ಕಸಕ್ಕೊಂದು ದಾರಿ ಮಾಡಿ ಕಗ್ಗಂಟಾಗಿ ಪರಿಣಮಿಸಿದ್ದ ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆಗೆ ಇದೀಗ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಸಮಸ್ಯೆ ಉಲ್ಬಣಿಸಿ ಎರಡೂವರೆ ತಿಂಗಳಾಗಿತ್ತು. ನಗರ ನಿವಾಸಿಗಳಲ್ಲಿ ರೇಜಿಗೆ ಹುಟ್ಟಿಸಿದ ಈ ಸಮಸ್ಯೆಗೆ ತಡವಾಗಿಯಾದರೂ ಒಂದು ಪರಿಹಾರ ಗೋಚರಿಸಿರುವುದು ಸಮಾಧಾನದ ಸಂಗತಿ. ಆದರೂ ಸಮಸ್ಯೆಯನ್ನು ಈ ಮಟ್ಟಿಗೆ ಬಿಗಡಾಯಿಸಲು ಬಿಟ್ಟಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಸರ್ಕಾರದ ವೈಫಲ್ಯ ಎಂದೇ ಭಾವಿಸಬೇಕಾಗುತ್ತದೆ. ವಸತಿ ಪ್ರದೇಶಗಳಲ್ಲಿ ಗುಡ್ಡೆಯಾಗಿ ಬಿದ್ದಿರುವ ಕಸ ಕೊಳೆತು ದುರ್ನಾತ ಬೀರತೊಡಗಿದೆ. ಜನ ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ಇದೆ. ಇದಕ್ಕೆ ಪಾಲಿಕೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣ. ತ್ಯಾಜ್ಯ ವಿಲೇವಾರಿ ಕಗ್ಗಂಟಾಗಲು ಕಸದ ಮಾಫಿಯಾ ಕಾರಣ ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ಆರ್.ಅಶೋಕ ಅವರೇ ಒಪ್ಪಿಕೊಂಡಿರುವುದು ಸಮಸ್ಯೆಯ ಮತ್ತೊಂದು ಮಗ್ಗುಲನ್ನು ತೆರೆದಿಟ್ಟಿದೆ. ಈ ದುಷ್ಟ ಕೂಟವನ್ನು ಬಗ್ಗುಬಡಿಯಲು ಸರ್ಕಾರ ಇಲ್ಲಿಯವರೆಗೂ ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ. ಕಸದ ಮಾಫಿಯಾ ಈ ಹಂತ ಮುಟ್ಟಲು ಅವಕಾಶ ಮಾಡಿಕೊಟ್ಟವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ರಾಜಧಾನಿಯಲ್ಲಿ ನಿತ್ಯ ಸುಮಾರು ಐದು ಸಾವಿರ ಟನ್ ಕಸ ಸಂಗ್ರಹವಾಗುತ್ತಿದೆ. ಕಸ ಸಂಗ್ರಹ ಮತ್ತು ಸಾಗಣೆ ವಹಿವಾಟು ವಾರ್ಷಿಕ 400 ಕೋಟಿ ರೂಪಾಯಿಯಷ್ಟು ಬೃಹತ್ ಬಾಬ್ತು. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೈಜೋಡಿಸದಿದ್ದರೆ ಈ ಮಾಫಿಯಾ ಇಷ್ಟರಮಟ್ಟಿಗೆ ಹಿಡಿತ ಸಾಧಿಸಲು ಸಾಧ್ಯವೆ ಎಂಬುದರ ಕುರಿತು ಸರ್ಕಾರ ಈಗಲಾದರೂ ಗಂಭೀರವಾಗಿ ಯೋಚಿಸಬೇಕು. ಸೂರತ್‌ನಲ್ಲಿ 1994ರಲ್ಲಿ ಮಾರಕ ಪ್ಲೇಗ್ ಹರಡಿ 50ಕ್ಕೂ ಹೆಚ್ಚು ಜನರ ಸಾವಿಗೆ ನೈರ್ಮಲ್ಯ ಸಮಸ್ಯೆಯೇ ಪ್ರಧಾನ ಕಾರಣವಾಗಿತ್ತು. ಕಸದ ಜೊತೆ ಮಳೆ ನೀರು ಸೇರಿದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ರೋಗ ರುಜಿನಗಳಿಂದ ನರಳುತ್ತಿರುವ ಜನರ ಬದುಕಿನೊಂದಿಗೆ ತ್ಯಾಜ್ಯ ವಸ್ತುಗಳ ಮಾಲಿನ್ಯವೂ ಚೆಲ್ಲಾಟ ಆಡಲು ಬಿಡಬಾರದಿತ್ತು. ಕಸ ವಿಲೇವಾರಿ ಮಾಡಿ ಸ್ವಾಸ್ಥ್ಯ ಕಾಪಾಡಿ ಎಂದು ನಗರವಾಸಿಗಳು ಅಂಗಲಾಚುವ ಸ್ಥಿತಿ ಉಂಟಾಗಿದ್ದಕ್ಕೆ ಯಾರು ಹೊಣೆ? ಇದಕ್ಕೆ ಕಾರಣವಾದ ಬಿಬಿಎಂಪಿ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ. ನಿರ್ಮಲ ಬೆಂಗಳೂರು ಎಂಬ ಪಾಲಿಕೆಯ ಘೋಷಣೆ ನಗೆಪಾಟಲಿಗೆ ಈಡಾಗಿದೆ. ನಗರದ ಜನಸಂಖ್ಯೆ ಶರವೇಗದಲ್ಲಿ ಏರಿದಂತೆಯೇ ಕಸೋತ್ಪಾದನೆಯೂ ಏರುತ್ತಿದೆ. ಕಸ ತುಂಬುವ ಕ್ರಿಯೆಯಲ್ಲಿ ಎಲ್ಲರೂ ಭಾಗಿಗಳೇ. ಆದರೆ, ನಿರ್ವಹಣೆ ವಿಚಾರದಲ್ಲಿ ಯಾರಿಗೂ ಕಾಳಜಿ ಇಲ್ಲ. ಅದರ ಪರಿಣಾಮವನ್ನು ಬೆಂಗಳೂರು ಈಗ ಎದುರಿಸುತ್ತಿದೆ. ಕಸವನ್ನು ಮೂಲದಲ್ಲೇ ಬೇರ್ಪಡಿಸುವ ಉದ್ದೇಶ ಇನ್ನೂ ಕೈಗೂಡಿಲ್ಲ. ಈ ಕುರಿತು ಜನಜಾಗೃತಿ ಅಗತ್ಯ. ಸಂಗ್ರಹಿಸಿದ ಕಸವನ್ನು ಎಲ್ಲಿ ಸುರಿಯಬೇಕು ಎನ್ನುವ ಪ್ರಶ್ನೆಗೆ ಮೂರು ತಿಂಗಳ ಮಟ್ಟಿಗೆ ಪರಿಹಾರ ಸಿಕ್ಕಿದೆ. ಕಸ ಸಂಸ್ಕರಣೆ ಮತ್ತು ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಇಲ್ಲಿಯವರೆಗೂ ಶಾಶ್ವತ ವ್ಯವಸ್ಥೆ ರೂಪಿಸದಿರುವುದು ದುರದೃಷ್ಟಕರ. ತಾತ್ಕಾಲಿಕವಾಗಿ ಪರಿಹಾರ ದೊರೆತಿದೆ ಎಂದು ಮೈಮರೆಯದೆ ಗುಡ್ಡೆ ಬಿದ್ದಿರುವ ಕಸವನ್ನು ತ್ವರಿತವಾಗಿ ಸಾಗಿಸಬೇಕು. ಸಮಸ್ಯೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.