ಲೋಪಗಳನ್ನು ತಕ್ಷಣ ಸರಿಪಡಿಸಿ ದೇಶದಲ್ಲಿ ಚುನಾವಣಾ ವ್ಯವಸ್ಥೆ ಜಾರಿಗೆ ಬಂದು ಆರು ದಶಕಗಳೇ ಕಳೆದರೂ ಕನಿಷ್ಠ ಮತದಾರರ ಪಟ್ಟಿಯನ್ನು ದೋಷರಹಿತವಾಗಿ ರಚಿಸಲು ಕೂಡಾ ಸಾಧ್ಯವಾಗುತ್ತಿಲ್ಲ ಎನ್ನುವುದು ನಮ್ಮ ಆಡಳಿತಗಾರರ ಅದಕ್ಷತೆಗೆ ಹಿಡಿದ ಕನ್ನಡಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 27 ವಿಧಾನಸಭಾ ಕ್ಷೇತ್ರಗಳ ಸುಮಾರು 10 ಲಕ್ಷ ಮತದಾರರ ಹೆಸರು ಮಾಯವಾಗಿರುವುದು ಚುನಾವಣಾ ಆಯೋಗ ಮಾಡುತ್ತಾ ಬಂದಿರುವ ಅವಾಂತರಗಳಿಗೆ ಇತ್ತೀಚಿನ ಉದಾಹರಣೆ. ಇಷ್ಟು ಮಾತ್ರವಲ್ಲ ಮತದಾರರ ಪಟ್ಟಿಯನ್ನು ಪರಿಷ್ಕರಿಸುವಾಗ ಅನೇಕ ದೋಷಗಳು ನುಸುಳಿವೆ. ಕೆಲವು ಮತದಾರರ ವಯಸ್ಸನ್ನು ತಪ್ಪಾಗಿ ನಮೂದಿಸಲಾಗಿದ್ದರೆ, ಇನ್ನು ಕೆಲವರ ವಿಳಾಸಗಳು ಬದಲಾಗಿವೆ. ಈ ದೋಷಗಳನ್ನು ಸರಿಪಡಿಸಲು ಆಯೋಗಕ್ಕೆ ಆದೇಶ ನೀಡುವಂತೆ ಕೋರಿ ಜಾಗೃತ ಮತದಾರರೊಬ್ಬರು ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಚುನಾವಣಾ ಆಯೋಗದ ಸಿಬ್ಬಂದಿ ಪ್ರತಿಯೊಂದು ಮನೆಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಿ ಅರ್ಹ ಮತದಾರರನ್ನು ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮ ಇದ್ದರೂ ಯಾರೂ ಅದನ್ನು ಪಾಲನೆ ಮಾಡಿದಂತೆ ಕಾಣುವುದಿಲ್ಲ. ಎರಡು ವರ್ಷಗಳ ಹಿಂದೆಯೇ ಕೇಂದ್ರ ಚುನಾವಣಾ ಆಯೋಗ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ದೋಷರಹಿತ ಮತದಾರರ ಪಟ್ಟಿಯನ್ನು ರೂಪಿಸುವಂತೆ ಆದೇಶ ನೀಡಿದ್ದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ರಾಜ್ಯದ ಮತದಾರರ ಪಟ್ಟಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹೆಸರು ಬಿಟ್ಟುಹೋಗಿರುವುದು ವ್ಯಾಪಕ ಟೀಕೆಗೊಳಗಾಗಿತ್ತು. ಚುನಾವಣೆಗಿಂತ ಸಾಕಷ್ಟು ಮುಂಚಿತವಾಗಿಯೇ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಕರಡು ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಬೇಕೆಂಬ ನಿಯಮ ಇದ್ದರೂ ಅದು ಪಾಲನೆಯಾಗದಿರುವುದು ಇದಕ್ಕೆ ಕಾರಣ. ಬಹಳಷ್ಟು ಸಂದರ್ಭಗಳಲ್ಲಿ ಚುನಾವಣಾ ಆಯೋಗ ಮತ್ತು ಸರ್ಕಾರದ ಇತರ ಇಲಾಖೆಗಳ ನಡುವಿನ ಹೊಂದಾಣಿಕೆಯಲ್ಲಿನ ಕೊರತೆಯಿಂದಾಗಿಯೂ ತಪ್ಪುಗಳಾಗುತ್ತಿವೆ. ಇದನ್ನೇ ದುರ್ಬಳಕೆ ಮಾಡಿಕೊಂಡು ಅಲ್ಲಲ್ಲಿ ನಕಲಿ ಮತದಾನ ನಡೆಯುತ್ತಿರುವುದು ನೋಡಿದರೆ ರಾಜಕೀಯ ಪಕ್ಷಗಳು ದುರುದ್ದೇಶದಿಂದಲೇ ಇಂತಹ ಲೋಪವನ್ನು ಉಳಿಸಿಕೊಂಡು ಹೋಗುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಈಗ ಬಯಲಿಗೆ ಬಂದಿರುವುದು ಬೆಂಗಳೂರು ನಗರದ ಮತದಾರರ ಪಟ್ಟಿಯಲ್ಲಿನ ದೋಷಗಳು. ನಗರದ ಸ್ಥಿತಿಯೇ ಹೀಗಾದರೆ ಗ್ರಾಮಾಂತರ ಪ್ರದೇಶಗಳಲ್ಲಿನ ಅವಾಂತರಗಳನ್ನು ಸುಲಭದಲ್ಲಿ ಊಹಿಸಿಕೊಳ್ಳಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರ್ಣಾಯಕವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತದಾರರಿಗೆ ಮತದಾನವೊಂದೇ ಇರುವ ಅವಕಾಶ. ದೋಷಪೂರಿತ ಮತದಾರರ ಪಟ್ಟಿಯಿಂದಾಗಿ ಅಂತಹ ಅವಕಾಶದಿಂದಲೂ ವಂಚಿತರನ್ನಾಗಿ ಮಾಡುವುದು ದ್ರೋಹದ ಕೆಲಸ. ಆಧುನಿಕವಾದ ತಂತ್ರಜ್ಞಾನ ಲಭ್ಯ ಇರುವ ಈ ಕಾಲದಲ್ಲಿ ದೋಷಮುಕ್ತ ಮತದಾರರ ಪಟ್ಟಿ ರಚನೆ ಹಿಂದಿಗಿಂತಲೂ ಸುಲಭ. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ಸಂಪನ್ಮೂಲದ ಕೊರತೆ ಕೂಡಾ ಇಲ್ಲ. ಇವುಗಳನ್ನೆಲ್ಲ ಬಳಸಿಕೊಂಡು ಮತದಾರರೇ ಮಾಯವಾಗಿರುವ ಈಗಿನ ಲೋಪವನ್ನು ಸರಿಪಡಿಸಲು ಆಯೋಗ ತಕ್ಷಣ ಗಮನಹರಿಸಬೇಕು. ಇದಕ್ಕೆ ಕಾರಣರಾದವರನ್ನು ತಪ್ಪಿಗೆ ಹೊಣೆಗಾರರನ್ನಾಗಿ ಮಾಡಿ ಕಠಿಣಕ್ರಮಗಳನ್ನು ಕೈಗೊಳ್ಳಲು ಕೂಡಾ ಹಿಂಜರಿಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.