ಯೂನಿಕೋಡ್ ಶಿಷ್ಟತೆ ಜಾರಿಯಾಗಲಿ 57ನೇ ಕನ್ನಡ ರಾಜ್ಯೋತ್ಸವವನ್ನು ನಾಡಿನಲ್ಲಿ ಆಚರಿಸಲಾಗಿದೆ. ಪ್ರಶಸ್ತಿ ವಿತರಣೆ, ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಂಥ ಸಂಭ್ರಮಾಚರಣೆಗಳಲ್ಲಿ ಕನ್ನಡ ಪರ ಭಾವಾವೇಶಗಳು ಎಂದಿನಂತೆ ವ್ಯಕ್ತವಾಗಿವೆ. `ಕನ್ನಡವೆನೆ ಕುಣಿದಾಡುವುದೆನ್ನೆದೆ~ ಎಂಬುದು ಕವಿವಾಣಿ. ಈ ಭಾವ ತನ್ಮಯತೆ ಖಂಡಿತಾ ಇಂದು ನಮಗೆ ಬೇಕಾಗಿದೆ. ಆದರೆ ಈ ಭಾವುಕತೆ, ಸಂಭ್ರಮಾಚರಣೆಗಳಷ್ಟರಿಂದಲೇ ಕನ್ನಡದ ಅಭಿವೃದ್ಧಿಯನ್ನು ಸಾಧಿಸುವುದು ಸಾಧ್ಯವಿಲ್ಲ. ಹನ್ನೆರಡು ಸಾವಿರಕ್ಕೂ ಹೆಚ್ಚು ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವಂತಹ ಆತಂಕದ ಸ್ಥಿತಿ ಇಂದು ನಿರ್ಮಾಣವಾಗಿದೆ. ಇದಕ್ಕೆ ಕಾರಣ ಪ್ರೊ. ಆರ್. ಗೋವಿಂದ ಸಮಿತಿ ನೀಡಿರುವಂತಹ ಅವೈಜ್ಞಾನಿಕ ವರದಿ. ಈ ಬಗ್ಗೆ ಎಲ್ಲೆಡೆ ವ್ಯಕ್ತವಾಗಿರುವ ಪ್ರತಿರೋಧವನ್ನು ಗಮನಕ್ಕೆ ತಂದುಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಈ ಬಗ್ಗೆ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುವುದಿಲ್ಲವೆಂಬ ಭರವಸೆಯನ್ನು ಬೆಂಗಳೂರಿನಲ್ಲಿ ನಡೆದ ಕನ್ನಡ ಪುಸ್ತಕಗಳ ಬಿಡುಗಡೆ ಸಮಾರಂಭವೊಂದರಲ್ಲಿ ನೀಡಿರುವುದು ಆಶಾಭಾವವನ್ನು ಚಿಗುರಿಸಿದೆ. ಆದರೆ ಇದು ವೇದಿಕೆಯ ಮೇಲಿನ ಭರವಸೆಯಾಗಿಯಷ್ಟೇ ಉಳಿಯಬಾರದು. ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದು ಎಂದರೆ ಅದು ಹಳ್ಳಿಗಳ ಬಡಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡಂತೆ ಎಂಬುದು ಸರ್ಕಾರಕ್ಕೆ ನೆನಪಿರಬೇಕು. ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರಂತೂ ಮಾಹಿತಿತಂತ್ರಜ್ಞಾನದ (ಐಟಿ) ರಾಜಧಾನಿ ಎಂಬಂಥ ಹೆಗ್ಗಳಿಕೆ ಹೊಂದಿದೆ. ಆದರೆ ಕಂಪ್ಯೂಟರ್ ಕನ್ನಡ ನುಡಿಗಿನ್ನೂ ಜಾಗತಿಕ ಶಿಷ್ಟತೆ ಇಲ್ಲದಿರುವುದು ದುರಂತ. ಯೂನಿಕೋಡ್ ಅನ್ನು ಕನ್ನಡದ ಶಿಷ್ಟತೆಯೆಂದು ಅಧಿಸೂಚನೆ ಹೊರಡಿಸಬೇಕೆಂದು ಡಾ. ಚಿದಾನಂದ ಗೌಡ ಅಧ್ಯಕ್ಷತೆಯ ತಂತ್ರಾಂಶ ಅಭಿವೃದ್ಧಿ ಸಮಿತಿ ಶಿಫಾರಸು ಸಲ್ಲಿಸಿ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಆದರೆ ಸರ್ಕಾರ ಮಾತ್ರ ಇನ್ನೂ ಮೀನ ಮೇಷ ಎಣಿಸುತ್ತಿದೆ. ರಾಜ್ಯದ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಕನ್ನಡದ ಪ್ರಮಾಣ ಶೇ 7ರಷ್ಟು ಮಾತ್ರವಿದೆ. ಉಳಿದ ಶೇ 93ರಷ್ಟು ತುಂಬಿರುವುದು ಇಂಗ್ಲಿಷ್ ಎಂಬುದು `ಆಡಳಿತದಲ್ಲಿ ಕನ್ನಡ~ ಎಂಬ ಮಾತನ್ನೇ ಅರ್ಥಹೀನವಾಗಿಸಿಬಿಟ್ಟಿದೆ. `ನುಡಿ~ ತಂತ್ರಾಂಶವನ್ನು ಕನ್ನಡದ ಶಿಷ್ಟತೆಯಾಗಿ ಬಳಸಬೇಕು ಎಂದು ಹತ್ತು ವರ್ಷಗಳಿಗೂ ಹಿಂದೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು ನಿಜ. ಆದರೆ `ನುಡಿ~ ತಂತ್ರಾಂಶ ಬದಲಾದ ಕಾಲದ ಅಗತ್ಯಗಳಿಗೆ ಸೂಕ್ತವಾಗಿಲ್ಲ. ಆದ್ದರಿಂದ ಯೂನಿಕೋಡ್ ಶಿಷ್ಟತೆಗಾಗಿ ಹಿರಿಯ ಸಾಹಿತಿಗಳಾದ ದಿವಂಗತ ಪೂರ್ಣಚಂದ್ರ ತೇಜಸ್ವಿ ಹಾಗೂ ಚಂದ್ರಶೇಖರ ಕಂಬಾರ ಅವರು ಸರ್ಕಾರವನ್ನು ಒತ್ತಾಯಿಸ್ದ್ದಿದರೂ ಈ ವಿಚಾರ ನೆನೆಗುದಿಗೆ ಸಿಲುಕಿದೆ. ಈಗ ಸಂಸತ್ ಸದಸ್ಯ ಅನಂತಕುಮಾರ್ ಈ ವಿಚಾರದಲ್ಲಿ ಆಸ್ಥೆ ತೋರಿದ್ದು ಈ ವಿಚಾರವನ್ನು ಇತ್ಯರ್ಥಪಡಿಸುವ ಭರವಸೆಯಂತೂ ನೀಡಿದ್ದಾರೆ. ಯಾವುದೇ ತಂತ್ರಾಂಶದ ಅಗತ್ಯವಿಲ್ಲದೆ ಅಂತರ್ಜಾಲದಲ್ಲಿ ಕನ್ನಡದ ಕಡತಗಳನ್ನು ಸುಲಭವಾಗಿ ಹುಡುಕಬಹುದಾದ ಯೂನಿಕೋಡ್ ಇಂದಿನ ದಿನಗಳ ಅಗತ್ಯ. ಸರ್ಕಾರದ ವೆಬ್‌ಸೈಟುಗಳಿಂದ ಹಿಡಿದು ಜ್ಞಾನದ ಎಲ್ಲ ಮೂಲಗಳೂ ಯೂನಿಕೋಡ್‌ನಲ್ಲಿ ಲಭ್ಯವಾಗುವುದಾದರೆ ಮಾಹಿತಿಯ ಹಕ್ಕು ಎಂಬ ಪರಿಕಲ್ಪನೆಗೆ ಅರ್ಥ ಬರುತ್ತದೆ. ಈ ಕಂಪ್ಯೂಟರ್ ಯುಗದಲ್ಲಿ ಕನ್ನಡದ ಅಭಿವೃದ್ಧಿಗೆ ತಂತ್ರಜ್ಞಾನದ ಮಹತ್ವವನ್ನು ನಮ್ಮ ಸರ್ಕಾರ ಅರಿತುಕೊಳ್ಳಬೇಕು. ರಾಜ್ಯೋತ್ಸವದ ಸಂದರ್ಭದಲ್ಲಿ ತೋರಿಸಿರುವಂತಹ ಉತ್ಸಾಹ ಹಾಗೂ ಭರವಸೆಯ ನುಡಿಗಳು ಕಾರ್ಯರೂಪಕ್ಕಿಳಿಯಲಿ ಎಂಬುದೇ ಸಮಸ್ತ ಕನ್ನಡಿಗರ ಹಂಬಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.