ವಿದ್ಯುತ್ ನಷ್ಟಕ್ಕೆ ಕಡಿವಾಣ ಇರಲಿ ಒಂದು ಕಡೆ ವಿದ್ಯುತ್ ಅಭಾವ, ಇನ್ನೊಂದು ಕಡೆ ದರ ಏರಿಕೆಯ ಬಿಸಿ. ಇದು ರಾಜ್ಯದ ವಿದ್ಯುತ್ ಬಳಕೆದಾರರನ್ನು ಕಾಡುತ್ತಿರುವ ಸಮಸ್ಯೆ. ಇದರ ಜತೆಗೆ, ಉತ್ಪಾದನೆಯಾಗುವ ಒಟ್ಟು ವಿದ್ಯುತ್ತಿನ ಪೈಕಿ ಪ್ರಸರಣ ಮತ್ತು ವಿತರಣೆಯಲ್ಲಿ (ಟಿ ಅಂಡ್ ಡಿ) ಆಗುತ್ತಿರುವ ನಷ್ಟವೇ ಶೇ 21.59ರಷ್ಟಿದೆ ಎನ್ನುವುದು ಕಳವಳಕಾರಿ ಸಂಗತಿ. ಏಕೆಂದರೆ ಈ ನಷ್ಟವನ್ನೂ ಬಳಕೆದಾರರ ಮೇಲೇ ಹೊರಿಸಲಾಗುತ್ತದೆ ಅಥವಾ ಸರ್ಕಾರ ನೀಡುವ ಸಬ್ಸಿಡಿಯಿಂದ ಕೆಲಮಟ್ಟಿಗೆ ತುಂಬಿಕೊಳ್ಳಲಾಗುತ್ತದೆ. ಸಬ್ಸಿಡಿ ಮೊತ್ತ ಕೂಡ ಖಜಾನೆಯಿಂದಲೇ ಬರುವುದರಿಂದ ಅದು ಪರೋಕ್ಷವಾಗಿ ತೆರಿಗೆದಾರರ ಮೇಲಿನ ಹೊರೆ ಎಂದೇ ಹೇಳಬಹುದು. ಮಾಹಿತಿಯೊಂದರ ಪ್ರಕಾರ 2008ರಿಂದ ಇದುವರೆಗೆ ಕರ್ನಾಟಕದಲ್ಲಿ 35958.64 ದಶಲಕ್ಷ ಯೂನಿಟ್ ಪ್ರಮಾಣದ ವಿದ್ಯುತ್ತು ಪ್ರಸರಣ ಮತ್ತು ವಿತರಣೆ ಕಾಲಕ್ಕೆ ನಷ್ಟವಾಗಿದೆ. ಇದರ ಮೌಲ್ಯವೇ 12,444 ಕೋಟಿ ರೂಪಾಯಿ. ಆದರೆ ಇದೇ ಅವಧಿಯಲ್ಲಿ ಕೊರತೆ ನೀಗಿಸುವುದಕ್ಕಾಗಿ ಸರ್ಕಾರ ಬೇರೆಬೇರೆ ಮೂಲಗಳಿಂದ ವಿದ್ಯುತ್ ಖರೀದಿಸಲು 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ. ಒಂದು ಅರ್ಥದಲ್ಲಿ, ಖರೀದಿ ಮಾಡಿದ್ದಕ್ಕಿಂತ ಹೆಚ್ಚು ವಿದ್ಯುತ್ ನಷ್ಟವಾಗಿದೆ. ಇದು ಒಳ್ಳೆಯ ಲಕ್ಷಣವಂತೂ ಖಂಡಿತ ಅಲ್ಲ.ವಿದ್ಯುತ್ ಸಾಗಣೆ ಮತ್ತು ವಿತರಣಾ ನಷ್ಟವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಸಾಧ್ಯ. ಅಮೆರಿಕದಂಥ ಮುಂದುವರಿದ ದೇಶದಲ್ಲೂ ಈ ಪ್ರಮಾಣ ಶೇ 7ರಷ್ಟಿದೆ. ಇದನ್ನು ನೋಡಿದಾಗ ನಮ್ಮಲ್ಲೂ ಸುಧಾರಣಾ ಕ್ರಮಗಳ ಮೂಲಕ ಉಳಿತಾಯ ಮಾಡಲು ಸಾಕಷ್ಟು ಅವಕಾಶಗಳಿವೆ. ವಿದ್ಯುತ್ ಸ್ವೀಕಾರ ಕೇಂದ್ರ ಮತ್ತು ಉಪ ಕೇಂದ್ರಗಳ ನಡುವೆ ಈಗ ಬಳಕೆಯಲ್ಲಿ ಇರುವ 11 ಕೆವಿ ಲೋ ಟೆನ್ಷನ್ ಬದಲು ಹೈ ಟೆನ್ಷನ್ ವಿದ್ಯುತ್ ಮಾರ್ಗ ಹಾಕುವುದು, ಎಲ್ಲ ಬಗೆಯ ವಿದ್ಯುತ್ ಬಳಕೆಗೆ ಮೀಟರ್ ಅಳವಡಿಸುವುದು, ವಿದ್ಯುತ್ ಉಪಕೇಂದ್ರಗಳಿಂದ ಗ್ರಾಹಕರ ಮನೆ ಅಥವಾ ಪಂಪ್‌ಸೆಟ್ ಸಂಪರ್ಕದ ವರೆಗೂ ಈಗಿನ 220/440 ವೋಲ್ಟ್ಸ್ ತಂತಿಗಳ ಬದಲು 11 ಕೆವಿ ಸಾಮರ್ಥ್ಯದ ಲೈನ್‌ಗಳನ್ನು ಹಾಕುವುದು, ಹೈ ವೋಲ್ಟೇಜ್ ವಿತರಣಾ ವ್ಯವಸ್ಥೆ ಜಾರಿ ಮತ್ತಿತರ ತಾಂತ್ರಿಕ ವಿಧಾನಗಳ ಮೂಲಕ ಪ್ರಸರಣ- ವಿತರಣೆ ನಷ್ಟವನ್ನು ಗಣನೀಯವಾಗಿ ತಗ್ಗಿಸಬಹುದು. ಕಡಿಮೆ ವೋಲ್ಟೇಜ್‌ನ ಮಾರ್ಗಗಳಿಂದ ಸಾಗಣೆ ನಷ್ಟ ಮಾತ್ರವಲ್ಲ ವಿದ್ಯುತ್ ಕಳ್ಳತನವೂ ಹೆಚ್ಚುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೇರವಾಗಿ ವಿದ್ಯುತ್ ಮಾರ್ಗಕ್ಕೇ ತಂತಿ ಜೋಡಿಸಿ ಅಕ್ರಮವಾಗಿ ವಿದ್ಯುತ್ ಬಳಸಿಕೊಳ್ಳುವ ಉದಾಹರಣೆಗಳು ಸಾಕಷ್ಟಿವೆ. ಇದನ್ನು ಎಚ್‌ಟಿ ಮಾರ್ಗವಾಗಿ ಪರಿವರ್ತಿಸಿದರೆ ಇಂಥ ಪ್ರವೃತ್ತಿಗೆ ಗಣನೀಯ ಕಡಿವಾಣ ಹಾಕಬಹುದು. ನೆರೆಯ ಆಂಧ್ರ ಈ ಮಾದರಿಯ ಸುಧಾರಣೆ ಅಳವಡಿಸಿ ಕೊಂಡು ನಮಗಿಂತ ಮುಂದಿದೆ. ಹೀಗಿರುವಾಗ ನಾವೇಕೆ ಹಿಂದೆ ಬೀಳಬೇಕು? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.