ಖಾಸಗಿತನ ಕಾಪಾಡಿ ಖಾಸಗಿತನವನ್ನು ಗೌರವಿಸಬೇಕು, ಸಂರಕ್ಷಿಸಬೇಕು ಎಂದು ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ. ಷಾ ನೇತೃತ್ವದ ತಜ್ಞರ ಸಮಿತಿ ನೀಡಿದ ಸಲಹೆ ಎಲ್ಲ ದೃಷ್ಟಿಯಿಂದಲೂ ಸ್ವಾಗತಾರ್ಹ. ಈ ದಿಸೆಯಲ್ಲಿ ಸೂಕ್ತ ಕಾನೂನು ರೂಪಿಸಬೇಕು ಎಂಬ ಸಮಿತಿಯ ಶಿಫಾರಸ್ಸನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಏಕೆಂದರೆ ಖಾಸಗಿತನ ಎನ್ನುವುದು ವ್ಯಕ್ತಿಯ ಅನ್ನ, ಉಸಿರಿನಷ್ಟೇ ಮಹತ್ವದ ಹಕ್ಕು. ಸಮಾಜದ್ರೋಹ, ರಾಷ್ಟ್ರದ್ರೋಹಕ್ಕೆ ಅದನ್ನು ಬಳಸುತ್ತಿದ್ದರೆ ಮಾತ್ರ ಕಡಿವಾಣ ಹಾಕಬಹುದೇನೋ. ಜನತಂತ್ರ ವ್ಯವಸ್ಥೆ ಬಲವಾಗಿ ಬೇರೂರಿರುವ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ವ್ಯಕ್ತಿಯ ಖಾಸಗಿತನಕ್ಕೆ ತುಂಬ ಮಹತ್ವ ನೀಡಲಾಗುತ್ತಿದೆ. ಇದರಲ್ಲಿ ಅತಿಕ್ರಮ ಪ್ರವೇಶ ಮಾಡಲು ಸರ್ಕಾರಗಳೂ ಹಿಂದೆಮುಂದೆ ನೋಡುವ ಸ್ಥಿತಿಯಿದೆ. ಆದರೆ ಇತ್ತೀಚಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನಾನಾ ನೆಪ ಹೇಳಿ ನಾಗರಿಕರಿಂದ ಸಂಗ್ರಹಿಸಿದ ಖಾಸಗಿ ಮಾಹಿತಿಗಳನ್ನು ದುರುಪಯೋಗ ಮಾಡಿಕೊಳ್ಳುವ, ಅದಕ್ಕಾಗಿ ಅತ್ಯಾಧುನಿಕ ತಾಂತ್ರಿಕ ಸಾಧನ ಸಲಕರಣೆಗಳನ್ನು ದುರ್ಬಳಕೆ ಮಾಡುವ ಪ್ರಸಂಗಗಳು ಆ ದೇಶಗಳಲ್ಲೂ ನಡೆಯುತ್ತಿವೆ, ನಮ್ಮ ದೇಶದ್ಲ್ಲಲೂ ಖಾಸಗಿತನಕ್ಕೆ ಧಕ್ಕೆ ತರುವಂಥ ಅನೇಕ ನಿದರ್ಶನಗಳನ್ನು ಸಮಿತಿ ಗಮನಿಸಿದೆ. ಇದರಲ್ಲಿ ದೂರವಾಣಿ ಕದ್ದಾಲಿಕೆಯೂ ಒಂದು. ಯಾವುದೇ ಎಗ್ಗಿಲ್ಲದೆ, ಸಮರ್ಥನೆ ಇಲ್ಲದೆ ಸರ್ಕಾರಿ ವ್ಯವಸ್ಥೆಯಡಿ ನಡೆಯುತ್ತಿರುವ ಕದ್ದಾಲಿಕೆ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂಬ ಸಮಿತಿ ಸಲಹೆ ಗಮನಾರ್ಹ. ಏಕೆಂದರೆ ರಾಷ್ಟ್ರದ ಭದ್ರತೆ, ಸಮಗ್ರತೆಗೆ ಧಕ್ಕೆ ಬರುವಂಥ ಸಂದರ್ಭಗಳಲ್ಲಿ ದೂರವಾಣಿ ಕದ್ದಾಲಿಕೆಗೆ ಒಂದು ಅರ್ಥವಿದೆ. ಆದರೆ ರಾಜಕೀಯ ಎದುರಾಳಿಗಳನ್ನು ಹಣಿಯಲು, ಚಾರಿತ್ಯ್ರ ವಧೆ ಮಾಡಲು ಅಧಿಕಾರದ ಸೂತ್ರ ಹಿಡಿದ ರಾಜಕಾರಣಿಗಳು ಇದನ್ನು ಬಳಸಿಕೊಂಡ ಬೇಕಾದಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈಗಿನ ನಿಯಮಗಳ ಪ್ರಕಾರ ಭದ್ರತಾ ಇಲಾಖೆಗಳ ಕೋರಿಕೆಯಂತೆ ಸರ್ಕಾರದ ನಿರ್ದಿಷ್ಟ ದರ್ಜೆ ಅಧಿಕಾರಿ ಕದ್ದಾಲಿಕೆಗೆ ಅನುಮತಿ ನೀಡಬಹುದು. ಇದನ್ನು ತಪ್ಪಿಸಿ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಖಾಸಗಿತನ ಸಂರಕ್ಷಣಾ ಆಯೋಗ ರಚಿಸಬೇಕು, ದೂರವಾಣಿ ಕದ್ದಾಲಿಕೆಗೆ ಆಯೋಗದಿಂದ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಬೇಕು, ಹೀಗೆ ಧ್ವನಿಮುದ್ರಿಸಿಕೊಂಡ ಸಂಭಾಷಣೆಗಳನ್ನು ನಿಗದಿತ ಅವಧಿಯೊಳಗೆ ನಾಶಮಾಡಬೇಕು ಎಂದು ಸಮಿತಿ ಸೂಚಿಸಿದೆ. ಇದು ಕಾರ್ಯಗತವಾದರೆ ಖಾಸಗಿತನ ರಕ್ಷಣೆಯ ದೃಷ್ಟಿಯಲ್ಲಿ ಮಹತ್ವದ ಹೆಜ್ಜೆ ಎನಿಸಿಕೊಳ್ಳುತ್ತದೆ. ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ನಾಗರಿಕರ ಮಾಹಿತಿ ಸಂಗ್ರಹಿಸುತ್ತಿವೆ. ಉದಾಹರಣೆಗೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ರೇಷನ್ ಕಾರ್ಡ್ ನೀಡಲು ಕುಟುಂಬಗಳಿಂದ ಸಂಗ್ರಹಿಸುತ್ತಿರುವ ಡಿಜಿಟಲ್ ರೂಪದ ಮಾಹಿತಿ, ರಾಷ್ಟ್ರ ಮಟ್ಟದಲ್ಲಿನ `ಆಧಾರ್~, ಬ್ಯಾಂಕ್ ಮತ್ತು ಷೇರು ವಿನಿಮಯ ಕೇಂದ್ರಗಳು ಸಂಗ್ರಹಿಸುತ್ತಿರುವ `ನಿಮ್ಮ ಗ್ರಾಹಕರನ್ನು ತಿಳಿಯಿರಿ~ ಮಾಹಿತಿಗಳು, ಕೇಂದ್ರ ಗೃಹ ಖಾತೆ ನೀಡುತ್ತಿರುವ ನಾಗರಿಕರ ಸ್ಮಾರ್ಟ್ ಐಡಿ ಕಾರ್ಡ್‌ಗಳಲ್ಲೆಲ್ಲ ವ್ಯಕ್ತಿಯ ಜಾತಕವನ್ನೇ ಸಂಗ್ರಹಿಸಿಡಲಾಗುತ್ತದೆ. ಇದು ಕಾನೂನುಬದ್ಧ ರೀತಿಯಲ್ಲಿ ಬಳಕೆಯಾಗಬೇಕು; ಅನಧಿಕೃತ ವ್ಯಕ್ತಿ, ವ್ಯವಸ್ಥೆ ಕೈಗೆ ಸಿಗಬಾರದು. ಇವನ್ನು ದುರುಪಯೋಗ ಮಾಡಿಕೊಂಡರೆ ಅಪರಾಧ ಎಂದು ಪರಿಗಣಿಸಬೇಕು. ಅನ್ಯ ಉದ್ದೇಶಕ್ಕೆ ಬಳಸುವುದಾದರೆ ಆ ವ್ಯಕ್ತಿಯ ಅನುಮತಿ ಪಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.