ಮೊಂಡುವಾದ ಬೇಡ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿವಾದಕ್ಕೆ ಇನ್ನೂ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಪರ ಮತ್ತು ವಿರೋಧಿ ಗುಂಪುಗಳ ವಾದ ಮುಸುಕಿನ ಗುದ್ದಾಟವಾಗಿದ್ದು, ಆಗಾಗ ಸಮಸ್ಯೆ ಭುಗಿಲೇಳುತ್ತಿದೆ. ಪಣಜಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ವಿಷಯ ಪ್ರಸ್ತಾಪಿಸುವ ಮೂಲಕ ನಿರ್ದೇಶಕ ಗಿರೀಶ್‌ಕಾಸರವಳ್ಳಿ, ರಾಷ್ಟ್ರಮಟ್ಟದ ಚರ್ಚೆಗೆ ವೇದಿಕೆ ಸೃಷ್ಟಿಸಿದ್ದಾರೆ. `ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವುದರಿಂದ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಅಸ್ತಿತ್ವಕ್ಕೆ ಅಪಾಯವಿದೆ ಎಂಬ ಆತಂಕ ಕರ್ನಾಟಕದ ಜನರಲ್ಲಿ ಇದೆ. ಇದರಿಂದ ರಾಜ್ಯದಲ್ಲಿ ಡಬ್ಬಿಂಗ್‌ಗೆ ವ್ಯಾಪಕವಿರೋಧ ವ್ಯಕ್ತವಾಗುತ್ತಿದೆ~ ಎಂದು ಗಿರೀಶ್‌ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ. ಡಬ್ಬಿಂಗ್‌ಗೆ ಅವಕಾಶ ನೀಡಿದರೆ ರಾಜ್ಯದಲ್ಲೇ ಚಿತ್ರೋದ್ಯಮ ಸೊರಗುತ್ತದೆ, ದಕ್ಷಿಣ ಭಾರತದ ಸಿನಿಮಾ ಪ್ರದರ್ಶನಕ್ಕೆ ರಾಜ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಅದೇ ಚಿತ್ರಗಳನ್ನು ಮತ್ತೆ ಕನ್ನಡಕ್ಕೆ ಡಬ್ ಮಾಡುವ ಅಗತ್ಯ ಇಲ್ಲ ಎಂದು ಅವರು ವಾದ ಮಂಡಿಸಿದ್ದಾರೆ. ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕರ ಬಣ ಪ್ರತಿಪಾದಿಸುತ್ತಿರುವ ಸ್ವಯಂ ಅನುಕೂಲ ಸಿಂಧು ವಾದವನ್ನೇ ಗಿರೀಶ್‌ಕಾಸರವಳ್ಳಿ ಅವರೂ ಮಂಡಿಸಿದ್ದಾರೆ. ಇದೊಂದು ಅನವಶ್ಯಕ ವಾದ. `ಡಬ್ಬಿಂಗ್ ಬೇಡ~ ಎನ್ನುವುದೇ ಅಲಿಖಿತ ಪ್ರಜಾತಂತ್ರ ವಿರೋಧಿ ಕ್ರಮ. ಕನ್ನಡ ನೆಲೆಗಟ್ಟಿನ ಮೇಲೆ ನಿಂತು ಕನ್ನಡತನವನ್ನು ರಕ್ಷಿಸಿಕೊಂಡೇ ಜ್ಞಾನ ಯಾವ ದಿಕ್ಕಿನಿಂದ ಬಂದರೂ ಅದನ್ನು ಸ್ವಾಗತಿಸುವುದು ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬುದ್ಧಿವಂತಿಕೆಯ ಕ್ರಮ. ಡಬ್ಬಿಂಗ್‌ಗೆ ಅನುವು ಮಾಡಿಕೊಟ್ಟರೆ ಕನ್ನಡ ಚಿತ್ರರಂಗ ಅವಸಾನವಾಗುತ್ತದೆ ಎನ್ನುವುದು ತಿರುಳಿಲ್ಲದ ವಾದ. ಇತರ ಭಾಷೆಗಳ ಚಿತ್ರರಂಗ ತಾಂತ್ರಿಕವಾಗಿ ಶ್ರೀಮಂತವಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ತೆರೆಯ ಮೇಲೆ ಅದ್ಭುತಗಳನ್ನು ಸೃಷ್ಟಿಸುವ ಸೃಜನಶೀಲ ಕ್ರಿಯೆ ಅಲ್ಲಿ ನಡೆಯುತ್ತದೆ. ಅಂಥ ಕೆಲಸ ಕನ್ನಡ ಚಿತ್ರರಂಗದಲ್ಲೂ ಆಗಬೇಕು. ಸವಾಲುಗಳನ್ನು ಕೃತಿಯ ಮೂಲಕ ಎದುರಿಸಲು ಕನ್ನಡ ಚಿತ್ರರಂಗ ಕಲಿಯಬೇಕು. ಕನ್ನಡ ಚಿತ್ರರಂಗ ಈಗ ಪ್ರತಿಭಾ ದಾರಿದ್ರ್ಯದಿಂದ ಬಳಲುತ್ತಿದೆ. ಹೊಸತನವಿರುವ ಚಿತ್ರಗಳನ್ನು ನಿರ್ಮಿಸಿದರೆ ಕನ್ನಡಿಗರು ಅಂತಹ ಚಿತ್ರಗಳನ್ನು ಕೈಹಿಡಿಯುತ್ತಾರೆ. ಈ ರೀತಿಯ ಹಲವಾರು ಉದಾಹರಣೆಗಳು ನಮ್ಮ ಮುಂದಿದೆ. ಚಲನಚಿತ್ರಗಳ ಡಬ್ಬಿಂಗ್ ಅಲ್ಲದೆ, ಟಿವಿ ಚಾನೆಲ್‌ಗಳಲ್ಲಿ ಡಬ್ಬಿಂಗ್‌ಗೂ ವಿರೋಧವಿದೆ. ಇತ್ತೀಚೆಗೆ ಅಮೀರ್‌ಖಾನ್ ಅವರ `ಸತ್ಯಮೇವ ಜಯತೆ~ ಕನ್ನಡ ಅವತರಣಿಕೆಗೆ ಅವಕಾಶವನ್ನೇ ಕೊಡಲಿಲ್ಲ. ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್, ಅನಿಮಲ್ ಪ್ಲಾನೆಟ್, ಡಿಸ್ಕವರಿ ಚಾನೆಲ್ ಹಾಗೂ ಕಾರ್ಟೂನ್ ನೆಟ್‌ವರ್ಕ್‌ಗಳಲ್ಲಿ ಬರುವ ಶೈಕ್ಷಣಿಕ ಕಾರ್ಯಕ್ರಮಗಳು ಹಿಂದಿ, ತೆಲುಗು, ತಮಿಳು ಮತ್ತಿತರ ಭಾಷೆಗಳಲ್ಲಿ ಡಬ್ ಆಗಿ ಆಯಾ ಭಾಷಿಕರು ಜ್ಞಾನಾರ್ಜನೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಇದುವರೆಗೆ ತಯಾರಿಸಲು ಆಗಿಲ್ಲ. ಇಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೂಡ ಕನ್ನಡದಲ್ಲಿ ನೋಡಲು ಅವಕಾಶ ಕೊಡದಿರುವ ಮೊಂಡುವಾದ ಸಹನೀಯವಲ್ಲ. ಇದು ಅವರವರ ಭಾಷೆಯ್ಲ್ಲಲೇ ನೋಡ ಬಯಸುವ ಪ್ರೇಕ್ಷಕರ ಹಕ್ಕನ್ನು ಕಸಿದುಕೊಂಡಂತೆ. ಚಲನಚಿತ್ರ ವಾಣಿಜ್ಯ ಮಂಡಳಿ ಭಾಷೆಯ ಹೆಸರಿನಲ್ಲಿ ಜನರನ್ನು ಕೆರಳಿಸುವ ಬದಲು, ವೈಚಾರಿಕ ನೆಲೆಯಲ್ಲಿ ಚಿಂತಿಸಲಿ. ಜ್ಞಾನ ಯಾವ ದಿಕ್ಕಿನಿಂದ ಬಂದರೂ ಅದನ್ನು ಸ್ವಾಗತಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.