ಅತ್ಯಾಚಾರ ಅಪರಾಧ ನಿಯಂತ್ರಿಸಿ ಕೊಪ್ಪಳ ತಾಲ್ಲೂಕಿನ ಹ್ಯಾಟಿ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವಿಷಾದನೀಯ. ಮಹಿಳೆ ವಿರುದ್ಧದ ಹಿಂಸಾಚಾರ ತಡೆಗಾಗಿ ನವೆಂಬರ್ 25ರಿಂದ ಡಿಸೆಂಬರ್10ರವರೆಗೆ ಹದಿನಾರು ದಿನಗಳ ಕಾಲ ವಿವಿಧ ಬಗೆಯ ಜಾಗೃತಿ ಚಟುವಟಿಕೆಗಳನ್ನು ವಿಶ್ವದಾದ್ಯಂತ ನಡೆಸುವಂತಹ ಕಾಲಾವಧಿ ಇದು. ಇಂತಹ ಅವಧಿಯಲ್ಲೇ ಈ ಘಟನೆ ನಡೆದಿರುವುದು ವಿಪರ್ಯಾಸ. ಅತ್ಯಾಚಾರಕ್ಕೊಳಗಾದ ಯುವತಿಯ ಆತ್ಮಹತ್ಯೆಗೆ ಪ್ರೇರಕವಾಗಲು ಸೃಷ್ಟಿಯಾದಂತಹ ಕ್ರೂರ ಸನ್ನಿವೇಶಗಳಂತೂ ತೀವ್ರ ಮಾತುಗಳಲ್ಲಿ ಖಂಡನಾರ್ಹ. ತನ್ನ ಪ್ರಿಯಕರನ ಮೂವರು ಸ್ನೇಹಿತರಿಂದಲೇ ಈ ಯುವತಿ ಬ್ಲಾಕ್‌ಮೇಲ್‌ಗೆ ಒಳಗಾಗ್ದ್ದಿದಳೆನ್ನುವ ವಿಚಾರ ಆಘಾತಕಾರಿ. ಪ್ರಿಯಕರನ ಜೊತೆಗಿನ ಆಕೆಯ ಪ್ರಣಯದ ದೃಶ್ಯಗಳನ್ನು ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಈ ಮೂವರು ದುಷ್ಕರ್ಮಿಗಳು ಸೆರೆಹಿಡಿದ್ದ್ದಿದರು ಎಂದು ಆರೋಪಿಸಲಾಗಿದೆ. ಇದನ್ನು ಬ್ಲ್ಯಾಕ್‌ಮೇಲ್ ಸಾಧನವಾಗಿ ಬಳಸಿಕೊಂಡು ಯುವತಿಯ ಮೇಲೆ ಈ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದರೆನ್ನುವುದಂತೂ ಸಮಾಜ ಸಾಗುತ್ತಿರುವ ವಿಕೃತಿಯತ್ತ ಬೆರಳು ಮಾಡುತ್ತದೆ. ಅಷ್ಟೇ ಅಲ್ಲ, ಈ ದೃಶ್ಯಗಳನ್ನೂ ಮತ್ತೆ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದರೆನ್ನಲಾಗಿದೆ. ಈ ದೃಶ್ಯಗಳು ಗ್ರಾಮಸ್ಥರ ಮೊಬೈಲ್‌ಗಳಲ್ಲಿ ಹರಿದಾಡಿದ ನಂತರ, ತಪ್ಪಿತಸ್ಥ ಯುವಕರಿಗೆ ತಲಾ ರೂ 30,000 ದಂಡವನ್ನು ಗ್ರಾಮಮುಖಂಡರು ವಿಧಿಸಿದ್ದರು ಎಂದೂ ವರದಿಯಾಗಿದೆ. ಇದರಿಂದ ಆಘಾತಕ್ಕೊಳಗಾದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಇದು ಆತ್ಮಹತ್ಯೆ ಪ್ರಕರಣವಾಗಿ ಮಾತ್ರ ದಾಖಲಾಗಿದೆ. ಮಹಿಳೆ ವಿರುದ್ಧದ ದೌರ್ಜನ್ಯಗಳಲ್ಲಿ ಕಾನೂನಿನ ಪ್ರಕ್ರಿಯೆ ಸಾಗುವ ರೀತಿಗೆ ಇದು ದ್ಯೋತಕ. ಮನೆಯೊಳಗೆ, ಹೊರಗೆ ಕುಟುಂಬದ ಸದಸ್ಯರು ಅಥವಾ ಪರಿಚಿತರಿಂದಲೇ ಲೈಂಗಿಕ ದೌರ್ಜನ್ಯಗಳಿಗೆ ಮಹಿಳೆ ಒಳಗಾಗುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ವರದಿಯಾಗುತ್ತಿವೆ. ಲೈಂಗಿಕ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾಗಳಿಂದ ಚಿತ್ರೀಕರಿಸಿ ಹಂಚಿಕೊಳ್ಳುವ ಪ್ರಕ್ರಿಯೆಯೂ ಪಿಡುಗಾಗುತ್ತಿದೆ. ಹರಿಯಾಣದ ಹಿಸ್ಸಾರ್ ಗ್ರಾಮದಲ್ಲಿ ಇತ್ತೀಚೆಗಷ್ಟೇ ಇಂತಹ ಪ್ರಕರಣ ನಡೆದಿತ್ತು. ಹದಿಹರೆಯದ ಹುಡುಗಿ ಮೇಲಿನ ಸಾಮೂಹಿಕ ಅತ್ಯಾಚಾರವನ್ನು ಚಿತ್ರೀಕರಿಸಿದ್ದ ದೃಶ್ಯಗಳು ಗ್ರಾಮದ ಜನರ ಮೊಬೈಲ್ ಗಳಲ್ಲಿ ಹರಿದಾಡಿತ್ತು. ಈ ಅವಮಾನ ಸಹಿಸದ ಹುಡುಗಿಯ ತಂದೆ ಆತ್ಮಹತ್ಯೆ ಮಾಡಿಕೊಂಡ್ದ್ದಿದು ರಾಷ್ಟ್ರೀಯ ಸುದ್ದಿಯಾಗಿತ್ತು. ಆ ನಂತರವಷ್ಟೇ ಹರಿಯಾಣ ಪೊಲೀಸರು ಅತ್ಯಾಚಾರ ಮೊಕದ್ದಮೆ ದಾಖಲಿಸಿದ್ದರು. ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರುವ ಈ ಮನೋಭಾವ, ಅನೂಚಾನವಾಗಿ ನಡೆದುಕೊಂಡೇ ಬಂದಿದೆ. ಅತ್ಯಾಚಾರಗಳ ವೈಜ್ಞಾನಿಕ ತನಿಖೆಗೆ ಅಗತ್ಯವಾದ ತರಬೇತಿ, ಸಂವೇದನಾಶೀಲತೆ, ಸೌಲಭ್ಯಗಳ ಕೊರತೆಯೂ ಪೊಲೀಸ್ ವ್ಯವಸ್ಥೆಯಲ್ಲಿದೆ. ಅತ್ಯಾಚಾರ ಪ್ರಕರಣಗಳು ದಾಖಲಾದರೂ, ಶಿಕ್ಷೆಯಾಗುವ ಪ್ರಮಾಣ ಕಡಿಮೆ. ಮಹಿಳೆ ಮೇಲಿನ ಹಿಂಸಾಚಾರಗಳು ವಿಭಿನ್ನ ಸ್ವರೂಪಗಳನ್ನು ಪಡೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಕಾನೂನು ವ್ಯವಸ್ಥೆಯೊಳಗಿನ ಈ ದೋಷಗಳ ನಿವಾರಣೆ ತುರ್ತಿನದು. ಲೈಂಗಿಕ ಅಪರಾಧಗಳನ್ನು ವಿಕೃತಗೊಳಿಸಲು ನೆರವಾಗುತ್ತಿರುವ ತಂತ್ರಜ್ಞಾನ ದುರುಪಯೋಗ ತಡೆಗೆ ಸೈಬರ್ ಕಾನೂನುಗಳನ್ನು ಬಲಗೊಳಿಸಿ ಅನುಷ್ಠಾನಗೊಳಿಸುವುದೂ ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.