ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂಡೋಸಲ್ಫಾನ್ ಕೀಟನಾಶಕದ ವೈಮಾನಿಕ ಸಿಂಪಡಣೆಯಿಂದ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 5221 ಮಂದಿ ಸಂತ್ರಸ್ತರಾಗಿದ್ದಾರೆ ಎಂಬ ಆತಂಕಕಾರಿ ಅಂಶ ಜಿಲ್ಲಾಡಳಿತ ನಡೆಸಿದ ಹೊಸ ಸಮೀಕ್ಷೆಯಿಂದ ಖಚಿತವಾಗಿದೆ. 103 ಗ್ರಾಮಗಳಲ್ಲಿ ನಡೆದ ಸಮೀಕ್ಷೆಯ ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯೇ ಅಲ್ಲದೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಎಂಡೋಸಲ್ಫಾನ್ ಸಿಂಪಡಣೆ ನಡೆದಿದೆ. ಅಲ್ಲೆಲ್ಲ ಸಮೀಕ್ಷೆ ನಡೆದರೆ, ಒಟ್ಟು 10ರಿಂದ 15 ಸಾವಿರ ಎಂಡೊ ಸಂತ್ರಸ್ತರು ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಗಂಭೀರವಾಗಿ ಪರಿಗಣಿಸಬೇಕಾದ ಕಳವಳಕಾರಿ ಸಂಗತಿ. 1980-2000 ನಡುವೆ ರಾಜ್ಯದ ಕರಾವಳಿ ಭಾಗದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಗೇರು ತೋಟಗಳಿಗೆ ಹೆಲಿಕಾಪ್ಟರ್ ಮೂಲಕ ಅತ್ಯಂತ ಅಪಾಯಕಾರಿಯಾದ ಎಂಡೋಸಲ್ಫಾನ್ ಕೀಟನಾಶಕ ಸಿಂಪಡಿಸಲಾಗಿತ್ತು. 1982ರಲ್ಲಿ ನಿಗಮವು ಒಂದು ಪತ್ರಿಕಾ ಜಾಹೀರಾತು ನೀಡಿ, ಈ ಕೀಟನಾಶಕ ಅತ್ಯಂತ ಅಪಾಯಕಾರಿ ವಿಷ, ಸಿಂಪಡಣೆಯ ಒಂದು ವಾರ ಕಾಲ ಜನ, ಜಾನುವಾರುಗಳನ್ನು ಗೇರು ತೋಟದ ಸಮೀಪ ಹೋಗಲು ಬಿಡಬಾರದು ಎಂದು ತಿಳಿಸಿತ್ತು. ಇಂತಹ ಪತ್ರಿಕಾ ಜಾಹೀರಾತಿನ ಹೊರತು ಬೇರಾವುದೇ ಮುನ್ಸೂಚನೆ ನೀಡದೆ ಕೀಟನಾಶಕದ ಸಿಂಪಡಣೆ ಗೇರು ತೋಟಗಳಲ್ಲಿ ನಡೆಯುತ್ತಿತ್ತು. ಆದರೆ ಅಂದು ಪತ್ರಿಕೆಗಳನ್ನು ಓದುತ್ತಿದ್ದವರ ಸಂಖ್ಯೆ ಕಡಿಮೆ. ಕರಾವಳಿಯ ಜನತೆ ಇಂದು ಅನುಭವಿಸುತ್ತಿರುವುದು ಅದರ ದುಷ್ಪರಿಣಾಮ. ಹಾಸಿಗೆಯಲ್ಲಿ ಮಲಗಿಯೇ ಇರುವ, ಬುದ್ಧಿಮಾಂದ್ಯರಾದ, ಕೈಕಾಲು ಕಳೆದುಕೊಂಡವರೇನೋ ಸಮೀಕ್ಷೆಯ ವೇಳೆ ಸಿಗುತ್ತಾರೆ, ಪುರುಷತ್ವ ಕಳೆದುಕೊಂಡ, ಇತರ ಗುಪ್ತರೋಗಗಳಿಗೆ ಒಳಗಾದ ಅದೆಷ್ಟೋ ಮಂದಿ ತಮ್ಮ ದೌರ್ಬಲ್ಯ ಹೇಳಿಕೊಳ್ಳಲು ಸಾಧ್ಯವಾಗದೆ ಕೊರಗುತ್ತಿದ್ದಾರೆ. ಕೇರಳದಲ್ಲಿ ಎಂಡೊ ಸಂತ್ರಸ್ತರಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೀಡಿದ ಸೂಚನೆಯಂತೆ ಪರಿಹಾರ ನೀಡುವ ಕಾರ್ಯ ಆರಂಭವಾಗಿದೆ. ಪ್ರತಿಯೊಬ್ಬ ಸಂತ್ರಸ್ತರಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡುವುದು, 2 ಲಕ್ಷ ರೂಪಾಯಿ ಠೇವಣಿ ಇಟ್ಟು ಅದರಲ್ಲಿ ಬರುವ ಬಡ್ಡಿಯಿಂದ ಪ್ರತಿ ತಿಂಗಳು 3 ಸಾವಿರ ರೂಪಾಯಿ ಮಾಸಾಶನ ನೀಡುವ ಕ್ರಮಕ್ಕೆ ಕೇರಳ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಂತ ಹಂತವಾಗಿ ಈ ಪರಿಹಾರ ಕ್ರಮ ಜಾರಿಗೆ ಬರತೊಡಗಿದೆ. ಆದರೆ ರಾಜ್ಯದಲ್ಲಿ ಕೇವಲ 211 ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಿದ್ದು, ಹಾಗೂ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಮತ್ತು ಪುತ್ತೂರು ತಾಲ್ಲೂಕಿನ ಆಲಂಕಾರಿನಲ್ಲಿ ಪಾಲನಾ ಕೇಂದ್ರ ಸ್ಥಾಪಿಸಿದ್ದು ಬಿಟ್ಟರೆ ಇದುವರೆಗೆ ಬೇರೆ ಯಾವ ಪರಿಹಾರ ಕ್ರಮವನ್ನೂ ಸರ್ಕಾರ ಕೈಗೊಂಡಿಲ್ಲ. ಒಂದೇ ಬಾರಿ ಪರಿಹಾರ ನೀಡಿ ಸುಮ್ಮನಾದರೆ ಸಾಲದು. ಮುಂದೆ ಯಾವುದೇ ಕಾರ್ಯ ನಿರ್ವಹಿಸಲು ಆಗದೆ ನಿಷ್ಕ್ರಿಯರಾಗಿರುವವರಿಗೆ ಜೀವನ ಪೂರ್ತಿ ಮಾಸಾಶನ ಸಿಗುವಂತೆ ಮಾಡಬೇಕು. ಜತೆಗೆ ಗೇರು ಅಭಿವೃದ್ಧಿ ಮಂಡಳಿಯೂ ಮಾನವ ವಂಶವಾಹಿಯ ಮೇಲೆ ಆಗಿರುವ ಆಘಾತದ ಹೊಣೆ ಹೊರುವಂತೆ ಮಾಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.