ಅನಗತ್ಯ ಪ್ರಹಸನ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಮಸೂದೆಗೆ ರಾಜ್ಯಸರ್ಕಾರ ಗುಟ್ಟಾಗಿ ವ್ಯಕ್ತಪಡಿಸಿದ್ದ ವಿರೋಧವನ್ನು ಅವಸರದಿಂದ ಹಿಂತೆಗೆದುಕೊಂಡಿದೆ. ಇದು ಜವಾಬ್ದಾರಿಯುತ ಸರ್ಕಾರಕ್ಕೆ ಒಪ್ಪುವ ನಡವಳಿಕೆ ಅಲ್ಲ. ಕಳೆದ ಕೆಲವು ದಿನಗಳ ಅವಧಿಯಲ್ಲಿ ರಾಜ್ಯಸರ್ಕಾರ ನಡೆದುಕೊಂಡಿರುವ ರೀತಿಯೇ ರಾಜಕೀಯ ಪ್ರಹಸನದಂತಿದೆ. ಆರು ಜಿಲ್ಲೆಗಳ ಭವಿಷ್ಯಕ್ಕೆ ಸಂಬಂಧಿಸಿದ ಮಸೂದೆಯ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಮುಖ್ಯಮಂತ್ರಿಗಳು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿತ್ತು. ಮಸೂದೆ ಹೇಗಿರಬೇಕೆಂದು ಹೇಳುವ ಅಧಿಕಾರ ಖಂಡಿತ ರಾಜ್ಯ ಸರ್ಕಾರಕ್ಕೆ ಇದೆ. ಸರ್ಕಾರ ಎತ್ತಿರುವ ಆಕ್ಷೇಪಗಳು ಸುಲಭದಲ್ಲಿ ತಳ್ಳಿಹಾಕುವಂತಹದ್ದೂ ಅಲ್ಲ. ತೆಲಂಗಾಣ ಮಾದರಿಯಲ್ಲಿಯೇ ವಿಶೇಷ ಸ್ಥಾನಮಾನ ನೀಡಬೇಕೆಂದು ಕೇಳುವುದೂ ತಪ್ಪಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಒಪ್ಪಲಾಗದು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳು ರಾಜಭವನವನ್ನು ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗ ಮಾಡುತ್ತಾ ಬಂದಿರುವ ಉದಾಹರಣೆಗಳು ಕಣ್ಣಮುಂದೆ ಇರುವುದರಿಂದ ರಾಜ್ಯಪಾಲರ ಕೈಗೆ ಅಧಿಕಾರ ನೀಡುವುದನ್ನು ಸಂಶಯದಿಂದಲೇ ನೋಡಬೇಕಾಗುತ್ತದೆ. ಪ್ರತಿಬಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಜನಪ್ರತಿನಿಧಿಗಳು ರಾಜಭವನದ ಬಾಗಿಲು ಬಡಿಯಬೇಕಾದ ಪರಿಸ್ಥಿತಿ ಇರಬಾರದು. ವಿದರ್ಭ ಮಾದರಿಯಲ್ಲಿ ಇಂತಹ ವ್ಯವಸ್ಥೆ ಇದೆ ಎಂದ ಮಾತ್ರಕ್ಕೆ ಕರ್ನಾಟಕಕ್ಕೆ ಕೂಡಾ ಅದನ್ನು ಅನ್ವಯಿಸುವುದು ಸರಿ ಅಲ್ಲ. ಅನುಭವದಿಂದ ಪಾಠ ಕಲಿಯಬೇಕು. ರಾಜ್ಯಪಾಲರೇ ಅಧ್ಯಕ್ಷರಾಗಿರುವ ಅಭಿವೃದ್ಧಿ ಮಂಡಳಿ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವುದೇ ಆಗಿದ್ದರೆ ಚುನಾಯಿತ ಸರ್ಕಾರ ಯಾಕಿರಬೇಕು ಎನ್ನುವ ಪ್ರಶ್ನೆ ಸಹಜವಾದುದು. ರಾಜ್ಯ ಸರ್ಕಾರ ಸ್ವಲ್ಪ ಬುದ್ದಿವಂತಿಕೆಯಿಂದ ವರ್ತಿಸಿದ್ದರೆ ರಾಜ್ಯಪಾಲರ ವಿವಾದಾತ್ಮಕ ಪಾತ್ರವನ್ನು ರಾಜಕೀಯ ಚರ್ಚೆಯ ವಿಷಯವನ್ನಾಗಿ ಮಾಡಿ ಸಾರ್ವಜನಿಕರ ಗಮನ ಸೆಳೆಯಬಹುದಿತ್ತು. ವಿದರ್ಭ ಮಾದರಿಯಲ್ಲಿರುವ ನ್ಯೂನತೆಗಳನ್ನು ಹಿರಿಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದ ಕೂಡಲೇ ವಿರೋಧಪಕ್ಷಗಳ ನಾಯಕರ ಸಭೆ ಕರೆದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ರಾಜ್ಯದ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರ ಜತೆ ಸಮಾಲೋಚನೆ ನಡೆಸಿ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಪ್ರಯತ್ನ ಮಾಡಬಹುದಿತ್ತು. ಇದ್ಯಾವುದನ್ನೂ ಮಾಡದ ರಾಜ್ಯಸರ್ಕಾರ ಯಾವುದೋ ತಪ್ಪು ಕೆಲಸ ಮಾಡುವವರಂತೆ ರಹಸ್ಯವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸುಮ್ಮನಾಗಿದೆ. ರಾಜ್ಯಸಭಾ ಸದಸ್ಯ ವೆಂಕಯ್ಯನಾಯ್ಡು ಅಧ್ಯಕ್ಷತೆಯ ಸಂಸತ್‌ನ ಸ್ಥಾಯಿ ಸಮಿತಿ ರಾಜ್ಯಸರ್ಕಾರದ ಆಕ್ಷೇಪಕ್ಕೆ ಮಣಿದು ಮಸೂದೆಯನ್ನು ವಾಪಸು ಪಡೆಯಲು ಸೂಚಿಸಿದ ನಂತರ ಎದುರಾದ ಪ್ರತಿಭಟನೆಯಿಂದಷ್ಟೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡದ್ದು. ಇದರಿಂದಾಗಿ ತನ್ನನ್ನು ಸಮರ್ಥಿಸಿಕೊಳ್ಳಲಾಗದೆ ರಾಜ್ಯ ಸರ್ಕಾರ ಒಂಟಿಯಾಗಬೇಕಾಯಿತು. ಮೊದಲು ವಿರೋಧಿಸಿ ನಂತರ ಒಪ್ಪಿಕೊಳ್ಳಬೇಕಾದ ಮುಖಭಂಗಕ್ಕೀಡಾಗಬೇಕಾಯಿತು. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿಬಿಟ್ಟರೆ ಅದರ ಶ್ರೇಯಸ್ಸು ಕಾಂಗ್ರೆಸ್ ಪಕ್ಷದ ಪಾಲಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರ ಕೂಡಾ ರಾಜ್ಯ ಸರ್ಕಾರದ ವಿರೋಧಕ್ಕೆ ಕಾರಣ ಎಂಬ ಆರೋಪವನ್ನು ಕೂಡಾ ತಳ್ಳಿಹಾಕುವಂತಿಲ್ಲ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರದಲ್ಲಿ ಇಂತಹ ಸಣ್ಣತನದ ರಾಜಕೀಯವನ್ನು ಯಾವ ಪಕ್ಷವೂ ಮಾಡಬಾರದು.ಆಡಳಿತಾರೂಢ ಪಕ್ಷ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.