ಸಹಾಯಧನ ಇನ್ನೆಷ್ಟು ದಿನ? ಪ್ರತೀ ವರ್ಷ ನೂರು ಕನ್ನಡ ಚಲನಚಿತ್ರಗಳಿಗೆ ಸಬ್ಸಿಡಿ ನೀಡಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಭರವಸೆ ನೀಡಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಅನಾವರಣ ಮಾಡಿ ಅವರು ಚಿತ್ರರಂಗಕ್ಕೆ ಈ ಭರವಸೆ ನೀಡಿದ್ದಾರೆ. ಈಗಾಗಲೇ 75 ಚಲನಚಿತ್ರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇನ್ನೂ ಇದನ್ನು ಮುಂದುವರೆಸಿ, ತಯಾರಾಗುವ ಎಲ್ಲ ಚಿತ್ರಗಳಿಗೂ ಸಹಾಯಧನ ನೀಡಲು ಹೊರಟಿರುವುದು ಅರ್ಥಹೀನ. ಮುಖ್ಯಮಂತ್ರಿಗಳಿಗೆ ಇಂದಿನ ಚಲನಚಿತ್ರಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದಿದ್ದರೆ, ಅವರು ಜನಸಾಮಾನ್ಯರ ತೆರಿಗೆ ಹಣವನ್ನು ಈ ರೀತಿ ಪೋಲಾಗಲು ಬಿಡುತ್ತಿರಲಿಲ್ಲ ಎನಿಸುತ್ತದೆ. ಪರಭಾಷಾ ಚಿತ್ರಗಳ ಮುಂದೆ ಸ್ಪರ್ಧೆ ನೀಡಲಾಗದೆ ಕನ್ನಡ ಚಿತ್ರರಂಗ ಕುಸಿಯುವ ಸ್ಥಿತಿಯಲ್ಲಿದ್ದಾಗ, ಪುನಶ್ಚೇತನಕ್ಕಾಗಿ ಸರ್ಕಾರ ಸಹಾಯಧನ ಹಾಗೂ ಮನರಂಜನಾ ತೆರಿಗೆ ರಿಯಾಯಿತಿ ಸೌಲಭ್ಯಗಳನ್ನು ನೀಡಿತು. ಕನ್ನಡ ಚಿತ್ರರಂಗ ಕರ್ನಾಟಕದಲ್ಲೇ ನೆಲೆ ಊರಲು ಈ ಸೌಲಭ್ಯ ಬಹಳ ನೆರವಾಯಿತು. ಆದರೆ ತೆಂಗಿನ ಮರ ಹತ್ತುವವನಿಗೆ ಎಲ್ಲಿಯವರೆಗೆ ಸಹಾಯ ಮಾಡಲು ಸಾಧ್ಯ? ಕನ್ನಡ ಚಿತ್ರರಂಗದ 78 ವರ್ಷಗಳ ಬೆಳವಣಿಗೆಯ ಗತಿಯಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಎಂಟು ಕೋಟಿ ರೂಪಾಯಿ ಬಂಡವಾಳ ಹೂಡಿ ಸಿನಿಮಾ ನಿರ್ಮಿಸುತ್ತಾರೆ. ನಾಯಕನಟನಿಗೇ ಮೂರು ಕೋಟಿ ರೂಪಾಯಿವರೆಗೆ ಸಂಭಾವನೆ ನೀಡುತ್ತಾರೆ. ಸಂಬಂಧವಿರಲಿ, ಇಲ್ಲದಿರಲಿ ವಿದೇಶಗಳಿಗೆ ತೆರಳಿ ಹಾಡುಗಳನ್ನು ಚಿತ್ರೀಕರಿಸಿಕೊಂಡು ಬರುತ್ತಾರೆ. ಸಾಮಾಜಿಕ ಜವಾಬ್ದಾರಿಗಳನ್ನೇ ಮರೆತು ಐಷಾರಾಮಿ ಬದುಕಿನತ್ತ ಮುಖಮಾಡಿರುವ ಸಿನಿಮಾ ಜನ, ಕಳಪೆ ಚಿತ್ರಗಳಿಗೆ ಸರ್ಕಾರದ ನೆರವನ್ನು ಕೋರುವುದೇ ಮೂರ್ಖತನ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕನ್ನಡ ಭಾಷೆಗೆ, ಸಂಸ್ಕೃತಿಗೆ ಚಿತ್ರರಂಗದ ಜನರಿಂದ ಏನಾದರೂ ಕಾಣಿಕೆ ಕೊಟ್ಟಿದ್ದಾರೆಯೇ ಎಂದರೆ ಅದೂ ಶೂನ್ಯ. ಇಂದಿನ ಕನ್ನಡ ಚಿತ್ರಗಳು ಬಹುತೇಕ ರೀಮೇಕ್ ಚಿತ್ರಗಳು, ಹಿನ್ನೆಲೆಗಾಯಕರು ಹಿಂದಿ ಭಾಷಿಕರು, ನಟಿಯರೆಲ್ಲಾ ಮುಂಬೈನಿಂದ ಆಮದಾದವರು. ಸಂಭಾಷಣೆಯ ವಿಷಯಕ್ಕೆ ಬಂದರೆ ಅಲ್ಲಿ ಕನ್ನಡದ ಕೊಲೆಯೇ ನಡೆದುಹೋಗಿರುತ್ತದೆ. ಇದನ್ನೆಲ್ಲಾ ಇಟ್ಟುಕೊಂಡು `ಕಮರ್ಷಿಯಲ್ ದಂಧೆ~ ನಡೆಸುತ್ತಿರುವ ಕನ್ನಡ ಚಿತ್ರ ತಯಾರಕರು, ಸಹಾಯಧನಕ್ಕಾಗಿ ಹಪಹಪಿಸುತ್ತಿರುವುದು ಹಗಲು ದರೋಡೆ. ಕನ್ನಡದ ಗಾಯಕರಿಗೆ ಪ್ರೋತ್ಸಾಹ ನೀಡದ, ಕನ್ನಡ ಕಾದಂಬರಿ, ಸಾಹಿತ್ಯಕ್ಕೆ ಆದ್ಯತೆ ನೀಡದ, ಕನ್ನಡ ಸಂಸ್ಕೃತಿ ಪ್ರಸರಣಕ್ಕೆ ಕಿಂಚಿತ್ತೂ ಗಮನಕೊಡದ ಕನ್ನಡ ಚಿತ್ರ ನಿರ್ಮಾಪಕರಿಗೆ ನೀಡುತ್ತಿರುವ ಸಹಾಯಧನ ಹಾಗೂ ಮನರಂಜನಾ ತೆರಿಗೆ ರಿಯಾಯಿತಿ ಸೌಲಭ್ಯಗಳು ಜನಸಾಮಾನ್ಯರ ಹಣವನ್ನು ಪೋಲು ಮಾಡಿದಂತೆ. ಸರ್ಕಾರ ಇದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಚಿತ್ರರಂಗ ತನ್ನದೇ ಸ್ವಸಾಮರ್ಥ್ಯದಿಂದ ಬೆಳೆಯಬೇಕು. ಉತ್ತಮ ಗುಣಮಟ್ಟದ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವ ಅಗತ್ಯದ ಹಿನ್ನೆಲೆಯಲ್ಲಿ ಸಹಾಯಧನ ನೀಡುವುದನ್ನು ಯಾರೂ ವಿರೋಧಿಸುವುದಿಲ್ಲ. ಕಲಾತ್ಮಕ ಚಿತ್ರಗಳ ನಿರ್ಮಾಣ ನಮ್ಮಲ್ಲಿ ಕಡಿಮೆಯಾಗಿದೆ. ಸಾಮಾಜಿಕ ಕಾಳಜಿ ಇರುವ, ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಗಹನವಾಗಿ ಚಿಂತಿಸುವ ಚಿತ್ರಗಳಿಗೆ ಪ್ರೇಕ್ಷಕರೇ ಇರುವುದಿಲ್ಲ.. ಆದರೆ ಅಂತಹ ಚಿತ್ರ ಚಳವಳಿ ನಿಲ್ಲಬಾರದು ಎನ್ನುವ ಕಾರಣಕ್ಕೆ ಅಂತಹ ಚಿತ್ರಗಳಿಗೆ ಸಹಾಯಧನ ನೀಡುವುದು ವಿಹಿತ. ತಯಾರಾಗುವ ಎಲ್ಲ ಚಿತ್ರಗಳಿಗೂ ಸಹಾಯಧನ ನೀಡಲೇ ಬೇಕು ಎನ್ನುವ ನಿರ್ಮಾಪಕರ ಆಸೆಬುರುಕತನಕ್ಕೆ ಸರ್ಕಾರ ಇಂಬುಕೊಡಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.