ತಾರತಮ್ಯ ತಪ್ಪಿಸಿ ಎಚ್‌ಐವಿ ಸೋಂಕಿನ ಕುರಿತಂತೆ ಸಮಾಜದಲ್ಲಿರುವ ಪೂರ್ವಗ್ರಹಗಳು ಇನ್ನೂ ಮಾಯವಾಗಿಲ್ಲ. ಇದಕ್ಕೆ ಪುರಾವೆ ಎಂಬಂತೆ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ಸುಮಾರು 60 ಎಚ್‌ಐವಿ ಪೀಡಿತ ಮಕ್ಕಳಿಗೆ ಶಾಲಾ ಪ್ರವೇಶ ನಿರಾಕರಿಸಲಾಗಿದೆ ಎಂಬುದು ಆತಂಕದ ಸಂಗತಿ. 2008-09ರಿಂದ 2011-12ರವರೆಗಿನ ಅವಧಿಯಲ್ಲಿ ನಡೆದಿರುವ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಈ ಪ್ರಕರಣಗಳನ್ನು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ) ದಾಖಲಿಸಿದೆ. ವಿಪರ್ಯಾಸ ಎಂದರೆ 2010ರ ಏಪ್ರಿಲ್‌ನಿಂದ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕು ಒದಗಿಸುವ ಕಾನೂನು ರಾಷ್ಟ್ರದಲ್ಲಿ ಜಾರಿಯಾಗಿದೆ. ಈ ಪ್ರಕಾರ ಆರರಿಂದ 14 ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕು ದೊರೆತಿದೆ. ಹೀಗಿದ್ದೂ ಎಚ್‌ಐವಿ ಸೋಂಕು ಹೊಂದಿದ ಮಕ್ಕಳು ತಾರತಮ್ಯ ಅನುಭವಿಸಬೇಕಾಗಿ ಬಂದಿರುವುದು ನಾಚಿಕೆಗೇಡು. ಇಂತಹ ಪ್ರಕರಣಗಳ ನಿರ್ವಹಣೆಗೆ ಯಾವುದೇ ಸ್ಪಷ್ಟ ನೀತಿ ಇಲ್ಲ ಎಂಬಂತಹ ಅಸಹಾಯಕತೆಯನ್ನು ಸಿಬಿಎಸ್‌ಇ (ಸೆಕೆಂಡರಿ ಶಿಕ್ಷಣದ ಕೇಂದ್ರೀಯ ಮಂಡಳಿ) ವ್ಯಕ್ತಪಡಿಸುತ್ತದೆ. ವಾಸ್ತವವಾಗಿ ಶಿಕ್ಷಣದ ಹಕ್ಕು ಕಾಯಿದೆ ಎಲ್ಲಾ ಬಗೆಯ ತಾರತಮ್ಯಗಳನ್ನೂ ನಿಷೇಧಿಸುತ್ತದೆ. ಈ ಕಾಯಿದೆಯ ಅನುಷ್ಠಾನದ ಹೊಣೆ ಹೊರಬೇಕಿರುವುದು ರಾಜ್ಯ ಸರ್ಕಾರಗಳು. ವಿಪರ್ಯಾಸ ಎಂದರೆ ನೆರೆಯ ಆಂಧ್ರಪ್ರದೇಶದಲ್ಲಿ ಎಚ್‌ಐವಿ ಸೋಂಕು ಇರುವ 27 ಮಕ್ಕಳಿಗೆ ಶಾಲಾ ಪ್ರವೇಶ ನಿರಾಕರಿಸಲಾಗಿದೆ. ಆ ಮೂಲಕ, ಈ ವಿಚಾರದಲ್ಲಿ ರಾಷ್ಟ್ರದಲ್ಲೇ ಮೊದಲ ಸ್ಥಾನ ಪಡೆದ ಕುಖ್ಯಾತಿ ಪಡೆದುಕೊಂಡಿದೆ . ಪಶ್ಚಿಮ ಬಂಗಾಳದಲ್ಲಿ ಇಂತಹ 13 ಪ್ರಕರಣಗಳು ವರದಿಯಾಗಿದ್ದು ಈ ನಿಟ್ಟಿನಲ್ಲಿ ಎರಡನೇ ಸ್ಥಾನ ಗಳಿಸಿದೆ ಎಂದು ನ್ಯಾಕೊ ವರದಿಗಳು ಹೇಳುತ್ತವೆ. ಹರಿಯಾಣದಲ್ಲಿ ಒಂಬತ್ತು, ಕೇರಳದಲ್ಲಿ ನಾಲ್ಕು, ಉತ್ತರ ಪ್ರದೇಶದಲ್ಲಿ ಮೂರು ಹಾಗೂ ಮಹಾರಾಷ್ಟ್ರದಲ್ಲಿ ಇಂತಹ ಒಂದು ಪ್ರಕರಣ ವರದಿಯಾಗಿದೆ. ಆದರೆ ವಾಸ್ತವ ಅಂಕಿಅಂಶಗಳು ನ್ಯಾಕೊ ಸಂಗ್ರಹಿಸಿರುವ ಈ ಮಾಹಿತಿಗಿಂತ ಹೆಚ್ಚಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತದೆ. ಎಚ್‌ಐವಿ/ಏಡ್ಸ್ ಇರುವ ಮಕ್ಕಳನ್ನು ಘನತೆ ಹಾಗೂ ಗೌರವದಿಂದ ಕಾಣುವಂತಹ ಸಂವೇದನಾಶೀಲತೆಯನ್ನು ಬೆಳೆಸುವುದಕ್ಕಾಗಿ ಶಾಲಾ ಶಿಕ್ಷಕರು ಹಾಗೂ ಪ್ರಿನ್ಸಿಪಾಲರುಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಿರುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವೇನೊ ಹೇಳಿಕೊಳ್ಳುತ್ತದೆ. ಹೀಗಿದ್ದೂ ತಾರತಮ್ಯಗಳಿಗೆ ಗುರಿಯಾಗುತ್ತಿರುವ ಇಂತಹ ಮಕ್ಕಳಿಗೆ ಯಾವುದೇ ಕಾನೂನಿನ ರಕ್ಷಣೆ ಇಲ್ಲ. ಈ ಕೊರತೆಯನ್ನು ಮನಗಂಡಿರುವ ಕೇಂದ್ರ ಸರ್ಕಾರ ಈ ಸಂಬಂಧದಲ್ಲಿ ಈಗ ಮಸೂದೆಯೊಂದನ್ನು ಸಿದ್ಧಪಡಿಸಿರುವುದು ಸ್ವಾಗತಾರ್ಹ. `ಶಾಲೆಗಳಲ್ಲಿ ತಾರತಮ್ಯ ಪೋಷಿಸುವ ಆಚರಣೆಗಳ ನಿಷೇಧ ಮಸೂದೆ 2012~ರ ಪ್ರಕಾರ, ಎಚ್‌ಐವಿ ಸೋಂಕು ಇರುವ ಮಕ್ಕಳಿಗೆ ಶಾಲಾ ಪ್ರವೇಶ ನಿಷೇಧ ಅಥವಾ ಅಂತಹ ಮಕ್ಕಳನ್ನು ಶಾಲೆಯಿಂದ ಹೊರಹಾಕುವ ಕ್ರಮಗಳು ಶಿಕ್ಷಾರ್ಹ ಅಪರಾಧವಾಗಲಿದೆ. ಎಚ್‌ಐವಿ ಸೋಂಕು ಹೊಂದಿದ ಮಕ್ಕಳ ಶಿಕ್ಷಣದ ಹಕ್ಕು ರಕ್ಷಣೆಗಾಗಿ ಈ ನಿರ್ದಿಷ್ಟ ವ್ಯಾಖ್ಯೆಯನ್ನು ಇದೇ ಮೊದಲ ಬಾರಿಗೆ ರೂಪಿಸಿರುವುದು ಸಕಾರಾತ್ಮಕವಾದ ಹೆಜ್ಜೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.