ರಾಜೀನಾಮೆ ನೀಡಲಿ `ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ~ ಎಂಬ ಗಾದೆ ಮಾತು ಭಾರತದ ರಾಜಕೀಯದ ಇಂದಿನ ಸ್ಥಿತಿಯನ್ನು ವರ್ಣಿಸಲು ಹೇಳಿಮಾಡಿದಂತಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಿಗೆ ಸಮನಾಗಿರುವ ಸ್ಥಾನಮಾನವನ್ನು ವಿರೋಧಪಕ್ಷ ಪಡೆದಿರುತ್ತದೆ. ಪ್ರಜಾಪ್ರಭುತ್ವದ ರಕ್ಷಣೆಯ ಮೊದಲ ಕಾವಲು ನಾಯಿಯೇ ವಿರೋಧಪಕ್ಷ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂವಿಧಾನದ ಉಳಿದೆಲ್ಲ ಆಧಾರಸ್ಥಂಭಗಳಂತೆ ವಿರೋಧಪಕ್ಷಗಳು ಕೂಡಾ ಕರ್ತವ್ಯನಿರ್ವಹಣೆಯಲ್ಲಿ ಎಡವುತ್ತಾ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿರುವ ನಿತಿನ್ ಗಡ್ಕರಿ ವಿರುದ್ಧ ಬಹಳ ಕಾಲದಿಂದ ಪಿಸುದನಿಯಲ್ಲಿ ಕೇಳಿಬರುತ್ತಿದ್ದ ಭ್ರಷ್ಟಾಚಾರದ ಆರೋಪಗಳು ಇತ್ತೀಚೆಗೆ ಗಟ್ಟಿದನಿಯಲ್ಲಿ ಕೇಳಿಬರತೊಡಗಿವೆ. ಅರವಿಂದ್ ಕೇಜ್ರಿವಾಲ್ ಮತ್ತು ತಂಡ ಗಡ್ಕರಿ ವಿರುದ್ದ ಭೂಹಗರಣಗಳ ಆರೋಪ ಮಾಡಿರುವ ಬೆನ್ನಲ್ಲೇ ಮಾಧ್ಯಮಗಳು ಇನ್ನಷ್ಟು ಹಗರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆಗೊಳಿಸಿವೆ. ಇವೆಲ್ಲವೂ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ದಿನಗಳ ಹಗರಣ. ಆ ಕಾಲದಲ್ಲಿ ರಸ್ತೆ ನಿರ್ಮಾಣ ಗುತ್ತಿಗೆ ಪಡೆದಿದ್ದ ಸಂಸ್ಥೆಯೊಂದು ನಂತರದ ದಿನಗಳಲ್ಲಿ ಗಡ್ಕರಿ ಮಾಲೀಕತ್ವದ `ಪೂರ್ತಿ~ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದೆ. ಈ ಸಂಸ್ಥೆಯಲ್ಲಿರುವ ಹಲವಾರು ಕಂಪೆನಿಗಳು ಖೊಟ್ಟಿ ಮಾಲೀಕರು ಮತ್ತು ಹೂಡಿಕೆದಾರರನ್ನು ಹೊಂದಿದೆ ಎನ್ನುವುದು ಇನ್ನೊಂದು ಆರೋಪ. ಈ ಎಲ್ಲ ಆರೋಪಗಳ ವಿರುದ್ಧ ತನಿಖೆ ನಡೆಯಲಿ ಎಂದು ನಿತಿನ್ ಗಡ್ಕರಿ ಹೇಳಿರುವುದು ಸ್ವಾಗತಾರ್ಹ. ಆದರೆ ಇಷ್ಟೇ ಸಾಕೆ? ಗಡ್ಕರಿ ಅವರು ಈಗಿರುವ ಸ್ಥಾನದಲ್ಲಿ ಮುಂದುವರಿಯಲು ದೇಶದ ಯಾವ ಕಾನೂನೂ ಅಡ್ಡ ಬರುವುದಿಲ್ಲ ಎನ್ನುವುದು ನಿಜ. ಆದರೆ ಅವರೊಬ್ಬ ಸಾಮಾನ್ಯ ರಾಜಕೀಯ ಕಾರ್ಯಕರ್ತ ಅಲ್ಲ, ದೇಶದ ಮುಖ್ಯ ವಿರೋಧಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಆ ಸ್ಥಾನದಲ್ಲಿ ಕೂತಿರುವವರು ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿರಬೇಕು. ಅಂತಹ ಸ್ಥಾನದಲ್ಲಿ ಕಳಂಕಿತರೊಬ್ಬರನ್ನು ಕೂರಿಸಿದರೆ ಕಾರ್ಯಕರ್ತರಿಗೆ ಏನು ಸಂದೇಶ ನೀಡಿದಂತಾಗುವುದು? ಬೇರೆ ಪಕ್ಷಗಳಿಗೆ ಸೇರಿರುವವರನ್ನು ಬಿಟ್ಟುಬಿಡಿ, ತಮ್ಮ ಪಕ್ಷಕ್ಕೆ ಸೇರಿರುವ ಮಂತ್ರಿಗಳೋ,ಮುಖ್ಯಮಂತ್ರಿಗಳೋ ಭ್ರಷ್ಟರಾದರೆ ಅಂತಹವರನ್ನಾದರೂ ಪ್ರಶ್ನಿಸುವ ನೈತಿಕ ಅಧಿಕಾರವಾದರೂ ಕಳಂಕಿತ ಅಧ್ಯಕ್ಷರಿಗೆಲ್ಲಿರುತ್ತದೆ? ಈ ಪರಿಣಾಮಗಳ ಅರಿವಿದ್ದೂ ಕೂಡಾ `ಉಳಿದೆಲ್ಲ ಪಕ್ಷಗಳಿಂದ ನಮ್ಮ ಪಕ್ಷ ಭಿನ್ನ~ ಎಂದು ಹೇಳಿಕೊಂಡು ಬಂದಿರುವ ಬಿಜೆಪಿ ಮಾತ್ರವಲ್ಲ, ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿಯವರಂತಹವರೂ ಗಡ್ಕರಿ ಬೆಂಬಲಕ್ಕೆ ನಿಂತಿರುವುದು ವಿಷಾದನೀಯ. ಬಿಜೆಪಿಯ ಮೇಲೆ ನೈತಿಕ ಅಧಿಕಾರವನ್ನು ಚಲಾಯಿಸುತ್ತಾ ಬಂದಿರುವ ಆರ್‌ಎಸ್‌ಎಸ್ ಮೌನಕ್ಕೆ ಶರಣಾಗಿರುವುದು ಅದರ ಆತ್ಮವಂಚನೆಯ ನಡವಳಿಕೆಯನ್ನು ತೋರಿಸುತ್ತದೆ. ಆರ್‌ಎಸ್‌ಎಸ್ ಅಭ್ಯರ್ಥಿಯಾಗಿಯೇ ನಿತಿನ್ ಗಡ್ಕರಿ ಅಧ್ಯಕ್ಷ ಸ್ಥಾನಕ್ಕೇರಿದವರೆನ್ನುವುದನ್ನು ಮರೆಯಬಾರದು. ಈಗಿನ ಬೆಳವಣಿಗೆಗಳನ್ನು ನೋಡಿದರೆ ಗಡ್ಕರಿ ಅವರ ಜತೆ ಆರ್‌ಎಸ್‌ಎಸ್‌ನ ಪ್ರಾಮಾಣಿಕತೆಯನ್ನೂ ಪ್ರಶ್ನಿಸಬೇಕಾಗುತ್ತದೆ. ಈ ಮುಜುಗರದಿಂದ ಮುಕ್ತಿಪಡೆಯಲು ಇರುವ ಏಕೈಕ ಮಾರ್ಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ. ಆ ಕೆಲಸವನ್ನು ನಿತಿನ್ ಗಡ್ಕರಿ ಮೊದಲು ಮಾಡಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.