾಮಗಾರಿಗೆ ಕಾರಣಕರ್ತರಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಯಲ್ಲಿ ಹಾಕಿ ಅವರ ಜತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಸಂತ್ರಸ್ತರ ಕಣ್ಣೀರಿನ ಶಾಪ ತಟ್ಟೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.